ಬೆಳಗಾವಿ: ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದ್ದು, ಬಿಜೆಪಿ ನೇತೃತ್ವದಲ್ಲಿ ಕಬ್ಬಡ್ಡಿ ಪಂದ್ಯಾವಳಿ ನಡೆಸಿದರೆ ದುಷ್ಕರ್ಮಿಗಳು ಹಲ್ಲೆ ನಡೆಸುತ್ತಿದ್ದಾರೆ. ಇದಕ್ಕೆ ರಾಜಕೀಯ ಕುಮ್ಮಕ್ಕು ಇದೆ ಎಂದು ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ದೂರಿದ್ದಾರೆ.
ಭದ್ರಾವತಿಯಲ್ಲಿ ಇತ್ತೀಚೆಗೆ ಇಸ್ಪೀಟ್ ದಂಧೆ, ಗಾಂಜಾ ಮತ್ತಿತರ ಮಾದಕ ವಸ್ತುಗಳ ದಂಧೆಯೂ ಹೆಚ್ಚಾಗಿದೆ. ಕಾನೂನು ಸುವ್ಯವಸ್ಥೆ ಸತ್ತು ಹೋಗಿದೆ. ಪೊಲೀಸ್ ಇಲಾಖೆ ಕೈಕಟ್ಟಿ ಕುಳಿತಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಬಿಜೆಪಿ ಕಾರ್ಯಕರ್ತ ಗೋಕುಲ ಎಂಬುವರ ಮೇಲೆ ಹಲ್ಲೆ ನಡೆದಿದೆ. ಅವರ ಕಾರನ್ನೂ ಹಾಳು ಮಾಡಲಾಗಿದೆ. ಇವರನ್ನು ಭದ್ರಾವತಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಅಲ್ಲಿ ಅವರ ಮೇಲೆ ಹಲ್ಲೆ ನಡೆಸುವ ಅಪಾಯ ಇದ್ದ ಕಾರಣ ಶಿವಮೊಗ್ಗ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಈ ಹಲ್ಲೆಯ ಹಿಂದೆ ಭದ್ರಾವತಿಯ ರಾಜಕಾರಣಿಯೊಬ್ಬರ ಕುಟುಂಬದ ಕೈವಾಡವೂ ಇದೆ ಎಂದರು.
ಭದ್ರಾವತಿ ಕಾಡಿನ ಮಧ್ಯೆ ಇರುವ ದೊಡ್ಡೇರಿ ದೇವಸ್ಥಾನದ ಸುತ್ತ, ಶಿವಪುರ ದೇವಸ್ಥಾನ ಮತ್ತು ಸೀತಾರಾಂಪುರ ಕಾಡಿನ ನಡುವೆ ಅಕ್ರಮ ದಂಧೆಗಳು ನಡೆಯುತ್ತಿದ್ದರೂ ಅರಣ್ಯ ಇಲಾಖೆ ಕಣ್ಣು ಮುಚ್ಚಿ ಕುಳಿತಿದೆ. ತಕ್ಷಣವೇ ಇದಕ್ಕೆ ಕಡಿವಾಣ ಹಾಕಬೇಕು. ಇವೆಲ್ಲದರ ಕುರಿತು ಗೃಹ ಸಚಿವರಿಗೆ ಪತ್ರ ಬರೆದಿರುವುದಾಗಿಯೂ ಅವರು ತಿಳಿಸಿದರು.
ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್ ಸುದ್ದಿಗೋಷ್ಠಿಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.