ADVERTISEMENT

ಮುಂದೊಂದು ದಿನ ವಿಧಾನಸೌಧ ಅಡವಿಟ್ಟರೂ ಅಚ್ಚರಿಯಿಲ್ಲ: ಸಿದ್ದರಾಮಯ್ಯಗೆ ಆರ್.ಅಶೋಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಜೂನ್ 2024, 9:25 IST
Last Updated 18 ಜೂನ್ 2024, 9:25 IST
ಆರ್.ಅಶೋಕ
ಆರ್.ಅಶೋಕ   

ಬೆಂಗಳೂರು: ‘ಸರ್ಕಾರ ಉಳಿಸಿಕೊಳ್ಳಲು 25,000 ಎಕರೆ ಸಾರ್ವಜನಿಕ ಆಸ್ತಿಯನ್ನ ಬಳಸಿಕೊಳ್ಳಲು ಹೊರಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಂದೊಂದು ದಿನ ವಿಧಾನಸೌಧವನ್ನು ಅಡವಿಟ್ಟರೂ, ಹರಾಜು ಹಾಕಿದರೂ ಅಚ್ಚರಿಪಡಬೇಕಾಗಿಲ್ಲ’ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಹೇಳಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಎದುರಾಗಿರುವ ಆರ್ಥಿಕ ಹೊರೆಯನ್ನು ಸರಿದೂಗಿಸಲು ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ 25,000 ಎಕರೆ ಜಮೀನನ್ನು ವರಮಾನ ಸಂಗ್ರಹಕ್ಕೆ ಬಳಸಿಕೊಳ್ಳುವ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂಬ ‘ಪ್ರಜಾವಾಣಿ’ ವರದಿಯನ್ನು ಉಲ್ಲೇಖಿಸಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಆರ್‌.ಅಶೋಕ, ‘15 ಜಜೆಟ್ ಮಂಡಿಸಿರುವ ಸ್ವಯಂ ಘೋಷಿತ ಆರ್ಥಿಕ ತಜ್ಞರಾದ ಸಿದ್ದರಾಮಯ್ಯ ಅವರಿಗೆ ರಾಜ್ಯದ ಬಜೆಟ್ ಮಂಡಿಸುವಾಗ ಸರ್ಕಾರದ ಆದಾಯ, ವೆಚ್ಚದ ಬಗ್ಗೆ ಜ್ಞಾನವಿರಲಿಲ್ಲವೇ’ ಎಂದು ಪ್ರಶ್ನಿಸಿದರು.

‘ಬಜೆಟ್ ಮಂಡಿಸಿದ ನಾಲ್ಕೇ ತಿಂಗಳಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಮಾಡಲಾಯಿತು. ಇದೀಗ 25,000 ಎಕರೆ ಸಾರ್ವಜನಿಕ ಆಸ್ತಿಯನ್ನ ಸಂಪನ್ಮೂಲ ಕ್ರೂಢೀಕರಣಕ್ಕೆ ಬಳಸಿಕೊಳ್ಳಲು ಹೊರಟಿದ್ದಾರೆ. ಇದೇನಾ ಬಜೆಟ್ ರಚನೆ ಬಗ್ಗೆ ತಮಗಿರುವ ಪಾಂಡಿತ್ಯ? ಇದೇನಾ ತಾವು ಜಂಭ ಕೊಚ್ಚಿಕೊಳ್ಳುವ ಬುದ್ಧಿವಂತಿಕೆ? ಕರ್ನಾಟಕದಂತಹ ಪ್ರಗತಿಶೀಲ ರಾಜ್ಯವನ್ನ ಇಂತಹ ಪರಿಸ್ಥಿತಿಗೆ ತಂದು ನಿಲ್ಲಿಸಿದ ನಿಮಗೆ ನಾಚಿಕೆಯಾಗಬೇಕು’ ಎಂದು ಕಿಡಿಕಾರಿದರು.

ADVERTISEMENT

‘ದೇವೇಗೌಡರಿಂದ ಹಿಡಿದು ಈಗ ಉಪಮುಖ್ಯಮಂತ್ರಿಯಾಗಿರುವ ಡಿ.ಕೆ.ಶಿವಕುಮಾರ್ ಅವರವರೆಗೆ ಅನೇಕರ ಕೃಪೆಯಿಂದ ಮುಖ್ಯಮಂತ್ರಿಯಾಗಿ, ಉಪಮುಖ್ಯಮಂತ್ರಿಯಾಗಿ, ಮಂತ್ರಿಯಾಗಿ ಹತ್ತಾರು ವರ್ಷ ಅಧಿಕಾರ ಅನುಭವಿಸಿರುವ ನೀವು ಕರ್ನಾಟಕಕ್ಕೆ, ಕನ್ನಡಿಗರಿಗೆ ನೀಡಿದ ಕೊಡುಗೆ ಏನು? ಪ್ರತ್ಯೇಕ ಧರ್ಮ, ಭಾಷೆ, ಜಾತಿ, ಉತ್ತರ-ದಕ್ಷಿಣ, ಕೇಂದ್ರ-ರಾಜ್ಯ, ಅಲ್ಪಸಂಖ್ಯಾತರ ಓಲೈಕೆ ಅಂತ ಜನರನ್ನ ದಿಕ್ಕು ತಪ್ಪಿಸಿ, ಜೀವನದುದ್ದಕ್ಕೂ ಯಾರಿಗೋ ಸಿಕ್ಕ ಜನಾದೇಶವನ್ನ ಕಸಿದುಕೊಂಡು ಅಧಿಕಾರ ಅನುಭವಿಸಿದ್ದೊಂದೇ ನಿಮ್ಮ ಸಾಧನೆ. ಕರ್ನಾಟಕಕ್ಕೆ ತಮ್ಮ ಕೊಡುಗೆ ಏನಪ್ಪಾ ಅಂದರೆ ಶೂನ್ಯ, ದೊಡ್ಡ ಶೂನ್ಯ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.