ADVERTISEMENT

ಶಕ್ತಿ ಯೋಜನೆ ಪರಿಷ್ಕರಣೆ ಇಲ್ಲ, ಈಗ ಇರುವಂತೆಯೇ ಮುಂದುವರಿಕೆ: ಸಿಎಂ ಸಿದ್ದರಾಮಯ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಅಕ್ಟೋಬರ್ 2024, 9:00 IST
Last Updated 31 ಅಕ್ಟೋಬರ್ 2024, 9:00 IST
<div class="paragraphs"><p>ಮುಖ್ಯಮಂತ್ರಿ ಸಿದ್ದರಾಮಯ್ಯ</p></div>

ಮುಖ್ಯಮಂತ್ರಿ ಸಿದ್ದರಾಮಯ್ಯ

   

ಬೆಂಗಳೂರು: ಶಕ್ತಿ ಯೋಜನೆ ಪರಿಷ್ಕರಣೆ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ. ‘ಹಣಕೊಟ್ಟು ಪ್ರಯಾಣಿಸಲು ಸಿದ್ಧರಿದ್ದೇವೆ’ ಎಂಬ ಕೆಲ ಮಹಿಳೆಯರ ಅನಿಸಿಕೆಗಳನ್ನು ಉಪ ಮುಖ್ಯಮಂತ್ರಿ ಪ್ರಸ್ತಾಪಿಸಿದ್ದಾರೆ ಅಷ್ಟೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಸುದ್ದಿಗಾರರ ಜತೆ ಗುರುವಾರ ಮಾತನಾಡಿದ ಅವರು, ಶಕ್ತಿ ಯೋಜನೆ ಪುನರ್‌ಪರಿಷ್ಕರಿಸುವ ಅಥವಾ ಬದಲಾಯಿಸುವ ಯಾವುದೇ ಉದ್ದೇಶ ಸರ್ಕಾರಕ್ಕೆ ಇಲ್ಲ. ಈಗಿರುವ ಸ್ವರೂಪದಲ್ಲೇ ಯೋಜನೆ ಮುಂದುವರಿಯುತ್ತದೆ ಎಂದರು.

ADVERTISEMENT

‘ವಕ್ಫ್‌ ಮಂಡಳಿ ನೋಟಿಸ್‌ ವಿರೋಧಿಸಿ ನ. 4ರಂದು ಬಿಜೆಪಿ ಪ್ರತಿಭಟನೆ ಮಾಡುತ್ತಿರುವುದು ರಾಜಕೀಯ ಕಾರಣಗಳಿಗಾಗಿ ಅಷ್ಟೆ. ನೀಡಿರುವ ನೋಟಿಸ್‌ ವಾಪಸ್‌ ಪಡೆಯಲು ಸೂಚಿಸಿದ್ದೇವೆ. ಯಾವ ರೈತರನ್ನೂ ಒಕ್ಕಲೆಬ್ಬಿಸುವುದಿಲ್ಲ ಎಂಬ ಭರವಸೆ ನೀಡಿದ್ದೇವೆ. ಆದರೂ, ಬಿಜೆಪಿ ಪ್ರತಿಭಟನೆ ಏಕೆಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಮೂರು ಕ್ಷೇತ್ರಗಳ ಉಪ ಚುನಾವಣೆ, ಮಹಾರಾಷ್ಟ್ರದ ಚುನಾವಣೆ ಲಾಭಕ್ಕಾಗಿ ಅಪಪ್ರಚಾರ ನಡೆಸುತ್ತಿದ್ದಾರೆ’ ಎಂದು ದೂರಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ರೈತರಿಗೆ 200ಕ್ಕೂ ಹೆಚ್ಚು ನೋಟಿಸ್ ನೀಡಲಾಗಿದೆ. ಆ ಪಕ್ಷದ ನಾಯಕರು ಇಬ್ಬಂದಿ ರಾಜಕೀಯ ನಡೆ ಅನುಸರಿಸುತ್ತಿದ್ದಾರೆ. ಬಿಜೆಪಿ ಹಾಗೂ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಬರೀ ಸುಳ್ಳು ಹೇಳುವುದನ್ನೇ ಕೆಲಸ ಮಾಡಿಕೊಂಡಿದ್ದಾರೆ. ಮುಡಾ ಪ್ರಕರಣದಲ್ಲೂ ಇಂತಹ ಸುಳ್ಳುಗಳನ್ನೇ ಹರಿಬಿಟ್ಟರು ಎಂದು ಆರೋಪಿಸಿದರು.

ಶಿಗ್ಗಾವಿಯಲ್ಲಿ ಅಜ್ಜಂಪೀರ್‌ ಖಾದ್ರಿ ಅವರು ನಾಮಪತ್ರ ವಾಪಸ್‌ ಪಡೆದಿದ್ದು, ಉಪ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಶ್ರಮಿಸುತ್ತಾರೆ. ಸಂಡೂರು, ಚನ್ನಪಟ್ಟಣ ಸೇರಿ ಮೂರೂ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಅಭ್ಯರ್ಥಿಗಳೇ ಜಯಗಳಿಸುವರು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.