ADVERTISEMENT

ಮಹಿಳೆಯರಿಗೆ ಶೇ 50 ಮೀಸಲಾತಿಗೆ‌ ನಮ್ಮ ತಕರಾರಿಲ್ಲ: ಸಿಎಂ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2024, 22:19 IST
Last Updated 19 ನವೆಂಬರ್ 2024, 22:19 IST
ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸುಗಂಧಿ ಗಂಗಾಧರ್, ಮಾಲತಿ ಶರ್ಮಾ, ಪ್ಯಾರೇಜಾನ್, ಮಮತಾ ಯಜಮಾನ್ ಮತ್ತು ಸೋನು ವೇಣುಗೋಪಾಲ್ ಅವರಿಗೆ ಇಂದಿರಾಗಾಂಧಿ ಸ್ಮಾರಕ ಗೌರವ ಪ್ರಶಸ್ತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿದರು. ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯಾ ರೆಡ್ಡಿ ಪಾಲ್ಗೊಂಡಿದ್ದರು – ಪ್ರಜಾವಾಣಿ ಚಿತ್ರ
ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸುಗಂಧಿ ಗಂಗಾಧರ್, ಮಾಲತಿ ಶರ್ಮಾ, ಪ್ಯಾರೇಜಾನ್, ಮಮತಾ ಯಜಮಾನ್ ಮತ್ತು ಸೋನು ವೇಣುಗೋಪಾಲ್ ಅವರಿಗೆ ಇಂದಿರಾಗಾಂಧಿ ಸ್ಮಾರಕ ಗೌರವ ಪ್ರಶಸ್ತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿದರು. ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯಾ ರೆಡ್ಡಿ ಪಾಲ್ಗೊಂಡಿದ್ದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಸಂಸತ್ತು, ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇ 50ರಷ್ಟು ಮೀಸಲಾತಿ ನೀಡಲು ನಮ್ಮ (ಕಾಂಗ್ರೆಸ್) ತಕರಾರಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ಮಹಿಳಾ ಕಾಂಗ್ರೆಸ್ ಸಹಯೋಗದಲ್ಲಿ ಮಂಗಳವಾರ ನಡೆದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಮಹಿಳೆಯರಿಗೆ 2028ರಲ್ಲಿ ಮೀಸಲಾತಿ ನೀಡುವುದಾಗಿ ಹೇಳುವ ನರೇಂದ್ರ ಮೋದಿ, ಅದನ್ನು ಈಗಲೇ ಮಾಡಬಹುದಿತ್ತು. ಅದಕ್ಕೆ ರಾಜಕೀಯ ಇಚ್ಛಾಶಕ್ತಿ ಮತ್ತು ಬದ್ಧತೆಯ ಅಗತ್ಯವಿದೆ’ ಎಂದರು.

‘ನಮಗೆ ಅಧಿಕಾರ ವಿಕೇಂದ್ರೀಕರಣದಲ್ಲಿ ನಂಬಿಕೆಯಿದ್ದರೆ, ಬಿಜೆಪಿಗೆ ಕೇಂದ್ರೀಕೃತ ವ್ಯವಸ್ಥೆಯಲ್ಲಿ ನಂಬಿಕೆ ಇದೆ. ನರೇಂದ್ರ ಮೋದಿ ಪ್ರಧಾನಿಯಾದ ನಂತರ ಆರ್ಥಿಕ ಅಧಿಕಾರ ಕೇಂದ್ರೀಕೃತಗೊಳ್ಳುತ್ತಿದೆ. ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಇಲ್ಲದೇ ಹೋಗಿದ್ದರೆ ಈ ದೇಶದಲ್ಲಿ ಅಧಿಕಾರ ವಿಕೇಂದ್ರೀಕರಣ ಆಗಲು ಸಾಧ್ಯವಾಗುತ್ತಿರಲಿಲ್ಲ’ ಎಂದರು.

ADVERTISEMENT

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ‘ಕಾಂಗ್ರೆಸ್ ಸರ್ಕಾರ ಮತ್ತು ಇಂದಿರಾ ಗಾಂಧಿ ಜಾರಿಗೆ ತಂದಿರುವ ಉಳುವವನೆ ಭೂಮಿಯ ಒಡೆಯ, ಪಿಂಚಣಿ, ಮಧ್ಯಾಹ್ನದ ಬಿಸಿಯೂಟ, ಪಡಿತರ ವ್ಯವಸ್ಥೆ ಸೇರಿದಂತೆ ಅನೇಕ ಯೋಜನೆಗಳನ್ನು ಯಾರಿಂದಲೂ ಹಾಗೂ ಯಾವುದೇ ಸರ್ಕಾರದಿಂದ ನಿಲ್ಲಿಸಲು ಸಾಧ್ಯವಿಲ್ಲ’ ಎಂದರು.

ಆಹಾರ ಸಚಿವ ಕೆ.ಎಚ್‌. ಮುನಿಯಪ್ಪ, ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್, ಕಾಂಗ್ರೆಸ್ ಮುಖಂಡರಾದ ವೀರಪ್ಪ ಮೊಯಿಲಿ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯಾ ರೆಡ್ಡಿ, ಮಾಜಿ ಸಚಿವರಾದ ರಾಣಿ ಸತೀಶ್, ಎಚ್.ಎಂ. ರೇವಣ್ಣ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.