ADVERTISEMENT

‘ಝೀರೋ ಟ್ರಾಫಿಕ್‌‘ ವ್ಯವಸ್ಥೆಯೇ ಇಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2021, 16:22 IST
Last Updated 16 ಸೆಪ್ಟೆಂಬರ್ 2021, 16:22 IST
ಗೃಹ ಸಚಿವ ಆರಗ ಜ್ಞಾನೇಂದ್ರ
ಗೃಹ ಸಚಿವ ಆರಗ ಜ್ಞಾನೇಂದ್ರ   

ಬೆಂಗಳೂರು: ಮುಖ್ಯಮಂತ್ರಿ ಸೇರಿದಂತೆ ರಾಜ್ಯದ ಯಾರಿಗೂ ‘ಝೀರೋ ಟ್ರಾಫಿಕ್‌’ ಹೆಸರಿನ ಸೌಲಭ್ಯವೇ ಇಲ್ಲ. ತುರ್ತು ಸಂದರ್ಭದಲ್ಲಿ ಮಾತ್ರ ತಡೆರಹಿತ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ವಿರೋಧ ಪಕ್ಷದ ಮುಖ್ಯ ಸಚೇತಕ ಎಂ. ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಗುರುವಾರ ಉತ್ತರಿಸಿದ ಸಚಿವರು ‘ಝೀರೋ ಟ್ರಾಫಿಕ್‌ ಎಂಬ ಪದದ ಬಳಕೆಯೇ ತಪ್ಪು. ಅಂತಹ ವ್ಯವಸ್ಥೆಯೇ ಇಲಾಖೆಯಲ್ಲಿ ಇಲ್ಲ’ ಎಂದರು.

‘ಆಗಸ್ಟ್‌ 4ರಂದು ಸಚಿವೆ ಶಶಿಕಲಾ ಜೊಲ್ಲೆ ಅವರು ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಬರಲು ವಿಮಾನ ನಿಲ್ದಾಣದಿಂದ ತಡೆರಹಿತ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಝೀರೋ ಟ್ರಾಫಿಕ್‌ ಹೆಸರಿನಲ್ಲಿ ಅವರಿಗೆ ಯಾವುದೇ ಸೌಲಭ್ಯ ನೀಡಿರಲಿಲ್ಲ’ ಎಂದು ಹೇಳಿದರು.

ADVERTISEMENT

2019ರಲ್ಲಿ ಸುಪ್ರೀಂಕೋರ್ಟ್‌ ಆದೇಶದಂತೆ 19 ಶಾಸಕರಿಗೆ ಅಗತ್ಯ ಭದ್ರತೆ ನೀಡಿ ವಿಧಾನಸೌಧಕ್ಕೆ ಕರೆತರಲಾಗಿತ್ತು. ಆಗ ಯಾವುದೇ ರೀತಿಯಲ್ಲಿ ನಿಯಮಗಳ ಉಲ್ಲಂಘನೆ ಆಗಿರಲಿಲ್ಲ ಎಂದರು.

ಐವರು ಮಾತ್ರ ಕಾಯಂ ಸಿಬ್ಬಂದಿ!

ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಲ್ಲಿ ಐವರು ಮಾತ್ರ ಕಾಯಂ ನೌಕರರಿದ್ದಾರೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ವಿಧಾನ ಪರಿಷತ್‌ಗೆ ತಿಳಿಸಿದರು.

ಜೆಡಿಎಸ್‌ನ ಬಿ.ಎಂ. ಫಾರೂಕ್‌ ಪ್ರಶ್ನೆಗೆ ಉತ್ತರಿಸಿದ ಅವರು, ‘ನಿಗಮದ ಕೇಂದ್ರ ಕಚೇರಿಯಲ್ಲಿ ಇಬ್ಬರು ಮಾತ್ರ ಕಾಯಂ ಸಿಬ್ಬಂದಿ ಇದ್ದಾರೆ. ನಿಯೋಜನೆ ಮೇಲೆ ಬಂದಿರುವ ಮೂವರು, 34 ಹೊರಗುತ್ತಿಗೆ ನೌಕರರು ಮತ್ತು ಇಬ್ಬರು ಹೆಚ್ಚುವರಿ ಹೊರ ಗುತ್ತಿಗೆ ನೌಕರರು ಇದ್ದಾರೆ. ಜಿಲ್ಲಾ ಕಚೇರಿಗಳಲ್ಲಿ ಮೂವರು ಕಾಯಂ ಸಿಬ್ಬಂದಿ, 18 ಮಂದಿ ನಿಯೋಜನೆ ಮೇಲೆ ಬಂದವರು, 30 ಮಂದಿ ಹೊರಗುತ್ತಿಗೆ ಸಿಬ್ಬಂದಿ ಮತ್ತು 64 ಮಂದಿ ಹೆಚ್ಚುವರಿ ಹೊರ ಗುತ್ತಿಗೆ ಸಿಬ್ಬಂದಿ ಇದ್ದಾರೆ’ ಎಂದರು.

ವರ್ಷದಿಂದ ವರ್ಷಕ್ಕೆ ನಿಗಮಕ್ಕೆ ಕಡಿಮೆ ಅನುದಾನ ದೊರೆಯುತ್ತಿರುವ ಕುರಿತು ಫಾರೂಕ್‌ ಅಸಮಾಧಾನ ವ್ಯಕ್ತಡಿಸಿದರು. ಮುಖ್ಯಮಂತ್ರಿಯವರ ಜತೆ ಚರ್ಚಿಸಿ ಮುಂದಿನ ಬಜೆಟ್‌ನಲ್ಲಿ ಹೆಚ್ಚು ಅನುದಾನ ಒದಗಿಸಲು ಪ್ರಯತ್ನಿಸುವುದಾಗಿ ಮಾಧುಸ್ವಾಮಿ ಭರವಸೆ ನೀಡಿದರು.

1,092 ಕೆರೆಗಳ ಒತ್ತುವರಿ

ಬೆಂಗಳೂರು: ರಾಜ್ಯದಲ್ಲಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ 3,753 ಕೆರೆಗಳಿದ್ದು, ಈ ಪೈಕಿ 1,092 ಕೆರೆಗಳ ಜಮೀನನ್ನು ಒತ್ತುವರಿ ಮಾಡಿರುವ ಪತ್ತೆಯಾಗಿದೆ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಜೆಡಿಎಸ್‌ನ ಕೆ.ಟಿ. ಶ್ರೀಕಂಠೇಗೌಡ ಪ್ರಶ್ನೆಗೆ ಉತ್ತರಿಸಿದ ಅವರು, ‘2,488 ಕೆರೆಗಳ ಸರ್ವೆ ಕೈಗೊಂಡಿದ್ದು, 1,092 ಕೆರೆಗಳಲ್ಲಿ 12,328.32 ಹೆಕ್ಟೇರ್‌ ವಿಸ್ತೀರ್ಣದ ಒತ್ತುವರಿ ಪತ್ತೆಯಾಗಿದೆ. ಈ ಪೈಕಿ 977 ಕರೆಗಳ 11,587.95 ಹೆಕ್ಟೇರ್‌ ಒತ್ತುವರಿ ತೆರವು ಮಾಡಲಾಗಿದೆ’ ಎಂದರು.

ಬಾಕಿ ಇರುವ ಸರ್ವೆ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುವುದು. ಒತ್ತುವರಿ ತೆರವು ಕಾರ್ಯಾಚರಣೆ ತ್ವರಿತಗೊಳಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಮರಳು ಗಣಿಗಾರಿಕೆಗೆ ಅವಕಾಶ ನೀಡಲು ಆಗ್ರಹ

‘ಕೊಡಗು ಜಿಲ್ಲೆಯಲ್ಲಿ ಮರಳು ಗಣಿಗಾರಿಕೆ ನಿಷೇಧಿಸಿರುವುದರಿಂದ ನದಿ, ಉಪ ನದಿ ಮತ್ತು ಹಳ್ಳಗಳಲ್ಲಿ ಹೂಳು ಹೆಚ್ಚಾಗುತ್ತಿದೆ. ಇದರಿಂದ ಕೃಷಿ ಜಮೀನು, ಮನೆಗಳಿಗೆ ಹಾನಿಯಾಗುತ್ತಿದೆ. ಮರಳು ಕಳ್ಳ ಸಾಗಣೆಯೂ ನಡೆಯುತ್ತಿದೆ. ರಾಜ್ಯ ಸರ್ಕಾರ ನಮ್ಮ ಜಿಲ್ಲೆಯಲ್ಲಿ ಅಧಿಕೃತವಾಗಿ ಮರಳು ಗಣಿಗಾರಿಕೆಗೆ ಅನುಮತಿ ನೀಡಬೇಕು’ ಎಂದು ಕಾಂಗ್ರೆಸ್‌ ಸದಸ್ಯೆ ವೀಣಾ ಅಚ್ಚಯ್ಯ ಆಗ್ರಹಿಸಿದರು.

ಈ ಬೇಡಿಕೆಗೆ ಪ್ರತಿಕ್ರಿಯಿಸಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ‘ನಿಮ್ಮ ಬೇಡಿಕೆ ನ್ಯಾಯಯುತವಾಗಿದೆ. ಮುಖ್ಯಮಂತ್ರಿಯವರ ಗಮನಕ್ಕೆ ತಂದು, ಅಧಿಕಾರಿಗಳ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದರು.

ನದಿ, ಉಪ ನದಿ ಮತ್ತು ಹಳ್ಳಗಳ ಹೂಳು ತೆಗೆಯಲು ಹೆಚ್ಚಿನ ಅನುದಾನ ನೀಡಬೇಕೆಂಬ ಬೇಡಿಕೆಗೆ ಉತ್ತರಿಸಿದ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ‘ಹಾರಂಗಿ ಜಲಾನಯನ ಪ್ರದೇಶ ಮತ್ತು ನದಿ ಪಾತ್ರದ ಪುನಶ್ಚೇತನಕ್ಕೆ ₹ 130 ಕೋಟಿ ವೆಚ್ಚದ ಕಾಮಗಾರಿಗೆ ಟೆಂಡರ್‌ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈಗಾಗಲೇ ಕೆಲವು ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಗಿದೆ. ಅಗತ್ಯವಿದ್ದರೆ ಹೆಚ್ಚಿನ ಅನುದಾನ ಒದಗಿಸಲಾಗುವುದು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.