ನವದೆಹಲಿ: ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ 5, 8 ಮತ್ತು 9ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆ ನಡೆಸಲು ಕರ್ನಾಟಕ ಸರ್ಕಾರಕ್ಕೆ ಅನುಮತಿಯಿಲ್ಲ ಎಂದಿರುವ ಸುಪ್ರೀಂಕೋರ್ಟ್, ‘ ಜನರನ್ನು ಶೋಷಣೆ ಮಾಡಲು ರಾಜ್ಯ ಸರ್ಕಾರ ಪಣ ತೊಟ್ಟಿರುವುದು ಏಕೆ’ ಎಂದು ಮಂಗಳವಾರ ಪ್ರಶ್ನಿಸಿದೆ.
8, 9 ಮತ್ತು 10 ನೇ ತರಗತಿಗಳ 2024–25ನೇ ಸಾಲಿನ ವೇಳಾಪಟ್ಟಿಗೆ ಸಂಬಂಧಿಸಿದಂತೆ ಪರೀಕ್ಷೆ ನಡೆಸಲು ಸೆಪ್ಟೆಂಬರ್ 4 ಮತ್ತು 15ರಂದು ಹೊರಡಿಸಿದ ಆದೇಶವನ್ನು ಹಿಂಪಡೆಯಲಾಗಿದೆ ಎಂದು ರಾಜ್ಯ ಸರ್ಕಾರವು ನ್ಯಾಯಾಲಯಕ್ಕೆ ಹೇಳಿಕೆ ನೀಡಿತು. ನಂತರ ನ್ಯಾಯಮೂರ್ತಿಗಳಾದ ಬೇಲಾ ಎಂ. ತ್ರಿವೇದಿ ಮತ್ತು ಸತೀಶ್ ಚಂದ್ರ ಶರ್ಮ ಅವರಿದ್ದ ವಿಭಾಗೀಯ ಪೀಠವು ಈ ಸಂಬಂಧ ಮಾಹಿತಿ ಪಡೆಯುವಂತೆ ಅರ್ಜಿದಾರರ ವಕೀಲ ಕೆ.ವಿ.ಧನಂಜಯರ್ ಅವರಿಗೆ ಸೂಚನೆ ನೀಡಿತು.
‘ಪ್ರಕರಣ ಸಂಬಂಧ ನ್ಯಾಯಾಂಗ ನಿಂದನೆ ಅರ್ಜಿ ದಾಖಲಾಗುವ ಮೊದಲೇ ಸರ್ಕಾರ ಅಧಿಸೂಚನೆಯನ್ನು ಹಿಂಪಡೆದಿದೆ. ಯಾವುದಾದರೂ ಪರೀಕ್ಷೆ ನಡೆದಿದ್ದರೂ ಕೂಡ, ಅದರ ಫಲಿತಾಂಶ ಪ್ರಕಟಿಸುವುದಿಲ್ಲ’ ಎಂದು ಕರ್ನಾಟಕ ಸರ್ಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿದರು.
ಆದರೆ, ಅರ್ಜಿದಾರರ ಪರ ವಕೀಲರು, ‘ಮಧ್ಯಂತರ ತಡೆಯಾಜ್ಞೆ ಇದ್ದರೂ ಕರ್ನಾಟಕ ಸರ್ಕಾರವು ಪರೀಕ್ಷೆಗಳನ್ನು ನಡೆಸಿದೆ. ಈ ಸಂಬಂಧ ಫಲಿತಾಂಶ ಪ್ರಕಟಿಸಬೇಕಾದಲ್ಲಿ ಪೋಷಕರಿಗೆ ಮಾಹಿತಿ ನೀಡಬೇಕು’ ಎಂದರು.
ಆಗ ನ್ಯಾಯಪೀಠ, ‘ರಾಜ್ಯ ಸರ್ಕಾರವು ಜನರನ್ನು ಶೋಷಣೆ ಮಾಡಲು ಪಣ ತೊಟ್ಟಿದೆಯೇಕೆ. ಇಲ್ಲಿ ಅಹಂನ ಪ್ರಶ್ನೆ ಎದುರಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿತು.
ಆಗ ಮೆಹ್ತಾ ಉತ್ತರಿಸಿ, ‘ಕೆಲ ಪ್ರದೇಶಗಳಲ್ಲಿ ಪರೀಕ್ಷೆಗಳು ನಡೆದಿದ್ದರೂ, ಮಕ್ಕಳು ಪಡೆದಿರುವ ಸರಾಸರಿ ಅಂಕವು 50ಕ್ಕಿಂತ ಕಡಿಮೆಯಿದೆ’ ಎಂದು ವಿವರಿಸಿದರು.
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 5,8 ಹಾಗೂ 9 ನೇ ತರಗತಿಗೆ ಬೋರ್ಡ್ ಪರೀಕ್ಷೆಗಳನ್ನು ನಡೆಸುವ ಪ್ರಸ್ತಾವನೆಯ ಕುರಿತು ಮಾಹಿತಿ ಇರುವುದಾಗಿ ತಿಳಿಸಿದ ನ್ಯಾಯಪೀಠ, ನ್ಯಾಯಾಲಯದ ಆದೇಶ ಉಲ್ಲಂಘಿಸುವಂತಹ ಯಾವುದೇ ಹೆಜ್ಜೆ ಇಡದಂತೆ ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.