ADVERTISEMENT

ಬಜೆಟ್‌ ಗಾತ್ರದ ಶೇ 1ರಷ್ಟೂ ಅಲ್ಪಸಂಖ್ಯಾತರಿಗೆ ಸಿಕ್ಕಿಲ್ಲ: ಜಮೀರ್‌ ಅಹಮದ್‌ ಖಾನ್‌

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2024, 15:49 IST
Last Updated 19 ಫೆಬ್ರುವರಿ 2024, 15:49 IST
ಜಮೀರ್ ಅಹಮದ್ ಖಾನ್
ಜಮೀರ್ ಅಹಮದ್ ಖಾನ್   

ಬೆಂಗಳೂರು: ‘ರಾಜ್ಯ ಸರ್ಕಾರದ ಮುಂದಿನ ಆರ್ಥಿಕ ವರ್ಷದ ಬಜೆಟ್‌ ಗಾತ್ರ ₹ 3.71 ಲಕ್ಷ ಕೋಟಿಯಷ್ಟಿದೆ. ಬಜೆಟ್‌ ಗಾತ್ರದ ಶೇಕಡ 1ರಷ್ಟು ಕೂಡ ಅಲ್ಪಸಂಖ್ಯಾತರಿಗೆ ಸಿಕ್ಕಿಲ್ಲ’ ಎಂದು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ.ಜೆಡ್‌. ಜಮೀರ್‌ ಅಹಮದ್‌ ಖಾನ್‌ ವಿಧಾನಸಭೆಯಲ್ಲಿ ಸೋಮವಾರ ಹೇಳಿದರು.

ಅಲ್ಪಸಂಖ್ಯಾತರ ಕಾಲೋನಿಗಳ ಅಭಿವೃದ್ಧಿ, ವಿದ್ಯಾರ್ಥಿ ವೇತನ ಸೇರಿದಂತೆ ವಿವಿಧ ಯೋಜನೆಗಳಿಗೆ ಬಿಡುಗಡೆಯಾಗಿರುವ ಅನುದಾನದ ಕುರಿತು ಬಿಜೆಪಿಯ ಬಿ.ವೈ. ವಿಜಯೇಂದ್ರ ಕೇಳಿದ ಪ್ರಶ್ನೆಯಿಂದ ಸದನದಲ್ಲಿ ಕೋಲಾಹಲದ ವಾತಾವರಣ ಸೃಷ್ಟಿಯಾಯಿತು.

ಆಗ ಉತ್ತರ ನೀಡಿದ ಸಚಿವರು, ‘ಅಲ್ಪಸಂಖ್ಯಾತರ ಕಾಲೋನಿಗಳ ಅಭಿವೃದ್ಧಿಗೆ ಮೂರು ವರ್ಷಗಳಲ್ಲಿ ₹ 1,000 ಕೋಟಿ ವೆಚ್ಚ ಮಾಡಲು ಕ್ರಿಯಾ ಯೋಜನೆ ರೂಪಿಸಲಾಗಿದೆ. ಮೊದಲ ಹಂತದಲ್ಲಿ ₹ 165 ಕೋಟಿ ಬಿಡುಗಡೆ ಮಾಡಲಾಗಿದೆ’ ಎಂದರು.

ADVERTISEMENT

‘ಬರಗಾಲದಿಂದ ಸಂಕಷ್ಟದಲ್ಲಿರುವ ರೈತರಿಗೆ ಹಣ ಬಿಡುಗಡೆ ಮಾಡಲು ಈ ಸರ್ಕಾರ ಕ್ರಮ ಕೈಗೊಂಡಿಲ್ಲ. ಅಲ್ಪಸಂಖ್ಯಾತರ ಅಭಿವೃದ್ಧಿಗೆ ₹ 10,000 ಕೋಟಿ ಕೊಡಲು ಹೊರಟಿದೆ. ಅನುದಾನ ಬಿಡುಗಡೆಯಲ್ಲೂ ತಾರತಮ್ಯ ಮಾಡುತ್ತಿದೆ’ ಎಂದು ವಿಜಯೇಂದ್ರ ಟೀಕಿಸಿದರು.

‘ಅನುದಾನ ಬಿಡುಗಡೆಯಲ್ಲಿ ಯಾವುದೇ ತಾರತಮ್ಯ ಆಗಿಲ್ಲ. ಬಿಜೆಪಿಯ 29 ಮತ್ತು ಜೆಡಿಎಸ್‌ನ 8 ಶಾಸಕರ ಕ್ಷೇತ್ರಗಳಿಗೂ ತಲಾ ₹ 5 ಕೋಟಿ ಬಿಡುಗಡೆ ಮಾಡಿದ್ದೇನೆ. ಹಲವು ಶಾಸಕರು ಬೇಡಿಕೆ ಪತ್ರವನ್ನೇ ಕೊಟ್ಟಿಲ್ಲ’ ಎಂದು ಸಚಿವರು ಉತ್ತರಿಸಿದರು.

ಮುಸ್ಲಿಮರ ಮತ ಬೇಡವೆನ್ನುವರಿಗೆ ಅನುದಾನ ಏಕೆ?

‘ಮುಸಲ್ಮಾನರ ಮತ ನನಗೆ ಬೇಡ. ಬುರ್ಖಾ ಹಾಕಿದ ಮಹಿಳೆಯರು ಗಡ್ಡ ಬಿಟ್ಟ ಮುಸ್ಲಿಮರು ನಮ್ಮ ಬಳಿ ಬರಬೇಡಿ ಎಂದು ನೀವು ಬಹಿರಂಗವಾಗಿ ಹೇಳಿದ್ದೀರಿ. ಅಲ್ಪಸಂಖ್ಯಾತರ ಅಭಿವೃದ್ಧಿಗೆ ನೀವು ಕೆಲಸ ಮಾಡುವುದಿಲ್ಲ. ಇನ್ನು ಹೇಗೆ ಅನುದಾನ ಕೊಡುವುದು’ ಎಂದು ಸಚಿವ ಜಮೀರ್ ಅಹಮದ್‌ ಪ್ರಶ್ನಿಸಿದರು.

ಪ್ರಶ್ನೋತ್ತರದ ವೇಳೆ ಮಾತನಾಡಿದ ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ ‘ತಮ್ಮ ಕ್ಷೇತ್ರದಲ್ಲಿ ರಾಜ್ಯದಲ್ಲೇ ಅತ್ಯಧಿಕ ಸಂಖ್ಯೆಯ ಅಲ್ಪಸಂಖ್ಯಾತರಿದ್ದಾರೆ. ಅಲ್ಲಿಗೆ ನಯಾಪೈಸೆ ಅನುದಾನ ನೀಡಿಲ್ಲ ಎಂದರು. ಬಿಜೆಪಿಯ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವರು ಬೆಂಬಲಕ್ಕೆ ನಿಂತರು. ಇದಕ್ಕೆ ಉತ್ತರಿಸಿದ ಜಮೀರ್‌  ‘ಅನುದಾನಕ್ಕಾಗಿ ನೀವು ಪತ್ರವನ್ನೂ ಕೊಟ್ಟಿಲ್ಲ. ಅಲ್ಪಸಂಖ್ಯಾತರ ಅಭಿವೃದ್ಧಿಗೆ ಕೆಲಸ ಮಾಡುತ್ತೇನೆ ಎಂದು ವಾಗ್ದಾನ ಕೊಡಿ. ನಿಮ್ಮ ಕ್ಷೇತ್ರಕ್ಕೆ ₹ 10 ಕೋಟಿ ಅನುದಾನ ಕೊಡುತ್ತೇನೆ’ ಎಂದು ಯತ್ನಾಳ್‌ಗೆ ಸವಾಲು ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.