ಬೆಳಗಾವಿ: ಸಾಧಾರಣ ಪ್ರಮಾಣದಲ್ಲಿ ಬರಪೀಡಿತವಾಗಿರುವ ತಾಲ್ಲೂಕುಗಳ ರೈತರಿಗೂ ಎನ್‌ಡಿಆರ್‌ಎಫ್‌ನಿಂದ ಪರಿಹಾರ ನೀಡಲು 2016ರ ಬರ ನಿರ್ವಹಣೆ ಕೈಪಿಡಿಗೆ ಸೂಕ್ತ ತಿದ್ದುಪಡಿ ತರಬೇಕು ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಕೇಂದ್ರ ಕೃಷಿ ಸಚಿವ ರಾಧಾಮೋಹನ್ ಸಿಂಗ್ ಅವರಿಗೆ ಗುರುವಾರ ಪತ್ರ ಬರೆದಿರುವ ಅವರು, ‘ಎನ್‌ಡಿಆರ್‌ಎಫ್‌ನ ಈಗಿನ ಮಾನದಂಡಗಳ ಪ್ರಕಾರ ತೀವ್ರ ಬರಗಾಲ ಪೀಡಿತವಾಗಿದ್ದು, ಶೇ 50 ಮತ್ತು ಅದಕ್ಕಿಂತ ಹೆಚ್ಚಿನ ಪ್ರಮಾಣದ ಬೆಳೆ ನಷ್ಟವಾಗಿರುವ ತಾಲ್ಲೂಕುಗಳಿಗೆ ಮಾತ್ರ ಆರ್ಥಿಕ ನೆರವು ಸಿಗಲಿದೆ. ಇದರಿಂದಾಗಿ, ಸಾಧಾರಣ ಬರಪೀಡಿತ ತಾಲ್ಲೂಕಾಗಿದ್ದು, ಶೇ 33ರಿಂದ 50ರವರೆಗೆ ಬೆಳೆ ನಷ್ಟವಾಗಿರುವ ಪ್ರದೇಶಗಳ ರೈತರು ಪರಿಹಾರದಿಂದ ವಂಚಿತರಾಗುತ್ತಿದ್ದಾರೆ’ ಎಂದು ಗಮನ ಸೆಳೆದಿದ್ದಾರೆ.
ಕೃಷಿಕರು ಈಗಾಗಲೇ ಸಂಕಷ್ಟದಲ್ಲಿದ್ದು, ಕೃಷಿಯನ್ನು ಮುಂದುವರಿಸಿಕೊಂಡು ಹೋಗುವುದೇ ದುಸ್ತರವಾಗಿದೆ. ಹೀಗಾಗಿ, ಸಾಧಾರಣ ಬರಪೀಡಿತ ತಾಲ್ಲೂಕುಗಳ ರೈತರನ್ನು ಕೂಡ ಪರಿಹಾರಕ್ಕೆ ಪರಿಗಣಿಸಬೇಕು. ಇಂತಹ ಕ್ರಮದಿಂದ ದೇಶದಾದ್ಯಂತ ಇರುವ ಸಣ್ಣ ರೈತರಿಗೆ ಅನುಕೂಲವಾಗಲಿದೆ ಎಂದು ದೇಶಪಾಂಡೆ ಪ್ರತಿಪಾದಿಸಿದ್ದಾರೆ.
ಶೇ 50ಕ್ಕಿಂತ ಕಡಿಮೆ ಬೆಳೆ ನಷ್ಟ ಅನುಭವಿಸಿರುವ ರೈತರನ್ನು ಪರಿಹಾರಕ್ಕೆ ಪರಿಗಣಿಸದೆ ಇರುವುದು ಈಗ ಚಾಲ್ತಿಯಲ್ಲಿರುವ ಎಸ್‌ಡಿಆರ್‌ಎಫ್/ಎನ್‌ಡಿಆರ್‌ಎಫ್ ನಿಯಮಗಳಿಗೆ ತದ್ವಿರುದ್ಧ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.