ADVERTISEMENT

'ಶಕ್ತಿ' ಸಹಿತ ಯಾವುದೇ ಗ್ಯಾರಂಟಿ ಯೋಜನೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ: ಡಿಕೆಶಿ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2024, 10:39 IST
Last Updated 31 ಅಕ್ಟೋಬರ್ 2024, 10:39 IST
<div class="paragraphs"><p>ಡಿ.ಕೆ. ಶಿವಕುಮಾರ್</p></div>

ಡಿ.ಕೆ. ಶಿವಕುಮಾರ್

   

ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಶಕ್ತಿ ಯೋಜನೆ ಸೇರಿದಂತೆ ಯಾವುದೇ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ, ತಿರುಚಲಾಗಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ADVERTISEMENT

ಶಕ್ತಿ ಯೋಜನೆ ಮರುಪರಿಶೀಲನೆ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಈ ವಿಚಾರದಲ್ಲಿ ನಾನು ಬುಧವಾರ ನೀಡಿದ್ದ ಹೇಳಿಕೆಯನ್ನು ತಿರುಚಲಾಗಿದೆ. ಯೋಜನೆ ನಿಲ್ಲಿಸುತ್ತೇವೆ ಎಂದು ಎಲ್ಲಿಯೂ ಹೇಳಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಆರ್ಥಿಕವಾಗಿ ಸದೃಢರಾಗಿರುವವರು, ಐಟಿಬಿಟಿ ಉದ್ಯೋಗಿಗಳು, ಎಂಎನ್‌ಸಿ ಕಂಪನಿಗಳ ಸಿಬ್ಬಂದಿ ಸೇರಿದಂತೆ ಅನೇಕ ಮಹಿಳೆಯರು ತಮಗೆ ಬಸ್‌ಗಳಲ್ಲಿ ಉಚಿತ ಪ್ರಯಾಣದ ಅವಶ್ಯಕತೆ ಇಲ್ಲ ಎಂದಿದ್ದಾರೆ. ತಾವು ಕೆಲಸ ಮಾಡುವ ಕಂಪನಿಗಳಲ್ಲಿ ಸಂಚಾರಕ್ಕಾಗಿ ಪ್ರತ್ಯೇಕ ಭತ್ಯೆ ನೀಡಲಾಗುತ್ತಿದೆ. ಹೀಗಾಗಿ. ನಮಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಅಗತ್ಯವಿಲ್ಲ ಎಂದಿದ್ದಾರೆ. ಈ ವಿಚಾರದ ಬಗ್ಗೆ ನಾನು ಸಚಿವರ ಜತೆ ಚರ್ಚೆ ಮಾಡುತ್ತೇನೆ ಎಂದಷ್ಟೆ ಹೇಳಿದ್ದೇನೆ’ ಎಂದು ವಿವರಿಸಿದರು. 

‘ನಮ್ಮ ಐದು ಗ್ಯಾರಂಟಿ ಯೋಜನೆಗಳ ಪೈಕಿ ಯಾವುದೇ ಯೋಜನೆಯನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ. ಈ ಯೋಜನೆ ಸೌಲಭ್ಯ ಬೇಡ ಎಂದು ಹೇಳುವವರಿಗೆ ಬಲವಂತ ಮಾಡಲು ಸಾಧ್ಯವೇ? ಅವರ ಸಂಖ್ಯೆ ಶೇಕಡಾ 7ರಿಂದ ಶೇ 8ರಷ್ಟು ಇರಬಹುದು. ಹಿಂದೆ ಅಡುಗೆ ಅನಿಲಕ್ಕೆ ನೀಡಲಾಗುತ್ತಿದ್ದ ಸಬ್ಸಿಡಿ ವಿಚಾರದಲ್ಲಿ ಪ್ರಧಾನಿ ಮೋದಿ ಅವರು ಸ್ವಇಚ್ಛೆಯಿಂದ ಸಬ್ಸಿಡಿ ತ್ಯಜಿಸುವವರಿಗೆ ಅವಕಾಶ ನೀಡಿದರು. ಆ ರೀತಿ ಆಲೋಚನೆ ಮಾಡುವುದಾಗಿ ಹೇಳಿದ್ದೇನೆ’ ಎಂದರು.

‘ಈಗಿನ ಅವಧಿ ಜತೆಗೆ ಮುಂದಿನ ಐದು ವರ್ಷದ ಅವಧಿಯೂ ಸೇರಿ ಒಟ್ಟು ಎಂಟೂವರೆ ವರ್ಷ ಗ್ಯಾರಂಟಿ ಯೋಜನೆಗಳು ಮುಂದುವರಿಯಲಿದೆ’ ಎಂದೂ ತಿಳಿಸಿದರು.

‘ಯಾರಿಗೆ ಬೇಕೊ ಅವರು ಟಿಕೆಟ್ ಖರೀದಿ ಮಾಡಿ ಪ್ರಯಾಣ ಮಾಡಬಹುದಲ್ಲವೇ. ಪರಿಷ್ಕರಣೆ ಯಾಕೆ’ ಎಂದು ಕೇಳಿದಾಗ, ‘ಆ ರೀತಿ ಮಾಡಲು ಸಾರಿಗೆ ಸಿಬ್ಬಂದಿಗೆ ಸರ್ಕಾರ ಅನುಮತಿ ನೀಡಬೇಕಲ್ಲವೇ? ಇಲ್ಲದಿದ್ದರೆ ನಿರ್ವಾಹಕರು ಮಹಿಳೆಯರಿಂದ ಹಣ ಪಡೆಯಲು ಹಿಂಜರಿಯುತ್ತಾರೆ. ನಾಳೆ ನೀವೇ ಹೇಳಬಹುದು, ಮಹಿಳೆಯರಿಂದ ಬಲವಂತವಾಗಿ ಹಣ ಕೀಳುತ್ತಿದ್ದಾರೆ ಎಂದು. ಹೀಗಾಗಿ ಕೆಲವು ಮಹಿಳಾ ಪ್ರಯಾಣಿಕರು ನೀಡಿರುವ ಸಲಹೆ ಬಗ್ಗೆ ನಾವು ಚರ್ಚೆ ಮಾಡಬೇಕಿದೆ. ಈ ವಿಚಾರದಲ್ಲಿ ಯಾವುದೇ ಆತುರವಿಲ್ಲ’ ಎಂದು ಸ್ಪಷ್ಟ ಪಡಿಸಿದರು.

ಅಸೂಯೆಯಿಂದ ಟೀಕೆ:

‘ರಾಜ್ಯ ಸರ್ಕಾರ ದಿವಾಳಿಯಾಗುತ್ತಿದ್ದು, ಗ್ಯಾರಂಟಿ ಯೋಜನೆಗಳಿಂದಲೇ ಸರ್ಕಾರ ಪತನವಾಗಲಿದೆ’ ಎಂಬ ಎಚ್‌.ಡಿ. ಕುಮಾರಸ್ವಾಮಿ ಆರೋಪದ ಬಗ್ಗೆ ಕೇಳಿದಾಗ, ‘ಈ ಗ್ಯಾರಂಟಿ ಯೋಜನೆಗಳನ್ನು ಕಂಡು ಕುಮಾರಸ್ವಾಮಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಕಾಂಗ್ರೆಸ್‌ನವರು ಐದು ಗ್ಯಾರಂಟಿ ಯೋಜನೆಗಳನ್ನು ಕೊಡುತ್ತಿದ್ದಾರೆ. ನಿಮ್ಮ ಅಧಿಕಾರ ಅವಧಿಯಲ್ಲಿ ಇಂತಹ ಒಂದು ಯೋಜನೆ ಕೊಟ್ಟಿಲ್ಲ, ಬಡವರಿಗೆ ನಿವೇಶನ ಕೊಟ್ಟಿಲ್ಲ, ಊರು ಅಭಿವೃದ್ಧಿ ಮಾಡಿಲ್ಲ. ಹೀಗಾಗಿ ಯಾಕೆ ಮತ ಕೇಳುತ್ತೀರಿ ಎಂದು ಜನ ಅವರನ್ನು ಧಿಕ್ಕರಿಸುತ್ತಿದ್ದಾರೆ. ಅದನ್ನು ಸಹಿಸಲಾಗದೆ ನನಗೆ ಈ ಅವಕಾಶ ಸಿಗಲಿಲ್ಲವಲ್ಲ ಎಂದು ಕುಮಾರಸ್ವಾಮಿ ಅಸೂಯೆಯಿಂದ ತಮ್ಮ ಕೈ ಹಿಸುಕಿಕೊಳ್ಳುತ್ತಿದ್ದಾರೆ’ ಎಂದರು.

ಇನ್ನೂ ಎಂಟೂವರೆ ವರ್ಷ ಕಾಂಗ್ರೆಸ್ ಸರ್ಕಾರ ಆಡಳಿತ:

‘ಆರು ತಿಂಗಳ ಒಳಗೆ ರಾಜ್ಯಪಾಲರ ಆಡಳಿತ ಬರಲಿದೆ’ ಎಂಬ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಕೇಳಿದಾಗ, ‘ನಮ್ಮ ಸರ್ಕಾರ ಬೀಳಿಸಲು ಷಡ್ಯಂತ್ರ ರೂಪಿಸುತ್ತಿದ್ದಾರೆ. ಆದರೆ, ಅದು ಅವರ ಹಣೆಯಲ್ಲಿ ಬರೆದಿಲ್ಲ. ಮುಂದಿನ ಎಂಟೂವರೆ ವರ್ಷಗಳ ಕಾಲ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರ ನಡೆಸಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅತ್ಯುತ್ತಮ ಸಲಹೆ ನೀಡಿದ್ದಾರೆ:

ಬೆಂಗಳೂರು ಅಭಿವೃದ್ಧಿ ಹಾಗೂ ರಸ್ತೆ ವಿಚಾರವಾಗಿ ಉದ್ಯಮಿ ಕಿರಣ್ ಮಜೂಮ್ದಾರ್ ಶಾ ಅವರ ಜತೆಗಿನ ಚರ್ಚೆ ಬಗ್ಗೆ ಕೇಳಿದಾಗ, ‘ನಾನು ಚರ್ಚೆ ಮಾಡಿದ್ದೇನೆ, ಅಧಿಕಾರಿಗಳಿಗೂ ಅವರ ಜತೆ ಚರ್ಚೆ ಮಾಡುವಂತೆ ತಿಳಿಸಿದ್ದೆ. ಅವರು ಅನೇಕ ಸಲಹೆ ನೀಡಿದ್ದಾರೆ. ಕೆಲವು ಸಲಹೆ ಅತ್ಯುತ್ತಮವಾಗಿದ್ದು, ಅವುಗಳನ್ನು ನಾವು ಸ್ವೀಕರಿಸುತ್ತೇವೆ. ಅವರು ತಮ್ಮದೇ ಆದ ವರದಿ ಸಿದ್ಧಪಡಿಸಿ ನೀಡಿದ್ದಾರೆ’ ಎಂದು ತಿಳಿಸಿದರು.

‘ಚನ್ನಪಟ್ಟಣದಲ್ಲಿ ಚುನಾವಣಾ ಪ್ರಚಾರದಲ್ಲಿ ಯಾವಾಗ ಭಾಗವಹಿಸುತ್ತೀರಿ’ ಎಂದು ಕೇಳಿದಾಗ, ‘ನಾನು ಹಾಗೂ ರಾಮಲಿಂಗಾ ರೆಡ್ಡಿ ಅವರು ಈಗಾಗಲೇ 25 ಬಾರಿ ಕ್ಷೇತ್ರಕ್ಕೆ ಹೋಗಿ ಬಂದಿದ್ದೇವೆ. ನಾವು ಒಂದೊಂದು ದಿನ ಮಾತ್ರ ಜಂಟಿ ಪ್ರಚಾರ ಮಾಡುತ್ತೇವೆ. ಇತರ ದಿನಗಳಲ್ಲಿ ನಮ್ಮ ನಾಯಕರು ಪ್ರಚಾರ ಮಾಡುತ್ತಾರೆ’ ಎಂದು ತಿಳಿಸಿದರು.

ಬಿಜೆಪಿಗೆ ರಾಜಕೀಯ ಮಾಡಲು ಬೇರೆ ವಿಚಾರ ಇಲ್ಲ:

ಸರ್ಕಾರದ ಸ್ಪಷ್ಟನೆ ಹೊರತಾಗಿಯೂ ಬಿಜೆಪಿ ವಕ್ಫ್ ವಿಚಾರದಲ್ಲಿ ಪ್ರತಿಭಟನೆಗೆ ಮುಂದಾಗಿರುವ ಬಗ್ಗೆ ಕೇಳಿದಾಗ, ‘ನಮ್ಮ ಸರ್ಕಾರದ ವಿರುದ್ಧ ಟೀಕೆ ಮಾಡಲು ಬಿಜೆಪಿಯವರ ಬಳಿ ವಿಚಾರಗಳಿಲ್ಲ. ಹೀಗಾಗಿ ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಅವರ ಕಾಲದಲ್ಲೇ ಮೊದಲು ನೋಟೀಸ್ ನೀಡಲಾಗಿದೆ. ಕೋಮು ಗಲಭೆ ಸೃಷ್ಟಿಸಿ, ದೇಶ ಹಾಗೂ ರಾಜ್ಯ ಒಡೆಯಬೇಕು ಎಂಬುದು ಅವರ ಉದ್ದೇಶ’ ಎಂದರು.

‘ಪ್ರಿಯಾಂಕಾ ಗಾಂಧಿ ಕೂಡ ವಯನಾಡಿಗೆ ವಲಸಿಗರು’ ಎಂಬ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಕೇಳಿದಾಗ, ‘ಕುಮಾರಸ್ವಾಮಿ ಅವರಾಗಲಿ, ಅವರ ಗೌಡರ ಕುಟುಂಬದವರಾಗಲಿ ಗಾಂಧಿ ಕುಟುಂಬದ ಬಗ್ಗೆ ಮಾತನಾಡುವ ನೈತಿಕತೆ ಹೊಂದಿಲ್ಲ. ಗಾಂಧಿ ಕುಟುಂಬ ದೇಶವನ್ನು ಒಂದಾಗಿ ಇಟ್ಟಿದೆ. ಆ ಕುಟುಂಬದ ಕೊಡುಗೆಯನ್ನು ಸರಿದೂಗಿಸಲು ಯಾರಿಂದಲೂ ಸಾಧ್ಯವಿಲ್ಲ. ಈ ಹಿಂದೆ ಇಂದಿರಾ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರು ದಕ್ಷಿಣ ಭಾರತವನ್ನು ಪ್ರತಿನಿಧಿಸಿದ್ದರು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.