ADVERTISEMENT

ಸಂಬಳಕ್ಕೆ ಜಾನಪದ ಪರಿಷತ್ತು ಸಿಬ್ಬಂದಿ ಪರದಾಟ: 5 ತಿಂಗಳಿಂದ ಬಾರದ ವೇತನ

ಕಳೆದ ಐದು ತಿಂಗಳಿಂದ ಬಾರದ ವೇತನ

ಆರ್.ಜಿತೇಂದ್ರ
Published 10 ಸೆಪ್ಟೆಂಬರ್ 2022, 18:32 IST
Last Updated 10 ಸೆಪ್ಟೆಂಬರ್ 2022, 18:32 IST
ಜಾನಪದ ಲೋಕದಲ್ಲಿನ ಜನಾಕರ್ಷಣೆಯ ಕಲಾಕೃತಿಗಳು
ಜಾನಪದ ಲೋಕದಲ್ಲಿನ ಜನಾಕರ್ಷಣೆಯ ಕಲಾಕೃತಿಗಳು   

ರಾಮನಗರ: ಕರ್ನಾಟಕ ಜಾನಪದ ಪರಿಷತ್ತು ಸೇರಿದಂತೆ ರಾಜ್ಯದ ವಿವಿಧ ಸಂಘ–ಸಂಸ್ಥೆಗಳಿಗೆ ಈ ವರ್ಷ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅನುದಾನ ಸ್ಥಗಿತವಾಗಿದ್ದು, ಇಲ್ಲಿನ ಸಿಬ್ಬಂದಿ ವೇತನಕ್ಕೆ ಪರದಾಡುವಂತೆ ಆಗಿದೆ.

ರಾಮನಗರದ ಜಾನಪದ ಲೋಕ ಸೇರಿದಂತೆ ವಿವಿಧ ಸಂಸ್ಥೆಗಳಿಗೆ ಸರ್ಕಾರ ವಾರ್ಷಿಕ ಅನುದಾನ ನೀಡುತ್ತ ಬಂದಿದೆ. ಈ ಅನುದಾನದಲ್ಲಿಯೇ ಅಲ್ಲಿನ ಸಿಬ್ಬಂದಿಗೆ ಸಂಬಳ ಪಾವತಿಸಲಾಗುತ್ತಿದೆ. ಆದರೆ ಈ ಹಣಕಾಸು ವರ್ಷದಿಂದ ಎಚ್‌ಆರ್‌ಎಂಎಸ್‌ ಅಡಿ ಬರುವ ಅನುದಾನಿತ ಸಿಬ್ಬಂದಿಗೆ ಮಾತ್ರವೇ ಸಂಬಳ ನೀಡುವುದಾಗಿ ಸರ್ಕಾರ ಹೇಳಿದ್ದು, ವಾರ್ಷಿಕ ಅನುದಾನವನ್ನು ಕಡಿತ ಮಾಡಿದೆ. ಮತ್ತೊಂದೆಡೆ, ಖಾಲಿ ಇರುವ ಹುದ್ದೆಗಳ ಭರ್ತಿಗೆ ಮನಸ್ಸು ಮಾಡಿಲ್ಲ. ಅನುದಾನ ಕೇಳಿದರೆ ಆರ್ಥಿಕ ಸ್ವಾ‌ವಲಂಬನೆಯ ಪಾಠ ಹೇಳುತ್ತಿದೆ. ಕರ್ನಾಟಕ ವಿದ್ಯಾವರ್ಧಕ ಸಂಘ, ನೀನಾಸಂ ಮೊದಲಾದ ಸಂಸ್ಥೆಗಳಲ್ಲೂ ಇದೇ ಪರಿಸ್ಥಿತಿ ಇದೆ ಎನ್ನಲಾಗಿದೆ.

ಕರ್ನಾಟಕ ಜಾನಪದ ಪರಿಷತ್ತಿನ ಅಡಿಯಲ್ಲಿ 30ಕ್ಕೂ ಹೆಚ್ಚು ಸಿಬ್ಬಂದಿ ಇದ್ದಾರೆ. ಅವುಗಳಲ್ಲಿ ಕೇವಲ ಇಬ್ಬರು ಮಾತ್ರ ಸರ್ಕಾರದ ಅನುದಾನದ ಅಡಿ ಬರುತ್ತಾರೆ. ಉಳಿದ ಸಿಬ್ಬಂದಿಗೆ ಸರ್ಕಾರದ ವಾರ್ಷಿಕ ಅನುದಾನ ಹಾಗೂ ಜಾನಪದ ಲೋಕದ ಆದಾಯ ಬಳಸಿಕೊಂಡು ವೇತನ ಪಾವತಿಸಲಾಗುತ್ತಿದೆ. ಈ ಸಿಬ್ಬಂದಿ ಸಂಬಳಕ್ಕೆ ವರ್ಷಕ್ಕೆ ₹90 ಲಕ್ಷದಷ್ಟು ಹಣ ಬೇಕಿದೆ. ಕಳೆದ ನಾಲ್ಕೈದು ತಿಂಗಳಿಂದ ವೇತನ ಪಾವತಿ ಆಗದ ಕಾರಣಕ್ಕೆ ಜಾನಪದ ಲೋಕದ ಸಿಬ್ಬಂದಿ ಬದುಕು ಬೀದಿಗೆ ಬಿದ್ದಿದೆ.

ADVERTISEMENT

ಮುಚ್ಚುವ ಆತಂಕ: ರಾಮನಗರದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ಜಾನಪದ ಲೋಕವು ಬೆಂಗಳೂರು–ಮೈಸೂರು ಹೆದ್ದಾರಿಗೆ ಹೊಂದಿಕೊಂಡಂತೆ ಇದೆ. ಹೊಸ ಬೈಪಾಸ್ ರಸ್ತೆ ನಿರ್ಮಾಣವಾದ ಬಳಿಕ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದ್ದು, ಪ್ರವೇಶ ಶುಲ್ಕ ಸಂಗ್ರಹವೂ ಕುಸಿದಿದೆ. ಜಾನಪದ ಲೋಕಕ್ಕೆ ಬರಬೇಕಾದ ಹೋಟೆಲ್‌ ಬಾಡಿಗೆ, ಮಳಿಗೆಗಳ ಬಾಡಿಗೆಯಲ್ಲೂ ಕುಸಿತವಾಗುವ ಸಾಧ್ಯತೆ ಇದೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ ಜಾನಪದ ಲೋಕ ಮುಚ್ಚುವ ಹಂತಕ್ಕೆ ಬಂದರೂ ಆಶ್ಚರ್ಯವಿಲ್ಲ ಎಂಬುದು ಇಲ್ಲಿನ ಸಿಬ್ಬಂದಿಯ ಆತಂಕವಾಗಿದೆ.

***

ಜಾನಪದ ಪರಿಷತ್ತಿನ 30 ಸಿಬ್ಬಂದಿಗೆ ಕಳೆದ ನಾಲ್ಕೈದು ತಿಂಗಳಿಂದ ಸಂಬಳ ಆಗಿಲ್ಲ. ಸರ್ಕಾರ ಅನುದಾನ ಕಡಿತ ಮಾಡಿದೆ. ಜಾನಪದ ಲೋಕದ ಆದಾಯವೂ ಕುಸಿದಿದ್ದು, ಪರ್ಯಾಯ ದಾರಿ ಕಾಣುತ್ತಿಲ್ಲ

- ನಂದಕುಮಾರ್ ಹೆಗಡೆ, ಆಡಳಿತಾಧಿಕಾರಿ, ಕರ್ನಾಟಕ ಜಾನಪದ ಪರಿಷತ್ತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.