ಬೆಂಗಳೂರು: ಹಿರಿಯ ವಿದ್ವಾಂಸಮಲ್ಲೇಪುರಂ ಜಿ. ವೆಂಕಟೇಶ್ ಅವರು 2021ನೇ ಸಾಲಿನ ‘ನೃಪತುಂಗ ಸಾಹಿತ್ಯ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್ ನೇತೃತ್ವದ ಆಯ್ಕೆ ಸಮಿತಿಯ ಸಭೆ ಮಂಗಳವಾರ ಈ ಆಯ್ಕೆ ಮಾಡಿದೆ.ಪ್ರಶಸ್ತಿಯು ₹ 7 ಲಕ್ಷ ನಗದು ಒಳಗೊಂಡಿದೆ. ಈ ಪ್ರಶಸ್ತಿಯನ್ನುಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿದೆ.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಮಲ್ಲೇಪುರಂ ಜಿ. ವೆಂಕಟೇಶ್ ಅವರು, ಕನ್ನಡ ಕಾವ್ಯ, ವಿಮರ್ಶೆ, ಸಂಶೋಧನೆ ಸೇರಿದಂತೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ 60ಕ್ಕೂ ಅಧಿಕ ಕೃತಿಗಳನ್ನು ಬರೆದಿದ್ದಾರೆ.
45 ವರ್ಷದೊಳಗಿನ ಸಾಹಿತಿಗಳಿಗೆ ನೀಡುವ ‘ಮಯೂರವರ್ಮ ಸಾಹಿತ್ಯ ಪ್ರಶಸ್ತಿ’ಗೆ ಟಿ.ಜಿ. ಶ್ರೀನಿಧಿ, ಮಮತಾ ಅರಸೀಕೆರೆ, ಕಾತ್ಯಾಯಿನಿ ಕುಂಜಿಬೆಟ್ಟು, ಬಸವರಾಜ ಭಜಂತ್ರಿ ಹಾಗೂ ಜಗದೀಶ ಲಿಂಗನಾಯಕ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು ತಲಾ ₹ 25 ಸಾವಿರ ನಗದು ಒಳಗೊಂಡಿದೆ.
ಆಯ್ಕೆ ಸಮಿತಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎಸ್. ರಂಗಪ್ಪ, ವಿಮರ್ಶಕ ಎಸ್.ಆರ್. ವಿಜಯಶಂಕರ, ಸಾಹಿತಿ ಸರಜೂ ಕಾಟ್ಕರ್, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಮುಖ್ಯ ಕಾರ್ಮಿಕ ಮತ್ತು ಕಲ್ಯಾಣ ಅಧಿಕಾರಿ ಮೊಹಮದ್ ಹಫೀಜುಲ್ಲಾ, ಉಪಮುಖ್ಯ ಕಾರ್ಮಿಕ ಕಲ್ಯಾಣ ಅಧಿಕಾರಿ ಮಥುರಾ ರಾಡ್ರಿಕ್ಸ್, ಕ.ರಾ.ರ.ಸಾ.ಸಂಸ್ಥೆಯ ಕೇಂದ್ರ ಕನ್ನಡ ಕ್ರಿಯಾ ಸಮಿತಿಯ ರಾಜ್ಯಾಧ್ಯಕ್ಷ ವ.ಚ. ಚನ್ನೇಗೌಡ ಅವರು ಇದ್ದರು ಎಂದು ಪ್ರಕಟಣೆಯಲ್ಲಿ ಪರಿಷತ್ತಿನ ಗೌರವ ಕಾರ್ಯದರ್ಶಿ ಕೆ. ರಾಜಕುಮಾರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.