ಬೆಂಗಳೂರು: ‘ನಮ್ಮ ಪಕ್ಷದಿಂದ ಯಾರೂ ಕಾಂಗ್ರೆಸ್‌ಗೆ ಹೋಗುವುದಿಲ್ಲ. ಕಾಂಗ್ರೆಸ್‌ನಿಂದಲೇ ಕೆಲವರು ನಮ್ಮ ಪಕ್ಷಕ್ಕೆ ಬರಲು ಸಿದ್ಧರಾಗಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಬಿಬಿಎಂಪಿ ಚುನಾವಣೆಯ ಪೂರ್ವಭಾವಿ ತಯಾರಿ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜತೆ ಮಂಗಳವಾರ ಚರ್ಚೆ ನಡೆಸಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.
ಸಂಪುಟ ವಿಸ್ತರಣೆಯಾಗದೇ ಇದ್ದರೆ ಕೆಲಸ ಸಚಿವರು, ಶಾಸಕರು ಕಾಂಗ್ರೆಸ್‌ಗೆ ಹೋಗಲಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದರು. ಕಾಂಗ್ರೆಸ್‌ಗೆ ಕೆಲವರು ಬರಲಿರುವುದು ಹೌದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದರು.
ಈ ಮಾತುಗಳಿಗೆ ಪ್ರತಿಕ್ರಿಯಿಸಿದ ನಳಿನ್, ‘ಇಡಿ ದೇಶದಲ್ಲೇ ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯವಿಲ್ಲ. ಅಧಿಕಾರಕ್ಕೆ ಬರುವ ಹಗಲುಗನಸು ಕಾಣುತ್ತಿದ್ದಾರೆ. ಹೀಗಾಗಿ ಜನರ ಗಮನ ಬೇರೆಡೆ ಸೆಳೆಯಲು ಕುತಂತ್ರ ರಾಜಕಾರಣಕ್ಕೆ ಕೈಹಾಕಿದ್ದಾರೆ. ಪಕ್ಷಕ್ಕೆ ವಲಸೆ ಬಂದವರು ಸೇರಿ ಯಾವುದೇ ಶಾಸಕರು ಕಾಂಗ್ರೆಸ್‌ಗೆ ಹೋಗುವುದಿಲ್ಲ’ ಎಂದರು.
ವಿಸ್ತರಣೆ ವರಿಷ್ಠರಿಗೆ ಬಿಟ್ಟಿದ್ದು: ‘ಸಚಿವ ಸಂಪುಟ ವಿಸ್ತರಣೆಯ ವಿಷಯ ವರಿಷ್ಠರಿಗೆ ಬಿಟ್ಟಿದ್ದು. ಯಾವಾಗ ಮಾಡಬೇಕು ಎಂಬುದನ್ನು ಪಕ್ಷದ ವರಿಷ್ಠರೇ ತೀರ್ಮಾನಿಸುತ್ತಾರೆ. ವಿಸ್ತರಣೆ ಮಾಡುವ ಸಂದರ್ಭದಲ್ಲಿ ಮುಖ್ಯಮಂತ್ರಿಯವರ ಜತೆಗೂ ವರಿಷ್ಠರು ಚರ್ಚಿಸುತ್ತಾರೆ. ನಿಗಮ– ಮಂಡಳಿಗಳಿಗೆ ನೇಮಕಕ್ಕೆ ಪಟ್ಟಿ ಮಾಡಿದ್ದೇವೆ. ಅದನ್ನು ಒಂದು ವಾರದೊಳಗೆ ಮುಖ್ಯಮಂತ್ರಿಯವರಿಗೆ ನೀಡುತ್ತೇವೆ’ ಎಂದರು.
ರಾಜ್ಯದಲ್ಲಿ ನಾಯಕತ್ವದ ಬದಲಾವಣೆ ಇಲ್ಲ. ಬೊಮ್ಮಾಯಿ ಅವರು ಅವಧಿಯನ್ನು ಪೂರ್ಣಗೊಳಿಸಲಿದ್ದಾರೆ. ಪಕ್ಷದ ಅಧ್ಯಕ್ಷ ಸ್ಥಾನದ ಅವಧಿ ಮೂರು ವರ್ಷಗಳು, ಅದು ಮುಗಿದ ತಕ್ಷಣ ಚುನಾವಣೆ ಮೂಲಕ ಹೊಸ ಅಧ್ಯಕ್ಷರ ನೇಮಕ ಮಾಡುವುದು ಪಕ್ಷದ ನಿಯಮ. ಅಲ್ಲಿಯವರೆಗೆ ಯಾವುದೇ ಬದಲಾವಣೆ ಇಲ್ಲ ಎಂದೂ ನಳಿನ್ ಸ್ಪಷ್ಟಪಡಿಸಿದರು.
ಬೂತ್ ಸಮಿತಿ ಗಟ್ಟಿ: ಮತಗಟ್ಟೆ ಹಂತದಲ್ಲಿ ಪಕ್ಷ ಬಲಪಡಿಸುವ ಕೆಲಸ ನಡೆದಿದ್ದು, ಅದು ಗಟ್ಟಿಯಾಗಿದೆ. ಇವತ್ತಿನಿಂದಲೇ ಬಿಬಿಎಂಪಿ ಚುನಾವಣೆಯನ್ನು ಎದುರಿಸಲು ಪಕ್ಷ ಸಜ್ಜಾಗಿದೆ. ಮುಖ್ಯಮಂತ್ರಿಯವರು ಮತ್ತು ಜನಪ್ರತಿನಿಧಿಗಳ ಜತೆ ಹಲವು ಸುತ್ತಿನ ಮಾತುಕತೆ ನಡೆದಿದೆ ಎಂದು ನಳಿನ್ ಕುಮಾರ್ ತಿಳಿಸಿದರು.
ಬಿಬಿಎಂಪಿ ಅಲ್ಲದೆ, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಎದುರಿಸಲೂ ಸಿದ್ಧತೆ ನಡೆದಿದೆ. ವಿಸ್ತಾರಕ್ ಯೋಜನೆ ಮೂಲಕ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡುವ ಕಾರ್ಯಕ್ಕೂ ಚಾಲನೆ ನೀಡಲಾಗುವುದು ಎಂದು ಹೇಳಿದರು.
‘ಶಿಸ್ತು ಉಲ್ಲಂಘಿಸಿದರೆ ಕ್ರಮ’
ಪಕ್ಷದಲ್ಲಿ ಎಲ್ಲರೂ ಶಿಸ್ತು ಪಾಲಿಸಬೇಕು. ಮುಖ್ಯಮಂತ್ರಿ, ಪಕ್ಷದ ಅಧ್ಯಕ್ಷರು, ಜನಪ್ರತಿನಿಧಿಗಳು ಎಲ್ಲರಿಗೂ ಒಂದೇ ಶಿಸ್ತು. ಯಾರೇ ಆದರೂ ಶಿಸ್ತು ಉಲ್ಲಂಘಿಸಿದರೆ ಸಹಿಸಲು ಸಾಧ್ಯವಿಲ್ಲ ಎಂದು ನಳಿನ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
‘ಯಾವುದೇ ಶಾಸಕರು ಸರ್ಕಾರ ಮತ್ತು ಸಂಪುಟ ವಿಸ್ತರಣೆ ಬಗ್ಗೆ ಬಹಿರಂಗ ಹೇಳಿಕೆಗಳನ್ನು ನೀಡಬಾರದು. ಏನೇ ಹೇಳುವುದಿದ್ದರೂ ಪಕ್ಷದ ವೇದಿಕೆಯಲ್ಲೇ ಚರ್ಚಿಸಬೇಕು. ಬಹಿರಂಗ ಹೇಳಿಕೆ ಕೊಡುವವರನ್ನು ಕರೆಸಿ ಮಾತನಾಡುತ್ತೇನೆ. ಅದಕ್ಕೂ ಬಾಗದಿದ್ದರೆ ನೋಟಿಸ್ ನೀಡಿ ರಾಷ್ಟ್ರೀಯ ಶಿಸ್ತು ಸಮಿತಿಯ ಗಮನಕ್ಕೆ ತರಬೇಕಾಗುತ್ತದೆ. ಕೆಲವು ಶಾಸಕರಿಗೆ ಈಗಾಗಲೇ ಸ್ಪಷ್ಟೀಕರಣ ಕೇಳಿದ್ದು ಅವರು ಸ್ಪಷ್ಟೀಕರಣ ಕೊಟ್ಟಿದ್ದಾರೆ’ ಎಂದು ಅವರು ಹೇಳಿದರು.
ಕಾಂಗ್ರೆಸ್ ನಾಯಕರಿಗೆ ಅಭದ್ರತೆ: ಮುಖ್ಯಮಂತ್ರಿ ಬೊಮ್ಮಾಯಿ
‘ಕಾಂಗ್ರೆಸ್ ನಾಯಕರಿಗೆ ಅಭದ್ರತೆ ಕಾಡುತ್ತಿದೆ ಎನ್ನುವುದು ಅವರಿಬ್ಬರ ಹೇಳಿಕೆಗಳಿಂದ ಗೊತ್ತಾಗುತ್ತಿದೆ. ಅದರ ಪರಿಣಾಮ ಇಬ್ಬರೂ ಹೇಳಿಕೆಗಳನ್ನು ಕೊಡುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದರು.
ಸಚಿವರು, ಶಾಸಕರು ಕಾಂಗ್ರೆಸ್‌ಗೆ ಬರಲಿದ್ದಾರೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ,ಬಿ ಜೆಪಿಯಿಂದ ಯಾರೂ ಹೋಗುವ ಪ್ರಶ್ನೆಯೇ ಇಲ್ಲ’ ಎಂದರು.
‘ರಾಜಕೀಯ ಬೆಳವಣಿಗೆಳ ಬಗ್ಗೆ ವ್ಯಾಖ್ಯಾನಗಳನ್ನು ನಾನು ಈಗ ಮಾಡುವುದಿಲ್ಲ. ಆದರೆ, ಕೆಲವೇ ದಿನ ಕಾಯಿರಿ. ಬಿಜೆಪಿ ಪರವಾಗಿ ಯಾವ ರೀತಿ ಬಲವರ್ಧನೆ ಆಗುತ್ತದೆ ಎಂದು ನೀವೇ ನೋಡಿ‘ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.