ADVERTISEMENT

ಅಶ್ಲೀಲ ವಿಡಿಯೊ ಪ್ರಕರಣ: ಪ್ರಜ್ವಲ್ ರೇವಣ್ಣ ಅಮಾನತಿಗೆ ಜೆಡಿಎಸ್ ಶಾಸಕ ಆಗ್ರಹ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2024, 4:26 IST
Last Updated 29 ಏಪ್ರಿಲ್ 2024, 4:26 IST
<div class="paragraphs"><p>ಶರಣಗೌಡ ಕಂದಕೂರ</p></div>

ಶರಣಗೌಡ ಕಂದಕೂರ

   

ಯಾದಗಿರಿ: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಅಶ್ಲೀಲ ವಿಡಿಯೊ ಹಿನ್ನಲೆಯಲ್ಲಿ ಅಮಾನತುಗೊಳಿಸಲು ಗುರುಮಠಕಲ್ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ ಆಗ್ರಹಿಸಿದ್ದಾರೆ.

ಈ ಕುರಿತು ಜಾತ್ಯತೀತ ಜನತಾದಳ ಪಕ್ಷ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ADVERTISEMENT

ಕೆಲದಿನಗಳಿಂದ ರಾಜ್ಯಾದ್ಯಂತ ಹರಿದಾಡುತ್ತಿರುವ ಅಶ್ಲೀಲ ವಿಡಿಯೊ ತುಣುಕುಗಳಿಂದ ಪಕ್ಷಕ್ಕೆ ತೀರಾ ಮುಜುಗರ ಉಂಟಾಗಿದೆ. ಈ ವಿಡಿಯೊ ದೃಶ್ಯಗಳಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಅವರು ಕಾಣಿಸಿಕೊಂಡಿದ್ದಾರೆ. ಸದ್ಯ ಮೇಲ್ನೋಟಕ್ಕೆ ಅವರು ತಪ್ಪಿತಸ್ಥರೆಂದು ಭಾವನೆ ಉಂಟಾಗಿದೆ. ಪ್ರಯುಕ್ತ ಅವರನ್ನು ಕೂಡಲೇ ಪಕ್ಷದಿಂದ ಅಮಾನತು ಮಾಡಲು ತಮ್ಮಲ್ಲಿ ಕೋರುತ್ತೇನೆ ಎಂದು ಆಗ್ರಹಿಸಿದ್ದಾರೆ.

ಜಾತ್ಯತೀತ ನೆಲೆಗಟ್ಟಿನ ಮೇಲೆ ಪಕ್ಷವನ್ನು ಕಟ್ಟಿದ್ದೀರಿ. ಪಕ್ಷದ ಚಿಹ್ನೆಯು ಭತ್ತ ಹೊತ್ತ ಮಹಿಳೆಯಾಗಿದ್ದು, ನಿಮಗೆ ಮಹಿಳೆಯರ ಮೇಲಿರುವ ಗೌರವವನ್ನು ಇದು ಪ್ರತಿನಿಧಿಸುತ್ತದೆಂದು ಎಲ್ಲರೂ ಭಾವಿಸಿದ್ದಾರೆ. ಈ ಎಲ್ಲಾ ಹಿನ್ನಲೆ ಪರಂಪರೆಯನ್ನು ಹೊಂದಿರುವ ಪಕ್ಷಕ್ಕೆ ವಿಡಿಯೊ ಪ್ರಕರಣ ತೀವ್ರ ಮುಜುಗರ ತಂದಿರುವುದಂತೂ ಸುಳ್ಳಲ್ಲ. ಈಗಾಗಲೇ ಸರ್ಕಾರ ಈ ಪ್ರಕರಣವನ್ನು ಎಸ್.ಐ.ಟಿಗೆ ಒಪ್ಪಿಸಿದ್ದಾರೆ. ತಾವು ಪಕ್ಷದ ಆಂತರಿಕ ಸಮಿತಿಯನ್ನು ರಚನೆ ಮಾಡಿ, ಆ ಸಮಿತಿ ವಿಡಿಯೊ ಪ್ರಕರಣದ ಸತ್ಯಾಸತ್ಯತೆಯನ್ನು ನಾಡಿನ ತಾಯಂದಿರಿಗೆ ಗೊತ್ತು ಮಾಡುವಂತಾಗಲಿ, ಅಲ್ಲಿಯವರೆಗೆ ಪಕ್ಷದ ಮುಜುಗರವನ್ನು ತಪ್ಪಿಸಲು ಮತ್ತು ಎರಡನೇ ಹಂತದ ಚುನಾವಣೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರದಿರಲು ಕೂಡಲೇ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಪಕ್ಷದಿಂದ ಅಮಾನತು ಮಾಡಲು ತಮ್ಮಲ್ಲಿ ಕೋರುತ್ತೇನೆ ಎಂದು ತಿಳಿಸಿದ್ದಾರೆ.

ನಾನು ತುಂಬಾ ಕಿರಿಯ, ಅತ್ಯಂತ ಹಿರಿಯರಾದ ತಮಗೆ ಸಲಹೆ ಕೊಡುವಷ್ಟು ದೊಡ್ಡವನ್ನಲ್ಲ. ಆದರೆ, ಪರಿಸ್ಥಿತಿ ಹಾಗೆ ಬಂದೊದಗಿದೆ. ಹೀಗಾಗಿ ತಮಗೆ ನಾನು ಪತ್ರ ಬರೆದು ನನ್ನ ಅಂತರಾಳದ ಅಭಿಪ್ರಾಯಗಳನ್ನು ಮುಕ್ತಮನಸ್ಸಿನಿಂದ ವ್ಯಕ್ತಪಡಿಸುತ್ತಿರುವೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.