ADVERTISEMENT

ವರದಕ್ಷಿಣೆ ಕಿರುಕುಳ ಪ್ರಕರಣ: ಪತ್ನಿಯ ವಿರುದ್ಧ ಕಾನೂನು ಕ್ರಮಕ್ಕೆ ಅಸ್ತು

​ಪ್ರಜಾವಾಣಿ ವಾರ್ತೆ
Published 1 ಜುಲೈ 2024, 16:23 IST
Last Updated 1 ಜುಲೈ 2024, 16:23 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ನನ್ನ ಗಂಡನ ಜನನಾಂಗ ಗುಹ್ಯ ರೋಗಕ್ಕೆ ತುತ್ತಾಗಿದೆ. ಮದುವೆಯಾದ ದಿನದಿಂದಲೂ ನನ್ನ ಜೊತೆ ಲೈಂಗಿಕ ಸಂಪರ್ಕ ಹೊಂದಲು ನಿರಾಸಕ್ತಿ ತೋರಿದ್ದಾನೆ. ಆತ ಅಮೆರಿಕದಲ್ಲಿದ್ದು ತನ್ನೊಟ್ಟಿಗೆ ನನ್ನನ್ನೂ ಅಲ್ಲಿಗೆ ಕರೆದೊಯ್ಯಲು ನಿರಾಕರಿಸಿದ್ದಾನೆ. ವರದಕ್ಷಿಣೆ ಕಿರುಕುಳ ನೀಡುವ ಮೂಲಕ ನನಗೆ ಮಾನಸಿಕ ಆಘಾತ ಉಂಟು ಮಾಡಿದ್ದಾನೆ, ನನ್ನನ್ನು ಒಂಟಿ ಮಾಡಿದ್ದಾನೆ...’ ಎಂದೆಲ್ಲಾ ಆರೋಪಿಸಿ 32 ವರ್ಷದ ಮಹಿಳೆಯೊಬ್ಬರು, ಭಾರತೀಯ ದಂಡ ಸಂಹಿತೆ ಹಾಗೂ ವರದಕ್ಷಿಣೆ ನಿಷೇಧ ಕಾಯ್ದೆಯಡಿ ದಾಖಲಿಸಿದ್ದ ದೂರನ್ನು ಹೈಕೋರ್ಟ್‌ ವಜಾಗೊಳಿಸಿದೆ.

ಈ ಕುರಿತಂತೆ ಅಮೆರಿಕದ ಪ್ರಸಿದ್ಧ ಕಂಪನಿಯೊಂದರಲ್ಲಿ ಉತ್ಪಾದನಾ ಘಟಕದ ಎಂಜಿನಿಯರ್ ಆಗಿರುವ 35 ವರ್ಷದ ಪತಿ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿದಾರರ ವಿರುದ್ಧ ವಿಚಾರಣಾ ಕೋರ್ಟ್‌ನಲ್ಲಿರುವ ಪ್ರಕರಣವನ್ನು ರದ್ದುಗೊಳಿಸಿದೆ.

‘ಜುಜುಬಿ ಕಾರಣಗಳಿಗಾಗಿ ಕಾನೂನಿನ ದುರ್ಬಳಕೆ ಮಾಡಿಕೊಂಡು ತನ್ನ ಗಂಡನನ್ನು ಪೊಲೀಸ್‌ ಠಾಣೆ, ಕೋರ್ಟ್‌–ಕಚೇರಿ ಅಲೆಯುವಂತೆ ಮಾಡಿರುವ ಪತ್ನಿಯ ದುರುದ್ದೇಶಪೂರಿತ ನಡೆಯನ್ನು ಆಕ್ಷೇಪಿಸಿ ಅರ್ಜಿದಾರ ಪತಿ ಇಚ್ಛೆಪಟ್ಟಲ್ಲಿ ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗಬಹುದು’ ಎಂದು ಆದೇಶಿಸಿದೆ. 

ADVERTISEMENT

ಪ್ರಕರಣದಲ್ಲಿ ಪೊಲೀಸರ ಹೇಳಿಕೆ ಮತ್ತು ದೋಷಾರೋಪ ಪಟ್ಟಿಯಲ್ಲಿರುವ ಅಂಶಗಳ ಮುಖಾಂತರ ಫಿರ್ಯಾದುದಾರ ಪತ್ನಿಯ ದೂರಿನ ಲೋಪಗಳನ್ನು ಹೆಕ್ಕಿ ತೋರಿಸಿರುವ ನ್ಯಾಯಪೀಠ, ‘ಭಾರತೀಯ ಸಂಪ್ರದಾಯದಂತೆ ವಿಧಿಬದ್ಧವಾಗಿ ಪಾಣಿಗ್ರಹಣ ಮಾಡಿರುವ ತನ್ನ ಪತಿಯ ವಿರುದ್ಧ ಧರ್ಮಪತ್ನಿ ಸಲ್ಲದ ಆರೋಪ ಹೊರಿಸಿ ಆತನನ್ನು ಕಂಗಾಲಾಗಿಸಿದ್ದಾರೆ. ಕ್ಷುಲ್ಲಕ ಮತ್ತು ಕೌಟುಂಬಿಕ ಕಾರಣಗಳಿಗೆ ರೋಗದ ಲೇಪನ ಮಾಡಿ ವ್ಯಾಜ್ಯ ಹೂಡಿ ನ್ಯಾಯಾಲಯದ ಅಮೂಲ್ಯ ಸಮಯ ಹಾಳು ಮಾಡಿದ್ದಾರೆ. ಹೀಗಾಗಿ, ಈ ಪ್ರಕರಣ; ಪತ್ನಿಯ ವಿರುದ್ಧ ಪತಿ ಐಪಿಸಿ ಕಲಂ 211ರ ಅಡಿಯಲ್ಲಿ ಕ್ರಿಮಿನಲ್‌ ದೂರು ದಾಖಲಿಸಿ ತಮಗಾಗಿರುವ ಅನ್ಯಾಯದ ವಿರುದ್ಧ ನ್ಯಾಯಪಡೆಯಲು ಅತ್ಯಂತ ಯೋಗ್ಯವಾಗಿದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.

‘ವರದಕ್ಷಿಣೆ ಬೇಡಿದ್ದಾರೆ ಎಂಬ ಅನುಮಾನಗಳ ಹುತ್ತಕಟ್ಟಿ; ಪತ್ನಿಯು ತನ್ನ ಪತಿಯನ್ನು ಎಚ್‌ಐವಿ, ಸಿಫಿಲಿಸ್, ಹೆಪಟೈಟಿಸ್ ಬಿ ಮತ್ತು ಎಸ್‌ಟಿಡಿ ಪರೀಕ್ಷೆಗಳಿಗೆ ಒಳಪಡುವಂತೆ ಒತ್ತಾಯಿಸಿದ್ದಾರೆ. ಆದರೆ, ಈ ಸಂಬಂಧ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆಸಲಾದ ಈ ಎಲ್ಲಾ ಪರೀಕ್ಷೆಗಳಲ್ಲೂ ಪತಿಗೆ ಯಾವುದೇ ರೋಗವಿಲ್ಲ ಎಂಬುದು ದೃಢಪಟ್ಟಿದೆ. ಆಕೆಯ ತಾಯಿ ಮತ್ತು ಸಹೋದರ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ವರದಕ್ಷಿಣೆ ಕಿರುಕುಳವನ್ನು ನಿರಾಕರಿಸಿದ್ದಾರೆ. ಹೀಗಾಗಿ, ಈ ಪ್ರಕರಣದಲ್ಲಿನ ಸಂಪೂರ್ಣ ದಾಖಲೆಗಳನ್ನು ಗಮನಿಸಿದಾಗ ಪತಿಯ ದೋಷ, ಕೌಟುಂಬಿಕ ಕ್ರೌರ್ಯದ ಆರೋಪಗಳು ನಿರಾಧಾರ ಎಂಬುದು ಸ್ಪಷ್ಟವಾಗಿದೆ’ ಎಂದು ನ್ಯಾಯಪೀಠ ವಿವರಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.