ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸಹಯೋಗದಲ್ಲಿ ನೀಡುವ ಪ್ರತಿಷ್ಠಿತ ‘ನೃಪತುಂಗ ಸಾಹಿತ್ಯ ಪ್ರಶಸ್ತಿ’ಗೆ ಲೇಖಕಿ ವೈದೇಹಿ ಅವರನ್ನು ಆಯ್ಕೆ ಮಾಡಲಾಗಿದೆ.
₹7 ಲಕ್ಷ ನಗದು ಮತ್ತು ಪ್ರಮಾಣಪತ್ರವನ್ನು ಈ ಪ್ರಶಸ್ತಿ ಒಳಗೊಂಡಿದೆ. ವೈದೇಹಿ ಎಂಬ ಕಾವ್ಯನಾಮದಿಂದ ಖ್ಯಾತರಾಗಿರುವ ಜಾನಕಿ ಶ್ರೀನಿವಾಸಮೂರ್ತಿ, ಕನ್ನಡದ ಪ್ರಮುಖ ಲೇಖಕಿಯರಲ್ಲಿ ಒಬ್ಬರು. ಸಣ್ಣಕತೆ, ಕಾದಂಬರಿ, ನಾಟಕ, ಮಕ್ಕಳ ಸಾಹಿತ್ಯ, ಅನುವಾದ ಸಾಹಿತ್ಯ, ಪ್ರಬಂಧ ಹೀಗೆ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿಯೂ ಅವರು ಬರೆದಿದ್ದಾರೆ. ಇವರ ಜೀವಮಾನದ ಸಾಧನೆ ಪರಿಗಣಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ತಿಳಿಸಿದ್ದಾರೆ.
ಕರ್ನಾಟಕದಲ್ಲೇ ಅತೀ ಹೆಚ್ಚು ನಗದು ಮೊತ್ತ ಒಳಗೊಂಡ ಪ್ರಶಸ್ತಿ ಇದಾಗಿದೆ. ನೃಪತುಂಗ ಪ್ರಶಸ್ತಿಗೆ ಆಯ್ಕೆಯಾದ ಎರಡನೇ ಮಹಿಳಾ ಸಾಹಿತಿ ವೈದೇಹಿ ಆಗಿದ್ದಾರೆ. 2012ರಲ್ಲಿ ಈ ಪ್ರಶಸ್ತಿಗೆ ಲೇಖಕಿ ಸಾರಾ ಅಬೂಬಕರ್ ಆಯ್ಕೆಯಾಗಿದ್ದರು.
ಮಯೂರ ವರ್ಮ ಪ್ರಶಸ್ತಿ:
ಮಯೂರ ವರ್ಮ ಸಾಹಿತ್ಯ ಪ್ರಶಸ್ತಿಗೆ ಗದಗ ಜಿಲ್ಲೆಯ ಗಜೇಂದ್ರಗಡದ ಹನುಮಂತ ಸೋಮನಕಟ್ಟಿ, ವಿಜಯನಗರ ಜಿಲ್ಲೆಯ ಕೊಟ್ಟೂರಿನ ಗುಡ್ಡಪ್ಪ ಬೆಟಗೇರಿ, ತುಮಕೂರು ಜಿಲ್ಲೆಯ ಸತ್ಯಮಂಗಲ ಮಹಾದೇವ, ಕಾಸರಗೋಡಿನ ವಿದ್ಯಾರಶ್ಮಿ ಪೆಲ್ಲತ್ತಡ್ಕ, ಹಾಸನ ಜಿಲ್ಲೆಯ ಬೇಲೂರು ರಘುನಂದನ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು ತಲಾ ₹25 ಸಾವಿರ ನಗದು ಒಳಗೊಂಡಿದೆ. 45 ವರ್ಷದೊಳಗಿನ ಪ್ರತಿಭಾವಂತ ಸಾಧಕರಿಗೆ ಪ್ರತಿವರ್ಷ ಈ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಮಹೇಶ ಜೋಶಿ ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.