ADVERTISEMENT

ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ಅಡ್ಡಿ ಸಲ್ಲ: ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 29 ಜೂನ್ 2024, 20:16 IST
Last Updated 29 ಜೂನ್ 2024, 20:16 IST
<div class="paragraphs"><p>ಹೈಕೋರ್ಟ್</p></div>

ಹೈಕೋರ್ಟ್

   

ಬೆಂಗಳೂರು: ‘ವ್ಯಾಪಾರಸ್ಥರು ತಮ್ಮ ಸರಕು ಸಾಗಣೆ ಮಾಡುವಾಗ ವಾಣಿಜ್ಯ ಇಲಾಖೆಗೆ ನೀಡುವ ಮಾರ್ಗವನ್ನು ಹೊರತುಪಡಿಸಿ ಅನುಕೂಲಕರ ಮಾರ್ಗಗಳಲ್ಲಿ ಸಾಗಿದಾಗ ಅದಕ್ಕೆ ವೃಥಾ ಅಡ್ಡಿ ಉಂಟು ಮಾಡುವುದು ಸಲ್ಲ’ ಎಂದು ಹೈಕೋರ್ಟ್ ತೀರ್ಪು ನೀಡಿದೆ.

ಈ ಸಂಬಂಧ, ಬೆಂಗಳೂರಿನ‌ ಮೇಲ್ಮನವಿ ವಿಭಾಗದ ವಾಣಿಜ್ಯ ತೆರಿಗೆ ಜಂಟಿ ಆಯುಕ್ತರು ಸಲ್ಲಿಸಿದ್ದ ನಿರೂಪಣಾ ಅರ್ಜಿಯ ಮೇಲ್ಮನವಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಹಾಗೂ ರಾಮಚಂದ್ರ ಡಿ.ಹುದ್ದಾರ ಅವರಿದ್ದ ವಿಭಾಗೀಯ ನ್ಯಾಯಪೀಠ ವಜಾಗೊಳಿಸಿದೆ.

ADVERTISEMENT

‘ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ನಡಿಗೆ, ವಾಹನ, ಎತ್ತಿನ ಬಂಡಿ, ದೋಣಿ, ವಿಮಾನಯಾನ, ಕುದುರೆಗಳು... ಹೀಗೆ ಸಾಧನಗಳ ಬಳಕೆಯ ಮೂಲಕ ಮುಕ್ತವಾಗಿ ಸಂಚರಿಸಲು ಭಾರತದ ನಾಗರಿಕನಿಗೆ ಸಂವಿಧಾನದ 19(1)(ಡಿ) ವಿಧಿಯು ಅವಕಾಶ ಕಲ್ಪಿಸಿದೆ. ಈ ವಿಧಿಯು ಸರಕು ಸಾಗಣೆ ಮಾಡುವ ವ್ಯಾಪಾರಸ್ಥರಿಗೂ ಅನ್ವಯವಾಗುತ್ತದೆ’ ಎಂಬುದನ್ನು ನ್ಯಾಯಪೀಠ ಎತ್ತಿ ತೋರಿಸಿದೆ.

‘ರಸ್ತೆಗಳು ಕೆಟ್ಟಿದ್ದಾಗ, ಜನರ ಗದ್ದಲ ಉಂಟಾಗಿ ಸಂಚಾರಕ್ಕೆ ಅಡಚಣೆ ಆದಾಗ ಅಥವಾ ಪ್ರಾಕೃತಿಕ ತೊಂದರೆಗಳು ಎದುರಾದಾಗ ಸರಕು ಸಾಗಣೆಯ ವಾಹನಗಳು ನಿಗದಿತ ಚೆಕ್ ಪೋಸ್ಟ್ ಗಳಲ್ಲಿ ಸಾಗದೆ ಅನಿವಾರ್ಯವಾಗಿ ಪರ್ಯಾಯ ಮಾರ್ಗಗಳನ್ನು ಬಳಸಬೇಕಾದ ಪ್ರಮೇಯಗಳಿರುತ್ತವೆ‌. ಇಂತಹ ಸಂದರ್ಭಗಳನ್ನು ವಾಣಿಜ್ಯ ತೆರಿಗೆ ಇಲಾಖೆಯು ಗಂಭೀರವಾಗಿ ಪರಿಗಣಿಸದೆ ಸರಕು ಸಾಗಣೆದಾರರ ಮೇಲೆ ಕಾನೂನು ಬಾಹಿರವಾಗಿ ದಂಡ ವಿಧಿಸುವುದು ಸಲ್ಲ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಪ್ರಕರಣವೇನು?: ನಗರದ ಕಲಾಸಿಪಾಳ್ಯದ, ಮೆಸರ್ಸ್ ಟ್ರಾನ್ಸ್ ವೇಯ್ಸ್ ಇಂಡಿಯಾ ಟ್ರಾನ್ಸ್‌ಪೋರ್ಟ್‌ ಪಾಲುದಾರ ಮೊಹಮದ್ ಮನ್ಸೂರ್ ಮುಂಬೈನಿಂದ ಪೂನಾ-ಬೆಂಗಳೂರು ಮಾರ್ಗದ ಮುಖಾಂತರ ಬೆಂಗಳೂರಿಗೆ ಕೆಲವು ಸರಕುಗಳನ್ನು ಸಾಗಿಸಿದ್ದರು‌.

‘ಸರಕು ಸಾಗಣೆ ವಾಹನವು ತನ್ನ ನಿಗದಿತ ಮಾರ್ಗವನ್ನು ಹೊರತುಪಡಿಸಿ ಬೆಂಗಳೂರಿನ ಬೊಮ್ಮಸಂದ್ರ ಪ್ರದೇಶ ವ್ಯಾಪ್ತಿಯಲ್ಲಿ 20 ಕಿ.ಮೀನಷ್ಟು ದೂರ ಹೊರವಲಯ ಪ್ರವೇಶಿಸಿದೆ. 20 ಕಿ.ಮೀ ಹೊರಭಾಗದ ಸಂಚಾರಕ್ಕೆ ಸೂಕ್ತ ದಾಖಲೆಗಳಿಲ್ಲ’ ಎಂದು ಆರೋಪಿಸಿ ವಾಣಿಜ್ಯ ತೆರಿಗೆ ಅಧಿಕಾರಿಗಳು ದಂಡ ವಿಧಿಸಿದ್ದರು.

ದಂಡ ಪಾವತಿಸಲು ನಿರಾಕರಿಸಿದ್ದ ಮೊಹಮದ್ ಮನ್ಸೂರ್ ತಮ್ಮ ಸರಕು ವಾಹನ ನಿಗದಿತ ಮಾರ್ಗಸೂಚಿಯನ್ನು ಹೊರತುಪಡಿಸಿ ಪರ್ಯಾಯ ಮಾರ್ಗ ಬಳಕೆ ಮಾಡಿದ್ದಕ್ಕೆ ಸ್ಪಷ್ಟನೆ ನೀಡಿದ್ದರು. ಆದರೆ, ಇದನ್ನು ಒಪ್ಪದ ಇಲಾಖೆ ತಕರಾರು ತೆಗೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.