ಬೆಂಗಳೂರು: ‘ರೈತರು ಸಾಲ ಮರುಪಾವತಿಸಲು ವಿಫಲರಾದರೆ, ಸಾಲ ಮರು ಪಾವತಿಸುವಂತೆ ತಿಳಿವಳಿಕೆ ಪತ್ರ ನೀಡಬೇಕು. ಆ ಬಳಿಕವೂ ಸಾಲ ಮರು ಪಾವತಿಸದೇ ಇದ್ದರೆ ಅವರ ವಿರುದ್ಧ ದಾವೆ ದಾಖಲಿಸಬೇಕು’ ಎಂದು ಸಹಕಾರಿ ಸಂಘಗಳು, ಬ್ಯಾಂಕುಗಳು ಮತ್ತು ಸಹಕಾರ ಇಲಾಖೆಯ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.
ಸುಸ್ತಿಯಾದ ಅಲ್ಪಾವಧಿ ಕೃಷಿ ಸಾಲಗಳನ್ನು ರೈತರಿಂದ ವಸೂಲು ಮಾಡಲು ಸಹಕಾರ ಸಂಘಗಳು ಮತ್ತು ಬ್ಯಾಂಕುಗಳಿಗೆ ಅನುಮತಿ ನೀಡುವ ಸಂಬಂಧ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್, ರಾಜ್ಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳ (ಡಿಸಿಸಿ) ವ್ಯವಸ್ಥಾಪಕ ನಿರ್ದೇಶಕರಿಗೆ ಸಹಕಾರ ಇಲಾಖೆಯು ಅ. 14ರಂದು ಈ ಸೂಚನೆ ನೀಡಿದೆ.
ಸಹಕಾರ ಸಂಘಗಳ ನಿಬಂಧಕ ಟಿ.ಎಚ್.ಎಂ. ಕುಮಾರ್ ಅವರು ಈ ಪತ್ರವನ್ನು ಬರೆದಿದ್ದಾರೆ. ಅವರು ಎಲ್ಲ ಸಹಕಾರ ಸಂಘಗಳ ಜಂಟಿ ನಿಬಂಧಕರು, ಉಪ ನಿಬಂಧಕರು ಮತ್ತು ಸಹಾಯಕ ನಿಬಂಧಕರಿಗೂ ಈ ಪತ್ರವನ್ನು ರವಾನಿಸಿದ್ದಾರೆ.
ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರ ಅಧ್ಯಕ್ಷತೆಯಲ್ಲಿ ಸಹಕಾರ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ಅ. 8 ಮತ್ತು 9ರಂದು ವಿಕಾಸಸೌಧದಲ್ಲಿ ನಡೆದಿತ್ತು. ಸುಸ್ತಿಯಾದ ಅಲ್ಪಾವಧಿ ಕೃಷಿ ಸಾಲಗಳ ಕುರಿತು ಈ ಸಭೆಯಲ್ಲಿ ಗಂಭೀರ ಚರ್ಚೆ ನಡೆದಿದೆ. ಈ ಸಭೆಯ ನಡಾವಳಿಯನ್ನು ಉಲ್ಲೇಖಿಸಿ ಟಿ.ಎಚ್.ಎಂ. ಕುಮಾರ್ ಅವರು ಈ ನಿರ್ದೇಶನ ನೀಡಿದ್ದಾರೆ.
ಸುಸ್ತಿಯಾದ ಸಾಲಗಳ ವಸೂಲಾತಿಗೆ ಸಂಬಂಧಿಸಿದಂತೆ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 70–ಎ ಅಡಿ ದಾವೆ ದಾಖಲಿಸಲು ಗರಿಷ್ಠ ಆರು ವರ್ಷಗಳ ಮಿತಿ ಇರುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದಿದೆ. ಮಿತಿ ಮೀರಿದ ಪ್ರಕರಣಗಳಲ್ಲಿ ದಾವೆ ದಾಖಲಿಸಲೇಬೇಕಾದ ಅನಿವಾರ್ಯದ ಬಗ್ಗೆಯೂ ಸಮಾಲೋಚನೆ ನಡೆದಿದೆ. ಸಚಿವರು ಅಲ್ಪಾವಧಿ ಕೃಷಿ ಸಾಲ ಪಡೆದು ಸುಸ್ತಿಯಾದ ರೈತರಿಗೆ ನೋಟಿಸ್‌ಗಳನ್ನು ನೀಡದೆ, ಮೊದಲ ಹಂತದಲ್ಲಿ ತಿಳಿವಳಿಕೆ ಪತ್ರಗಳನ್ನು ಮಾತ್ರ ನೀಡುವಂತೆ ಸಭೆಯಲ್ಲಿ ಸೂಚನೆ ನೀಡಿದ್ದರು.
ತಿಳಿವಳಿಕೆ ಪತ್ರ ನೀಡಿದ ನಂತರವೂ ರೈತರು ಸಾಲ ಮರು ಪಾವತಿಸದೇ ಇದ್ದರೆ ಸಹಕಾರ ಸಂಘಗಳ ಕಾಯ್ದೆ 1959 ರ ಕಲಂ 70ರಡಿ ದಾವೆ ದಾಖಲಿಸಿ, ಅವಾರ್ಡ್ (ಕಾನೂನು ಪ್ರಕಾರ ಕ್ರಮ) ಪಡೆಯಲು, ನಂತರ ಅಮಲ್ಜಾರಿ (ವಸೂಲಾತಿಗೆ ಕ್ರಮ) ಅರ್ಜಿ ದಾಖಲಿಸಬೇಕು. ಆದರೆ, ರೈತರ ಆಸ್ತಿ ಹರಾಜು ಪ್ರಕ್ರಿಯೆಯನ್ನು ಕೈಗೊಳ್ಳಬಾರದು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದೂ ಸಚಿವರು ತಿಳಿಸಿದ್ದರು.
ಸಚಿವರು ಸಭೆಯಲ್ಲಿ ನೀಡಿರುವ ಸೂಚನೆಯಂತೆ ಸಹಕಾರ ಸಂಘಗಳು, ಬ್ಯಾಂಕುಗಳು ಮತ್ತು ಇಲಾಖೆಯ ಅಧಿಕಾರಿಗಳಿಗೆ ಈ ಸೂಚನೆ ನೀಡಲಾಗಿದೆ ಎಂದೂ ಪತ್ರದಲ್ಲಿ ಕುಮಾರ್ ಅವರು ಉಲ್ಲೇಖಿಸಿದ್ದಾರೆ.
ಪತ್ರದಲ್ಲಿರುವ ಸೂಚನೆಗಳೇನು?
ನಿಗದಿತ ಗಡುವು ದಿನಾಂಕದ ಪೂರ್ವದಲ್ಲಿ ಅಸಲು ಮರುಪಾವತಿಸಿ, ಸರ್ಕಾರದ ಬಡ್ಡಿ ಸಹಾಯಧನದ ಲಾಭ ಪಡೆದುಕೊಳ್ಳಿ ಎಂದು ಗಡುವು ದಿನಾಂಕಕ್ಕಿಂತ ಮೊದಲೇ ರೈತರಿಗೆ ತಿಳಿವಳಿಕೆ ಪತ್ರ ನೀಡಬೇಕು
ರೈತರು ಸಾಲ ಮರುಪಾವತಿಸಲು ವಿಫಲರಾಗಿ ಸುಸ್ತಿಯಾದರೆ, ಸಾಲ ಮರುಪಾವತಿಸುವಂತೆ ತಿಳಿವಳಿಕೆ ಪತ್ರಗಳನ್ನು ನೀಡಬೇಕು. ನೋಟಿಸ್ ನೀಡಬಾರದು
ತಿಳಿವಳಿಕೆ ಪತ್ರ ನೀಡಿದ ನಂತರವೂ ಸಾಲ ಮರುಪಾವತಿಸದೇ ಇದ್ದರೆ ಮಾತ್ರ ಸಹಕಾರ ಸಂಘಗಳ ಕಾಯ್ದೆ ಕಲಂ 70ರಡಿ ದಾವೆ ದಾಖಲಿಸಬೇಕು
ದಾವೆ ದಾಖಲಿಸಿ, ಅವಾರ್ಡ್ ಪಡೆದ ನಂತರ ಅಮಲ್ಜಾರಿ ಅರ್ಜಿ ದಾಖಲಿಸಬೇಕು. ಆದರೆ, ಆಸ್ತಿ ಹರಾಜಿನ ಪ್ರಕ್ರಿಯೆ ಕೈಗೊಳ್ಳಬಾರದು
ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಿರ್ಣಯದಂತೆ, ಸುಸ್ತಿಯಾದ ಸಾಲ ಮರುಪಾವತಿಸುವಂತೆ ರೈತರಿಗೆ ತಿಳಿವಳಿಕೆ ಪತ್ರ ನೀಡಲಾಗುತ್ತದೆ. ಅದೇನೂ ನೋಟಿಸ್ ಅಲ್ಲ.–ಟಿ.ಎಚ್.ಎಂ. ಕುಮಾರ್, ಸಹಕಾರ ಸಂಘಗಳ ನಿಬಂಧಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.