ADVERTISEMENT

ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆಯಲ್ಲಿ ಲೋಪ: 98 ಅಧಿಕಾರಿಗಳಿಗೆ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2024, 0:00 IST
Last Updated 9 ನವೆಂಬರ್ 2024, 0:00 IST
ಶಾಲೆಯ ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಣೆ (ಸಾಂದರ್ಭಿಕ ಚಿತ್ರ)
ಶಾಲೆಯ ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಣೆ (ಸಾಂದರ್ಭಿಕ ಚಿತ್ರ)   

ಬೆಂಗಳೂರು: ಶಾಲಾ ಮಕ್ಕಳಿಗೆ ವಾರಕ್ಕೆ ಆರು ದಿನ ಬೇಯಿಸಿದ ಮೊಟ್ಟೆಯನ್ನು ಸಮರ್ಪಕವಾಗಿ ವಿತರಿಸುವಲ್ಲಿ ವಿಫಲರಾದ 98 ಅಧಿಕಾರಿಗಳಿಗೆ ಶಾಲಾ ಶಿಕ್ಷಣ ಇಲಾಖೆ ನೋಟಿಸ್‌ ನೀಡಿದೆ.

ಪಿ.ಎಂ. ಪೋಷಣ್‌ ಯೋಜನೆ ಅಡಿ ರಾಜ್ಯ ಸರ್ಕಾರ ಎರಡು ಹಾಗೂ ಅಜೀಂ ಪ್ರೇಮ್‌ಜಿ ಫೌಂಡೇಷನ್‌ನಿಂದ ನಾಲ್ಕು ಸೇರಿ ವಾರಕ್ಕೆ ಆರು ಮೊಟ್ಟೆಗಳನ್ನು 48 ಸಾವಿರಕ್ಕೂ ಹೆಚ್ಚು ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ನೀಡಲಾಗುತ್ತಿದೆ. ಮೊಟ್ಟೆ ತಿನ್ನುವುದಿಲ್ಲ ಎಂದು ಬೇಡಿಕೆ ಸಲ್ಲಿಸುವ ಮಕ್ಕಳಿಗೆ ನಿಯಮದಂತೆ ಚಿಕ್ಕಿ, ಬಾಳೆಹಣ್ಣು ವಿತರಿಸಲಾಗುತ್ತಿದೆ.

ಅಜೀಂ ಪ್ರೇಮ್‌ಜಿ ಫೌಂಡೇಷನ್‌ ಮೊಟ್ಟೆ ವಿತರಣೆಗೆ ಕೈಜೋಡಿಸಿದ್ದು, ₹1,500 ಕೋಟಿ ನೆರವು ನೀಡಿದೆ. ಸೆ.25ರಿಂದ ಆರಂಭವಾದ ಮೊಟ್ಟೆ ವಿತರಣೆಯ ಅನುಷ್ಠಾನ ಕ್ರಮ ಕುರಿತು ಫೌಂಡೇಷನ್‌ ಈಚೆಗೆ ಮೌಲ್ಯಮಾಪನ ನಡೆಸಿತ್ತು. ನಾಲ್ಕು ವಿಭಾಗಗಳ 357 ಶಾಲೆಗಳಿಗೆ ಭೇಟಿ ನೀಡಿದಾಗ 66 ಶಾಲೆಗಳು ಈವರೆಗೂ ಮೊಟ್ಟೆ ವಿತರಿಸದಿರುವುದನ್ನು ಪತ್ತೆ ಮಾಡಿತ್ತು.

ADVERTISEMENT

ಫೌಂಡೇಷನ್‌ ಪ್ರತಿನಿಧಿಗಳು ಸಿದ್ಧಪಡಿಸಿದ ಅಧ್ಯಯನ ವರದಿ ಆಧರಿಸಿ ಅನುಷ್ಠಾನದ ಹೊಣೆ ಸಮರ್ಪಕವಾಗಿ ನಿಭಾಯಿಸದ 50 ಬಿಇಒಗಳು ಹಾಗೂ ಪಿ.ಎಂ. ಪೋಷಣ್‌ ಅಭಿಯಾನದ 48 ಸಹಾಯಕ ನಿರ್ದೇಶಕರೂ ಸೇರಿ 98 ಅಧಿಕಾರಿಗಳಿಗೆ ನೋಟಿಸ್‌ ನೀಡಲಾಗಿದೆ.

‘ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಿಸಲು, ದೈಹಿಕ ಆರೋಗ್ಯದ ಬೆಳವಣಿಗೆಗೆ ಉತ್ತೇಜಿಸಲು ಮಧ್ಯಾಹ್ನದ ಬಿಸಿಯೂಟ ಯೋಜನೆ ಆರಂಭಿಸಲಾಗಿದೆ. ಅಜೀಂ ಪ್ರೇಮ್‌ಜಿ ಫೌಂಡೇಷನ್‌ ನೆರವು ನೀಡುತ್ತಿದೆ. ಇಂತಹ ಮಹತ್ವಕಾಂಕ್ಷಿ ಯೋಜನೆ ಯಶಸ್ಸಿಗೆ ಶ್ರಮಿಸಬೇಕಾದ ಅಧಿಕಾರಿಗಳಿಂದ ನಿರ್ಲಕ್ಷ್ಯ ಸಹಿಸಲು ಸಾಧ್ಯವಿಲ್ಲ. ಅಂಥವರ ವಿರುದ್ಧ ಶಿಸ್ತುಕ್ರಮ ಅನಿವಾರ್ಯ’ ಎಂದು ಇಲಾಖೆ ಆಯುಕ್ತ ಕೆ.ವಿ.ತ್ರಿಲೋಕಚಂದ್ರ ಅವರು ಹೇಳಿದ್ದಾರೆ.

ಮಕ್ಕಳು ಕೇಳಿದರೂ ಮೊಟ್ಟೆ ಕೊಡುತ್ತಿಲ್ಲ!
ಕೆಲ ಶಾಲೆಗಳಲ್ಲಿ ಬೇಯಿಸಿದ ಮೊಟ್ಟೆಗೆ ಮಕ್ಕಳು ಬೇಡಿಕೆ ಸಲ್ಲಿಸಿದ್ದರೂ, ಅಂತಹ ಮಕ್ಕಳಿಗೆ ಮೊಟ್ಟೆ ನೀಡದೇ ಚಿಕ್ಕಿ, ಬಾಳೆ ಹಣ್ಣು ವಿತರಿಸಲಾಗುತ್ತಿದೆ ಎಂದು ಅಜೀಂ ಪ್ರೇಮ್‌ಜಿ ಫೌಂಡೇಷನ್‌ ಪ್ರತಿನಿಧಿಗಳು ಸಿದ್ಧಪಡಿಸಿದ ಮೌಲ್ಯಮಾಪನ ಅಧ್ಯಯನ ವರದಿ ಹೇಳಿದೆ. ಚಿಕ್ಕಿ, ಬಾಳೆಹಣ್ಣನ್ನೇ ಹೆಚ್ಚು ಸೇವಿಸುವ ಮಕ್ಕಳಿರುವ ಕೆಲ ಶಾಲೆಗಳಲ್ಲಿ ಶೇ 30ಷ್ಟು ಮಕ್ಕಳು ಚಿಕ್ಕಿ, ಬಾಳೆ ಹಣ್ಣಿಗೆ ಬೇಡಿಕೆ ಸಲ್ಲಿಸಿದ್ದಾರೆ. ಆದರೂ, ಅವರಿಗೆ ಮೊಟ್ಟೆ ಸಿಗುತ್ತಿಲ್ಲ. ಅನಿವಾರ್ಯವಾಗಿ ಅವರು ಶಿಕ್ಷಕರು ನೀಡಿದ ಚಿಕ್ಕಿ, ಬಾಳೆಹಣ್ಣನ್ನೇ ಸೇವಿಸುತ್ತಿದ್ದಾರೆ. ನಿಯಮದಂತೆ ಚಿಕ್ಕಿ ಪ್ರಮಾಣ ಪ್ರತಿ ವಿದ್ಯಾರ್ಥಿಗೆ 35 ಗ್ರಾಂನಿಂದ 40 ಗ್ರಾಂ ಇರಬೇಕು. ಬಹುತೇಕ ಶಾಲೆಗಳಲ್ಲಿ ಇದು 30 ಗ್ರಾಂಗಿಂತ ಕಡಿಮೆ ಇದೆ. ಮೊಟ್ಟೆ ತಿನ್ನದ ಮಕ್ಕಳಿಗೆ ಮೊದಲ ಆದ್ಯತೆಯಾಗಿ ಬಾಳೆಹಣ್ಣು ನೀಡಬೇಕು. ಆದರೂ, ಕೇವಲ ಚಿಕ್ಕಿ ನೀಡಲಾಗುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.