ADVERTISEMENT

24 ಗಂಟೆ ಗಣಿಗಾರಿಕೆ ನಡೆಸುವ ಪ್ರಸ್ತಾವವೇ ಇಲ್ಲ: ಕೈಗಾರಿಕೆ ಇಲಾಖೆ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2024, 23:06 IST
Last Updated 11 ನವೆಂಬರ್ 2024, 23:06 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ‘ರಾಜ್ಯದ ಅರಣ್ಯಪ್ರದೇಶ ದಲ್ಲಿ 24x7 ಗಣಿಗಾರಿಕೆ ನಡೆಸುವ ಕುರಿತು ಮುಖ್ಯಮಂತ್ರಿಯವರಿಗೆ ಯಾವುದೇ ಪ್ರಸ್ತಾವ ಸಲ್ಲಿಸಿಲ್ಲ’ ಎಂದು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ (ಗಣಿ) ಕಾರ್ಯದರ್ಶಿ ಮಂಜುನಾಥ್ ಎಚ್‌.ಎಂ ತಿಳಿಸಿದ್ದಾರೆ.

‘ಪರಿಸರ ಸೂಕ್ಷ್ಮವಲಯ ಮತ್ತು ವನ್ಯಜೀವಿ ಧಾಮಗಳ ವ್ಯಾಪ್ತಿಯನ್ನು ಬಿಟ್ಟು ಉಳಿದ ಕಡೆಗಳಲ್ಲಿ  24x7 ಗಣಿಗಾರಿಕೆಗೆ ಅನುಮತಿ ನೀಡುವ ಕುರಿತು ನಿಯಮಾನುಸಾರ ಪರಿಶೀಲಿಸಿ ಕ್ರಮ ವಹಿಸಲು ಅರಣ್ಯ ಇಲಾಖೆಗೆ ಕೋರಲಾಗಿದೆ. ಈ ನಿಟ್ಟಿನಲ್ಲಿ, ಸುಪ್ರೀಂ ಕೋರ್ಟ್‌ ಕಾಲ ಕಾಲಕ್ಕೆ ಹೊರಡಿಸಿರುವ ಆದೇಶ ಮತ್ತು ನಿಯಮಗಳಲ್ಲಿ ಕಲ್ಪಿಸಲಾದ ಅವಕಾಶಗಳನ್ನು ಗಮನದಲ್ಲಿಟ್ಟುಕೊಂಡು ಇಲಾಖೆ ಪರಿಶೀಲನೆ ನಡೆಸಲಿದೆ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

‘ಭಾರತ ಸರ್ಕಾರದ ಅರಣ್ಯ ಕಾಯ್ದೆಯಲ್ಲಿ ಕಬ್ಬಿಣದ ಅದಿರನ್ನು ಅರಣ್ಯ ಉತ್ಪನ್ನವೆಂದು ಪರಿಗಣಿಸಿಲ್ಲ. ಬೇರೆ ರಾಜ್ಯಗಳಲ್ಲೂ ಕಬ್ಬಿಣ ಅದಿರು ಅರಣ್ಯ ಉತ್ಪನ್ನವಲ್ಲವೆಂದು ಪರಿಗಣಿಸಿರುವ ಕುರಿತು ಹಾಗೂ ವನ್ಯಜೀವಿಧಾಮ ಮತ್ತು ಪರಿಸರ ಸೂಕ್ಷ್ಮ ವಲಯವನ್ನು ಗಮನದಲ್ಲಿಟ್ಟುಕೊಂಡು ಈ ವಿಷಯವನ್ನು ಪರಿಶೀಲಿಸಲು ಅರಣ್ಯ ಇಲಾಖೆಯನ್ನು ಕೋರಲಾಗಿದೆ’ ಎಂದೂ ಹೇಳಿದ್ದಾರೆ.

‘ಯಾವುದೇ ರಾಜ್ಯದಲ್ಲಿಯೂ ಅರಣ್ಯ ಪ್ರದೇಶಗಳಲ್ಲಿ ಗಣಿಗಾರಿಕೆಯ ಅವಧಿಗೆ ನಿರ್ಬಂಧ ವಿಧಿಸಿರುವುದಿಲ್ಲ. ಈಗ ಜಾರಿಯಲ್ಲಿರುವ ಕೇಂದ್ರ ಸರ್ಕಾರದ ಕಾಯ್ದೆ ಹಾಗೂ ನಿಯಮಗಳಲ್ಲೂ ನಿರ್ಬಂಧ ಇರುವುದಿಲ್ಲ. ಆದರೆ, ಕರ್ನಾಟಕ ರಾಜ್ಯದಲ್ಲಿ ಮಾತ್ರ ಅರಣ್ಯ ಪ್ರದೇಶಗಳಲ್ಲಿ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮಾತ್ರ ಅರಣ್ಯ ಪ್ರದೇಶಗಳಲ್ಲಿ ನಿರ್ಬಂಧ ವಿಧಿಸಲಾಗಿದೆ. ಇದರಿಂದ ನಿಗದಿಪಡಿಸಿದ ಪ್ರಮಾಣವನ್ನು ಉತ್ಪಾದನೆ ಮತ್ತು ಸಾಗಣೆ ಮಾಡುವುದು ಕಷ್ಟವಾಗಿದೆ ಎಂದು ಗುತ್ತಿಗೆದಾರರು ಸರ್ಕಾರಕ್ಕೆ ಸಲ್ಲಿಸಿದ ಮನವಿಯಲ್ಲಿ ಹೇಳಿದ್ದರು’ ಎಂದು ಮಂಜುನಾಥ್‌ ವಿವರಿಸಿದ್ದಾರೆ.

‘ಸರ್ಕಾರಕ್ಕೆ ಸಾರ್ವಜನಿಕರಿಂದ ಅಥವಾ ಗಣಿ ಗುತ್ತಿಗೆದಾರರಿಂದ ಮನವಿಗಳು ಸ್ವೀಕೃತವಾದಲ್ಲಿ ಅಂತಹ ಮನವಿಗಳನ್ನು ಸರ್ಕಾರದ ವ್ಯವಸ್ಥೆಯಡಿ ವಿವಿಧ ಹಂತಗಳಲ್ಲಿ ಕಾಯ್ದೆ ಮತ್ತು  ನಿಯಮಗಳಲ್ಲಿನ ಅವಕಾಶದ ಅನ್ವಯ ಹಾಗೂ ನ್ಯಾಯಾಲಯಗಳ ನೀಡಿರುವ ನಿರ್ದೇಶನಗಳ ಅನುಸಾರ ಪರಿಶೀಲಿಸುವ ವ್ಯವಸ್ಥೆ ಇದೆ. ಪರಿಶೀಲಿಸುವ ಕ್ರಮವನ್ನು ಸರ್ಕಾರದ ಮುಂದಿರುವ ಪ್ರಸ್ತಾವಗಳೆಂದು ಪರಿಗಣಿಸಲು ಬರುವುದಿಲ್ಲ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.