ಬೆಂಗಳೂರು: ಮುಡಾ ಹಿಂದಿನ ಆಯುಕ್ತ ದಿನೇಶ್ ಕುಮಾರ್ ಅವರನ್ನು ಅಮಾನತು ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ, ‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ’ ಕನಿಷ್ಟ ಈಗಲಾದರೂ ಲೂಟಿಕೋರ ಅಧಿಕಾರಿಯೊಬ್ಬರನ್ನು ಅಮಾನತುಗೊಳಿಸಿದೆ ಎಂದು ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ‘ಶೇ. 50:50ರ ಅನುಪಾತದಲ್ಲಿ ಪೂರ್ವಾನ್ವಯವಾಗಿ ನಿವೇಶನ ಪಡೆಯುವುದು ನಿಯಮಬಾಹಿರ ಎಂದು ನಮ್ಮ ಬಿಜೆಪಿ ಸರ್ಕಾರದ ಅವಧಿಯಲ್ಲಿ ನೇಮಿಸಿದ್ದ ತಾಂತ್ರಿಕ ಸಮಿತಿ ಕಳೆದ 3-11-2023 ರಂದೇ ಕಾಂಗ್ರೆಸ್ ಸರ್ಕಾರಕ್ಕೆ ವಿಸ್ತೃತ ವರದಿ ಸಲ್ಲಿಸಿತ್ತು. ಈ ವರದಿಯಲ್ಲಿ ಮುಡಾದಲ್ಲಿ ನಡೆಯುತ್ತಿದ್ದ ಬ್ರಹ್ಮಾಂಡ ಭ್ರಷ್ಟಾಚಾರಗಳ ಬಗ್ಗೆ ಪೂರ್ಣ ಮಾಹಿತಿಯನ್ನು ನೀಡಲಾಗಿತ್ತು.
‘ಕಾಂಗ್ರೆಸ್ ಸರ್ಕಾರದ ಭ್ರಷ್ಟ ಹಗರಣಗಳ ರಕ್ಷಣೆಯ ಪ್ರತೀಕವೆಂಬಂತೆ ಧೂಳು ಹಿಡಿದು ಕುಳಿತಿದ್ದ ತಾಂತ್ರಿಕ ಸಮಿತಿಯ ತನಿಖಾ ವರದಿಯ ಪ್ರತಿಯನ್ನು ನಾವು ಬಿಡುಗಡೆ ಮಾಡಿದ ನಂತರ ಗತ್ಯಂತರವಿಲ್ಲದೆ ಕೈಗೆತ್ತಿಕೊಂಡು ಇದೀಗ ಮುಡಾ ಬ್ರಹ್ಮಾಂಡ ಭ್ರಷ್ಟಾಚಾರದ ರೂವಾರಿಗಳಲ್ಲೊಬ್ಬರಾದ ಹಿಂದಿನ ಆಯುಕ್ತ ಜಿ. ಟಿ.ದಿನೇಶ್ ಕುಮಾರ್ ಅವರನ್ನು ಅಮಾನತುಗೊಳಿಸಲಾಗಿದೆ. ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ’ ಕನಿಷ್ಠ ಈಗಲಾದರೂ ಲೂಟಿಕೋರ ಅಧಿಕಾರಿಯೊಬ್ಬರನ್ನು ಅಮಾನತುಗೊಳಿಸಿದೆ’ ಎಂದಿದ್ದಾರೆ.
‘ಸರ್ಕಾರ ಈ ಕೂಡಲೇ 50:50 ಅನುಪಾತದಲ್ಲಿ ಮುಡಾದಲ್ಲಿ ವಿತರಣೆಯಾಗಿರುವ ಸಾವಿರಾರು ನಿವೇಶನಗಳ ಕ್ರಯವನ್ನು ರದ್ದುಗೊಳಿಸಿ ಅಧಿಸೂಚನೆ ಹೊರಡಿಸಲಿ. ಅಮಾನತಿಗೆ ನೀಡಿರುವ ಕಾರಣಗಳಲ್ಲಿ ಶೇ. 50:50ರ ಅನುಪಾತದಲ್ಲಿ ನಿಯಮ ಬಾಹಿರವಾಗಿ ನಿವೇಶನಗಳನ್ನು ವಿತರಿಸಿರುವ ಅಂಶವನ್ನು ಪ್ರಮುಖವಾಗಿ ಉಲ್ಲೇಖಿಸಲಾಗಿದೆ, ಇದು ಏನು ಹೇಳುತ್ತದೆ ಎಂದರೆ ಶೇ 50:50 ರ ಅನುಪಾತದಲ್ಲಿ ಪೂರ್ವನ್ವಯವಾಗಿ ಮಾನ್ಯ ಸಿದ್ದರಾಮಯ್ಯನವರ ಪತ್ನಿಯವರಿಗೆ ಮಂಜೂರಾಗಿರುವ 14 ನಿವೇಶನಗಳು ಸಂಪೂರ್ಣ ಅಕ್ರಮ ಹಾಗೂ ನಿಯಮಬಾಹಿರ ಎಂಬುದು ಸ್ಪಷ್ಟವಾಗಿದೆ’ ಎಂದು ಹೇಳಿದ್ದಾರೆ
‘ವಿಚಿತ್ರವೆಂದರೆ ಮುಖ್ಯಮಂತ್ರಿಗಳ ಕುಟುಂಬಕ್ಕೆ 14 ನಿವೇಶನಗಳನ್ನು ಬಳುವಳಿ ನೀಡಿದ ಹಿಂದಿನ ಆಯುಕ್ತರೊಬ್ಬರ ವಿರುದ್ಧ ಯಾವುದೇ ಕ್ರಮ ಜರುಗಿಸದೇ ಋಣ ಸಂದಾಯ ಮಾಡಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನ್ಯಾಯಾಲಯದ ಆದೇಶವನ್ನು ಕಾಯುವ ಅಗತ್ಯವಾದರೂ ಏನಿದೆ? ಸರ್ಕಾರವೇ ನಿಮ್ಮ ಧರ್ಮಪತ್ನಿ ಅವರು ಪಡೆದಿರುವ ನಿವೇಶನಗಳು ಅಕ್ರಮ ಹಾಗೂ ನಿಯಮ ಬಾಹಿರ ಎಂದು ಹೇಳಿರುವಾಗ ಈಗಲಾದರೂ ತಮ್ಮ ಭಂಡತನವನ್ನು ಪಕ್ಕಕ್ಕೆ ಸರಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸ್ಥಾನದ ಘನತೆಗೆ ಬಂದಿರುವ ಚ್ಯುತಿಯನ್ನು ಹೋಗಲಾಡಿಸಿ ಗೌರವ ಉಳಿಸಿಕೊಳ್ಳಿ’ ಎಂದು ವಾಗ್ದಾಳಿ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.