ADVERTISEMENT

ಒಬಿಸಿ ಕಲ್ಯಾಣ ಇಲಾಖೆ: 313 ವಾರ್ಡನ್‌ ಹುದ್ದೆಗಳಿಗೆ ನೀಡಿದ್ದ ಬಡ್ತಿ ರದ್ದು–ಕೆಎಟಿ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2024, 8:23 IST
Last Updated 11 ಫೆಬ್ರುವರಿ 2024, 8:23 IST
<div class="paragraphs"><p>ವಿಧಾನಸೌಧ</p></div>

ವಿಧಾನಸೌಧ

   

ಬೆಂಗಳೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 313 ನಿಲಯ ಮೇಲ್ವಿಚಾರಕರಿಗೆ (ಹಾಸ್ಟೆಲ್‌ ಸೂಪರಿಟೆಂಡೆಂಟ್) ನಿಲಯ ಪಾಲಕ (ಹಾಸ್ಟೆಲ್‌ ವಾರ್ಡನ್‌) ಹುದ್ದೆಗಳಿಗೆ ನೀಡಿದ್ದ ಮುಂಬಡ್ತಿಯನ್ನು ಫೆ. 5ರಂದು ರದ್ದುಪಡಿಸಿ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಆದೇಶ ಹೊರಡಿಸಿದೆ.

ಈ ಮುಂಬಡ್ತಿಯಿಂದ ಬಾಧಿತರಾದ ನೌಕರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೆಎಟಿ, ನಿಯಮಬಾಹಿರವಾಗಿ ಮುಂಬಡ್ತಿ ನೀಡಲಾಗಿದೆ ಎಂದು ಅಭಿಪ್ರಾಯಪಟ್ಟಿದೆ.

ADVERTISEMENT

ಮುಂಬಡ್ತಿ ರದ್ದು ಕೋರಿ ಕೆಎಟಿ ಮೆಟ್ಟಿಲೇರಿದ ಎಲ್ಲ ಅರ್ಜಿದಾರರಿಗೆ ಹಿಂದುಳಿದ ವರ್ಗಗಳ ಇಲಾಖೆ ಒಂದು ತಿಂಗಳ ಒಳಗೆ ತಲಾ ₹5 ಸಾವಿರದಂತೆ ದಂಡ ನೀಡಬೇಕು ಎಂದು ಆದೇಶದಲ್ಲಿ ವಿವರಿಸಲಾಗಿದೆ.

ವಾರ್ಡನ್‌ ಹುದ್ದೆಗೆ (ವೇತನ ಶ್ರೇಣಿ ₹ 37,900– ₹ 70,850) ಬಡ್ತಿ ಪಡೆದವರು ತಕ್ಷಣ ನಿಲಯ ಮೇಲ್ವಿಚಾರಕ ವೃಂದದ ಹುದ್ದೆಗೆ ಮರಳಬೇಕು. 2019ರ ವೃಂದ ಮತ್ತು ನೇಮಕಾತಿ ನಿಯಮದ ಪ್ರಕಾರ ವಾರ್ಡನ್ ಹುದ್ದೆಗೆ ನೇಮಕಾತಿಗೆ ನಿರ್ಬಂಧವಿದೆ. ಹೀಗಾಗಿ,  ಬಡ್ತಿ ಪಡೆದು ಈ ವೇತನ ಶ್ರೇಣಿ ಪಡೆಯಲು ಅರ್ಹರಲ್ಲದ ಕಾರಣ, ಬಡ್ತಿ ಪಡೆದು ಹೆಚ್ಚುವರಿಯಾಗಿ ಪಡೆದ ವೇತನ ಮೊತ್ತವನ್ನು ತಿಂಗಳ ಕಂತಿನಲ್ಲಿ ವಸೂಲು ಮಾಡಬೇಕು ಎಂದೂ ಆದೇಶದಲ್ಲ ವಿವರಿಸಲಾಗಿದೆ. 

‘ಕರ್ನಾಟಕ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸೇವಾ (ವೃಂದ ಮತ್ತು ನೇಮಕಾತಿ) ನಿಯಮಗಳು–2019’ ರೂಪಿಸಿ 2019ರ ಅ. 30ರಂದು ಅಧಿಸೂಚನೆ ಹೊರಡಿಸಲಾಗಿದೆ. ಈಗ ಈ ನಿಯಮ ಜಾರಿಯಲ್ಲಿದೆ. ಆಗ ಸೇವೆಯಲ್ಲಿದ್ದವರ ಹೊರತಾಗಿ ವಾರ್ಡನ್‌ ಹುದ್ದೆಗಳನ್ನೇ ರದ್ದು ಮಾಡಲಾಗಿತ್ತು. ಹೊಸ ಹುದ್ದೆಗಳ ಸೃಜನೆಗೂ ಅವಕಾಶ ಇಲ್ಲ. ಅಲ್ಲದೆ, ನಿಲಯ ಮೇಲ್ವಿಚಾರಕರಿಗೆ ಕಚೇರಿ ಮೇಲ್ವಿಚಾರಕರು ಅಥವಾ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಹುದ್ದೆಗೆ ಮಾತ್ರ ಬಡ್ತಿ ನೀಡಲು ಅವಕಾಶ ಕಲ್ಪಿಸಲಾಗಿತ್ತು. ಆದರೆ, 2019ರಲ್ಲಿ ಹೊಸ ನಿಯಮ ಜಾರಿಗೆ ಬಂದು ವಾರ್ಡನ್‌ ಹುದ್ದೆಗಳು ರದ್ದಾಗುವ ಮೊದಲೇ ತಮಗೆ ಬಡ್ತಿಯ ಅರ್ಹತೆ ಇತ್ತು ಎಂದು ಕೆಲವು ನೌಕರರು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಅದರ ಆಧಾರದಲ್ಲಿ ಒಂದು ಬಾರಿಗೆ ಬಡ್ತಿಗೆ ಅವಕಾಶ ನೀಡಲು ಅನುಮತಿ ಕೋರಿ ಇಲಾಖೆಯ ಆಯುಕ್ತರು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು. 2023ರ ಜುಲೈ 21ರಂದು ಇಲಾಖೆಯು 313 ವಾರ್ಡನ್‌ ಹುದ್ದೆಗಳಿಗೆ ಬಡ್ತಿಗೆ ಅನುಮತಿ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.