ADVERTISEMENT

ಜೈನಮುನಿ ಹತ್ಯೆ ಆರೋಪಿಗಳ ರಕ್ಷಣೆಯಿಲ್ಲ: ಗೃಹ ಸಚಿವ ಜಿ.ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 10 ಜುಲೈ 2023, 6:24 IST
Last Updated 10 ಜುಲೈ 2023, 6:24 IST
ಜಿ.ಪರಮೇಶ್ವರ
ಜಿ.ಪರಮೇಶ್ವರ   

ಹುಬ್ಬಳ್ಳಿ: 'ಚಿಕ್ಕೋಡಿಯ ಕಾಮಕುಮಾರ ಮುನಿ‌ ಹತ್ಯೆ ಪ್ರಕರಣದ ಆರೋಪಿಗಳನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಜವಾಬ್ದಾರಿ ಸ್ಥಾನದಲ್ಲಿ ಇರುವ ಕೇಂದ್ರ ಸಚಿವರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಇಲ್ಲಸಲ್ಲದ ಹೇಳಿಕೆ ನೀಡುವುದು ಸರಿಯಲ್ಲ' ಎಂದು ಗೃಹ ಸಚಿವ ಜಿ.‌ ಪರಮೇಶ್ವರ ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕಿನ ವರೂರು ನವಗೃಹ ತೀರ್ಥಕ್ಷೇತ್ರದಲ್ಲಿ ಸೋಮವಾರ ಗುಣಧರನಂದಿ ಮಹಾರಾಜರ ಜೊತೆ ಚರ್ಚಿಸಿ, ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

'ಮುನಿ ಹತ್ಯೆ ಪ್ರಕರಣಕ್ಕೆ ರಾಜಕೀಯ ಬಣ್ಣ ಹಚ್ಚಬಾರದು. ಯಾವುದೇ ಸರ್ಕಾರ ಇದ್ದರೂ, ಸೂಕ್ಷ್ಮವಾಗಿ ಸಮಸ್ಯೆ ಬಗೆಹರಿಸಲು ಜವಾಬ್ದಾರಿ ಸ್ಥಾನದಲ್ಲಿದ್ದವರು ಮುಂದಾಗಬೇಕು. ರಾಜಕೀಯ ಮಾಡುವುದಾದರೆ ಚುನಾವಣೆ ಸಂದರ್ಭದಲ್ಲಿ ಅಥವಾ ತತ್ವ ಸಿದ್ಧಾಂತದ ಮೇಲೆ ಮಾಡಲಿ. ಇಂತಹ ವಿಷಯವನ್ನು ಸರ್ಕಾರಕ್ಕೆ ಹಾಗೂ ಕಾನೂನಿಗೆ ಬಿಡಬೇಕು' ಎಂದರು.

ADVERTISEMENT

'ಮುನಿ ಹತ್ಯೆ ಪ್ರಕರಣ ಸಿಬಿಐ ತನಿಖೆಗೆ ಕೊಡುವ ಅಗತ್ಯವಿಲ್ಲ. ರಾಜ್ಯ ಪೊಲೀಸರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಪ್ರಕರಣದ ಆರೋಪಿಗಳನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ' ಎಂದು ಹೇಳಿದರು.

'ಎ1 ಮತ್ತು ಎ2 ಆರೋಪಿಗಳ ಹೆಸರನ್ನು ಅದಲು ಬದಲು ಮಾಡಲಾಗಿದೆ' ಎನ್ನುವ ಶಾಸಕ ಅಭಯ ಪಾಟೀಲ‌ ಆರೋಪಕ್ಕೆ ಪ್ರತಿಕ್ರಿಯಿಸಿದ ಜಿ.‌ಪರಮೇಶ್ವರ, 'ಪೊಲೀಸರು ಕಾನೂನು ವ್ಯಾಪ್ತಿಯಲ್ಲಿ ತನಿಖೆ ಕೈಗೊಂಡಿದ್ದಾರೆ. ಶಾಸಕರು ಆರೋಪಿಸಿದ್ದಾರೆ ಎಂದಾಗ ಸತ್ಯ ಆಗಬೇಕೆಂದಿಲ್ಲ. ಹಾಗೆಲ್ಲ ಹೇಳುವುದು ಸರಿಯಲ್ಲ. ತನಿಖೆಯ ನಂತರ ಎಲ್ಲವೂ ಬಹಿರಂಗವಾಗಲಿದೆ' ಎಂದರು.

ಇದನ್ನೂ ಓದಿ: ಹುಬ್ಬಳ್ಳಿ | ಗುಣಧರನಂದಿ ಮಹಾರಾಜರ ಭೇಟಿಯಾದ ಗೃಹ ಸಚಿವ ಜಿ. ಪರಮೇಶ್ವರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.