ಕಲಬುರ್ಗಿ: ‘ರಾಜ್ಯ ಸರ್ಕಾರ ‘ಕ್ಷೀರಭಾಗ್ಯ’ ಯೋಜನೆ ಅಡಿ ಪೂರೈಸುತ್ತಿರುವ ಹಾಲಿನ ಜತೆಗೆ ‘ಸಾಯಿ ಶ್ಯೂರ್’ ಎಂಬ ಪೌಷ್ಟಿಕಾಂಶದ ಪೌಡರ್ ಬೆರೆಸಿ ನೀಡಲು ನಿರ್ಧರಿಸಲಾಗಿದ್ದು, ಶೀಘ್ರದಲ್ಲೇ ಇದು ರಾಜ್ಯದ ಎಲ್ಲ ಶಾಲೆಗಳಲ್ಲೂ ಜಾರಿಗೆ ಬರಲಿದೆ’ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶಕುಮಾರ್ ತಿಳಿಸಿದರು.
‘ಸದ್ಯ ಪೂರೈಸುತ್ತಿರುವ ಹಾಲು ರುಚಿಕರವಾಗಿಲ್ಲ ಎಂದು ಬಹಳಷ್ಟು ಮಕ್ಕಳು ಕುಡಿಯುತ್ತಿಲ್ಲ. ಹೀಗಾಗಿ, ಹಾಲಿಗೆ ಇನ್ನಷ್ಟು ರುಚಿ ನೀಡುವ ಜತೆಗೆ ಪೌಷ್ಟಿಕಾಂಶ ಭರಿತವಾದ ಪೌಡರ್ ಸೇರಿಸಿ ನೀಡಲು ನಿರ್ಧರಿಸಲಾಗಿದೆ’ ಎಂದು ಅವರು ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಅದಮ್ಯ ಚೇತನ ಹಾಗೂ ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಆಶ್ರಯದಲ್ಲಿ ಪೂರೈಸಲಾಗುವ ಈ ಪುಡಿಯಲ್ಲಿನ ಪೌಷ್ಟಿಕಾಂಶಗಳ ಬಗ್ಗೆ ವೈದ್ಯಕೀಯವಾಗಿ ತಪಾಸಣೆ ಮಾಡಿಸಿ ದೃಢಪಡಿಸಿಕೊಳ್ಳಲಾಗಿದೆ. ಈಗಾಗಲೇ ಹಲವು ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಹಂಚಿದ್ದು, ಮಕ್ಕಳು ತುಂಬ ಖುಷಿಯಿಂದ ಸೇವಿಸಿದ್ದಾರೆ’ ಎಂದು ತಿಳಿಸಿದರು.
‘ಶಾಲೆಗಳಲ್ಲಿ ಬೆಳಗಿನ ಉಪಾಹಾರ ನೀಡಲು ಈಗಾಗಲೇ ಹಲವು ಟ್ರಸ್ಟ್‌ಗಳು ಸಹಯೋಗ ನೀಡಿವೆ. ಇದೇ ಕ್ರಮವನ್ನು ರಾಜ್ಯದಾದ್ಯಂತ ಜಾರಿಗೆ ತರುವ ಉದ್ದೇಶವಿದೆ. ಮಕ್ಕಳ ಸಂಖ್ಯೆ, ವೆಚ್ಚದ ಲೆಕ್ಕಾಚಾರ ಮಾಡಿ ಕೊನೆಯ ನಿರ್ಧಾರ ಮಾಡುತ್ತೇವೆ. ಜತೆಗೆ, ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಪದವಿಪೂರ್ವ ವಿದ್ಯಾರ್ಥಿಗಳಿಗೂ ವಿಸ್ತರಿಸಬೇಕು ಎಂಬ ಬೇಡಿಕೆ ಬಂದಿದೆ. ಇದನ್ನೂ ಸಕಾರಾತ್ಮಕವಾಗಿಯೇ ತೆಗೆದುಕೊಂಡಿದ್ದೇವೆ’ ಎಂದು ಸಚಿವರು ತಿಳಿಸಿದರು.
‘ಕಲ್ಯಾಣ ಕರ್ನಾಟಕ ಭಾಗದಲ್ಲಿ ಯಾವಾಗಲೂ ಕಡಿಮೆ ಫಲಿತಾಂಶ ಬರುತ್ತದೆ, ನಾವು ದಡ್ಡರಿದ್ದೇವೆಯೇ ಸರ್? ಎಂದು ಔರಾದ್‌ನಲ್ಲಿ ಒಬ್ಬ ಬಾಲಕಿ ಪ್ರಶ್ನೆ ಮಾಡಿದ್ದಾಳೆ. ಇದನ್ನು ನಾನು ತುಂಬ ಗಂಭೀರವಾಗಿ ಪರಿಗಣಿಸಿದ್ದೇನೆ. ರಾಜ್ಯದ ಯಾವುದೇ ಭಾಗದ ಮಗುವಿನಲ್ಲೂ ಇಂಥ ಕೀಳರಿಮೆ ಹುಟ್ಟಬಾರದು. ಆ ನಿಟ್ಟಿನಲ್ಲಿ ಜವಾಬ್ದಾರಿಯಿಂದ ನಡೆದುಕೊಳ್ಳುವುದು ನನ್ನ ಕರ್ತವ್ಯ’ ಎಂದೂ ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.