ಬೆಂಗಳೂರು: ಕೋವಿಡ್‌ನಿಂದ ಮೃತಪಟ್ಟ ರೈತರು ಸಹಕಾರ ಸಂಸ್ಥೆಗಳಿಂದ ಪಡೆದಿರುವ ಸಾಲವನ್ನು ಮನ್ನಾ ಮಾಡಲು ಯಾವುದೇ ಆದೇಶ ಹೊರಡಿಸಿಲ್ಲ. ನಿರ್ಧಾರ ಕೈಗೊಳ್ಳುವ ಅವಕಾಶವನ್ನು ಆಯಾ ಸಹಕಾರ ಸಂಸ್ಥೆಗಳಿಗೆ ನೀಡಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು.
ವಿಧಾನ ಪರಿಷತ್‌ನಲ್ಲಿ ಬಿಜೆಪಿಯ ಮುನಿರಾಜು ಗೌಡ ಪಿ.ಎಂ. ಪ್ರಶ್ನೆಗೆ ಮಂಗಳವಾರ ಉತ್ತರಿಸಿದ ಅವರು, ‘ಕೋವಿಡ್‌ನಿಂದ ಮೃತಪಟ್ಟ ರೈತರಲ್ಲಿ 10,437 ಮಂದಿ ವಿವಿಧ ಸಹಕಾರ ಸಂಸ್ಥೆಗಳಿಂದ ₹ 91.97 ಕೋಟಿ ಸಾಲ ಪಡೆದಿದ್ದಾರೆ. ಲಾಭದಲ್ಲಿರುವ ಸಹಕಾರ ಸಂಸ್ಥೆಗಳು ತಮ್ಮ ಲಾಭಾಂಶವನ್ನು ಬಳಸಿಕೊಂಡು, ಅವರ ಸಾಲ ಮನ್ನಾ ಮಾಡಬಹುದು ಎಂಬ ಸೂಚನೆ ನೀಡಲಾಗಿದೆ. ಕೆಲವು ಸಹಕಾರ ಸಂಸ್ಥೆಗಳು ತಮ್ಮ ಆರ್ಥಿಕ ಶಕ್ತಿಗೆ ಅನುಸಾರವಾಗಿ ನಿರ್ಧಾರ ಕೈಗೊಂಡಿವೆ’ ಎಂದರು.
ರೈತರು ಸಹಕಾರ ಸಂಸ್ಥೆಗಳಿಂದ ಪಡೆದಿರುವ ಬೆಳೆ ಸಾಲದ ಮರುಪಾವತಿ ಅವಧಿಯನ್ನು ಜೂನ್ 1ರವರೆಗೂ ವಿಸ್ತರಿಸಲಾಗಿದೆ. ಈ ಅವಧಿಯ ₹ 131 ಕೋಟಿ ಬಡ್ಡಿಯನ್ನು ರಾಜ್ಯ ಸರ್ಕಾರ ಭರಿಸಲಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.