ಮದ್ದೂರು: ಆರು ತಿಂಗಳಿಂದ ಮೂರು ವರ್ಷದ ಮಕ್ಕಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೀಡುವ ‘ಪುಷ್ಠಿ’ ಹೆಸರಿನ ಪೌಷ್ಟಿಕ ಆಹಾರದಲ್ಲಿ ಕಲ್ಲು, ಹೊಟ್ಟು ಸೇರಿದ್ದು ಕಳಪೆಯಾಗಿದೆ ಎಂಬ ಆರೋಪ ಕೇಳಿಬಂದಿದೆ.
ಪಟ್ಟಣದ ಸರ್ ಎಂ.ವಿಶ್ವೇಶ್ವರಯ್ಯ ನಗರದ ಅಂಗನವಾಡಿ ಕೇಂದ್ರದಿಂದ ವಿತರಿಸಿದ 2 ಕೆ.ಜಿ ತೂಕದ ‘ಪುಷ್ಠಿ’ ಆಹಾರ ಪೊಟ್ಟಣದಲ್ಲಿ ಕಳಪೆ ಗುಣಮಟ್ಟದ ಗೋಧಿ, ಸಕ್ಕರೆ, ಹುರಿಕಡಲೆ ಹಾಗೂ ಕಡಲೆಬೇಳೆ ಪುಡಿ ಮಾಡಿ ತುಂಬಲಾಗಿದೆ.
‘ಪುಡಿಯಲ್ಲಿ ಕಲ್ಲು, ಹೊಟ್ಟು, ಗೋಧಿ ಸಿಪ್ಪೆಯೇ ಹೇರಳವಾಗಿದೆ. ಮಕ್ಕಳಿಗೆ ತಿನ್ನಿಸಲು ಆಗದ ಸ್ಥಿತಿಯಲ್ಲಿದೆ’ ಎಂದು ಫಲಾನುಭವಿಗಳಾದ ಚಂದ್ರಕಲಾ, ವಜೀಯಾಭಾನು, ಹಸೀನಾ, ಹರ್ಷಿಯಾ ದೂರಿದರು.
‘ಅಂಗನವಾಡಿ ಕೇಂದ್ರಗಳ ಮೂಲಕ ಹಿಂದೆ ತಿಂಗಳಿಗೆ 2 ಕೆ.ಜಿ ಗೋಧಿ ನುಚ್ಚು, ಹುರಿ ಕಡಲೆಹಿಟ್ಟು ನೀಡುತ್ತಿದ್ದರು. ಈಗ ‘ಪುಷ್ಠಿ ವೀಟ್ ನ್ಯೂಟ್ರಿಮಿಕ್ಸ್’ ಹೆಸರಿನಲ್ಲಿ ಮಿಶ್ರಣ ಮಾಡಿ 2 ಕೆ.ಜಿ ತೂಕದ ತಲಾ ಎರಡು ಪೌಷ್ಟಿಕ ಆಹಾರ ಪೊಟ್ಟಣಗಳನ್ನು ವಿತರಿಸಲಾಗುತ್ತಿದೆ’ ಎಂದು ಬಾಣಂತಿ ಚಂದ್ರಕಲಾ ವಿವರಿಸಿದರು.
‘ಆದರೆ, ಸರಿಯಾಗಿ ಹಿಟ್ಟು ಮಾಡದ ಕಾರಣ ಮಿಶ್ರಣ ಮಾಡಿ ಮಕ್ಕಳಿಗೆ ತಿನ್ನಿಸಲು ಆಗುತ್ತಿಲ್ಲ. ಸಕ್ಕರೆ ಮಿಶ್ರಣ ಮಾಡಿರುವ ಕಾರಣ ಗಿರಣಿಯಲ್ಲಿ ಮತ್ತೆ ಹಿಟ್ಟು ಮಾಡಿಸಲೂ ಆಗುತ್ತಿಲ್ಲ. ಕೆಲವೊಮ್ಮೆ ಅನಿವಾರ್ಯವಾಗಿ ಹಸು, ಎಮ್ಮೆಗಳಿಗೆ ನೀಡಬೇಕಾದ ಪರಿಸ್ಥಿತಿ ಒದಗಿದೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.