ಮೈಸೂರು: ‘ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡುವ ಸಮಾರಂಭವನ್ನು ಬೆಳಗಾವಿಯಿಂದ ಮೈಸೂರಿಗೆ ಸ್ಥಳಾಂತರಿಸಿದ ವಿಚಾರದಲ್ಲಿ ಯಾವ ರಾಜಕೀಯವೂ ಇಲ್ಲ. ಅಲ್ಲಿ ಇನ್ನೊಂದು ಕಾರ್ಯಕ್ರಮಕ್ಕೆ ಯೋಜಿಸುತ್ತಿದ್ದೇವೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಇಲ್ಲಿನ ಮಂಡಕಳ್ಳಿ ವಿಮಾನನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಗುರುವಾರ ಮಾತನಾಡಿದ ಅವರು, ‘ಎಲ್ಲರ ಒಮ್ಮತದ ತೀರ್ಮಾನದಂತೆ ಮೈಸೂರಿನಲ್ಲಿ ಕಾರ್ಯಕ್ರಮ ಮಾಡುತ್ತಿದ್ದೇವೆ. ಆ ಜಿಲ್ಲೆಯಲ್ಲಿ ಯಾವುದೇ ಗೊಂದಲವಿಲ್ಲ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅಲ್ಲಿ ಎರಡು ಲೋಕಸಭಾ ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ’ ಎಂದು ಹೇಳಿದರು.
‘ಮೈಸೂರಿನಲ್ಲಿ ಅನ್ನಭಾಗ್ಯ ಯೋಜನೆ ಕಾರ್ಯಕ್ರಮಕ್ಕೆ ಯೋಜಿಸಿದ್ದೆವು. ಆದರೆ, ಅಕ್ಕಿ ವಿಚಾರದಲ್ಲಿ ಒಂದಷ್ಟು ಅಡೆತಡೆ ಇವೆ. ಹೀಗಾಗಿ ಗೃಹಲಕ್ಷ್ಮಿ ಯೋಜನೆ ಇಲ್ಲಿಂದ ಆರಂಭಿಸುತ್ತಿದ್ದೇವೆ’ ಎಂದರು.
‘ಆ.30ರಂದು ಚಾಲನೆ ನೀಡುತ್ತಿದ್ದಂತೆಯೇ ಫಲಾನುಭವಿಗಳಿಗೆ ಹಣ ಸಂದಾಯವಾಗುತ್ತದೆ. ಅವರವರ ಮೊಬೈಲ್ ಸಂಖ್ಯೆಗೆ ಸಂದೇಶ ಬರುತ್ತದೆ. ಹಣದ ಕೊರತೆ ಇಲ್ಲ. ಈಗಾಗಲೇ ಬ್ಯಾಂಕ್‌ಗಳಲ್ಲಿ ಠೇವಣಿ ಮಾಡಲಾಗಿದೆ. ಸರ್ವರ್ ಸಮಸ್ಯೆಯಾದರೆ ಒಂದಿಷ್ಟು ಜನರಿಗೆ ಹಣ ಬರುವುದು ತಡವಾಗಬಹುದಷ್ಟೆ’ ಎಂದು ತಿಳಿಸಿದರು.
‘ನಾವು ಅಪರೇಷನ್ ಹಸ್ತ ಮಾಡುತ್ತಿಲ್ಲ. ಕೆಲವರು ಪಕ್ಷಕ್ಕೆ ಬರುವುದಾಗಿ ಅವರಾಗಿಯೇ ಹೇಳುತ್ತಿದ್ದಾರೆ. ಬರುವವರಿಗೆ ಸ್ವಾಗತ ಕೋರುತ್ತಿದ್ದೇವೆ. ನಾವಾಗಿಯೇ ಯಾರನ್ನೂ ಕರೆತರಲು ಪ್ರಯತ್ನಿಸಿಲ್ಲ. ಭವಿಷ್ಯ, ನಮ್ಮ ಪಕ್ಷದ ವರ್ಚಸ್ಸು ಎಲ್ಲವನ್ನೂ ಗಮನಿಸಿಕೊಂಡು ಅವರೇ ತೀರ್ಮಾನ ಮಾಡುತ್ತಿದ್ದಾರೆ. ಎಷ್ಟು ಜನ ಬರುತ್ತಾರೆ ಎಂಬುದನ್ನು ಈಗಲೇ ಹೇಳಲಾಗದು. ಕಾಲ ಬಂದಾಗ ಎಲ್ಲವೂ ನಡೆಯುತ್ತದೆ’ ಎಂದು ಪ್ರತಿಕ್ರಿಯಿಸಿದರು.
‘ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಈಗ ಅವರದ್ದೇ ಮಧ್ಯಪ್ರದೇಶ ಸರ್ಕಾರ ನಮ್ಮ ಮಾದರಿಯಲ್ಲಿ ಗ್ಯಾರಂಟಿ ಯೋಜನೆ ಜಾರಿಗೊಳಿಸಿದೆ. ಇದಕ್ಕೆ ಪ್ರಧಾನಿ ಏನು ಹೇಳುತ್ತಾರೆ? ನಮ್ಮ ಕಾರ್ಯಕ್ರಮಗಳು ದೇಶದೆಲ್ಲೆಡೆ ಸದ್ದು ಮಾಡುತ್ತಿವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.