ಬೆಂಗಳೂರು: ವಾಣಿಜ್ಯ ತೆರಿಗೆ ತನಿಖಾ ಠಾಣೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿ ಗೂಗಲ್ ಪೇ ಮತ್ತು ಫೋನ್ ಪೇ ತಂತ್ರಾಂಶಗಳ ಮೂಲಕ ಲಂಚದ ಹಣವನ್ನು ವರ್ಗಾವಣೆ ಮಾಡಿಸಿಕೊಂಡಿರುವುದನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪತ್ತೆಮಾಡಿದೆ.
ಸರಕು ಸಾಗಣೆ ವಾಹನಗಳನ್ನು ತಡೆಹಿಡಿದು ಲಂಚಕ್ಕೆ ಬೇಡಿಕೆ ಇಡುತ್ತಿದ್ದ ಆರೋಪದ ಮೇಲೆ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಎಸಿಬಿ, ಬೆಂಗಳೂರಿನ ವಾಣಿಜ್ಯ ತೆರಿಗೆ ಅಧಿಕಾರಿ ಸೈಯದ್ ಮೊಹಮ್ಮದ್ ಮನೆ, ಅವರ ಕಾರು ಚಾಲಕ ಪಿ. ಕೃಷ್ಣಮೂರ್ತಿ ಮನೆ ಮತ್ತು ಮೈಸೂರಿನ ವಾಣಿಜ್ಯ ತೆರಿಗೆ ನಿರೀಕ್ಷಕ ಸಿ.ಎಂ. ಯಶವಂತ್ ಮನೆಗಳಲ್ಲಿ ಶೋಧ ನಡೆಸಿದೆ.
‘ಈ ಮೂವರೂ ಗೂಗಲ್ ಪೇ ಮತ್ತು ಫೋನ್ ಪೇ ಮೂಲಕ ಸಾರ್ವಜನಿಕರಿಂದ ಹಣ ಪಡೆದಿರುವುದು ಕಂಡುಬಂದಿದೆ. ಹೆಚ್ಚಿನ ತನಿಖೆಗಾಗಿ ಮೂವರ ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ದೇವನಹಳ್ಳಿ ಸೇರಿದಂತೆ ವಿವಿಧೆಡೆ ವಾಣಿಜ್ಯ ತೆರಿಗೆ ತನಿಖಾ ಠಾಣೆಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ತಪಾಸಣೆ ನೆಪದಲ್ಲಿ ದಿನಗಟ್ಟಲೆ ವಾಹನಗಳನ್ನು ಹಿಡಿದಿಟ್ಟುಕೊಳ್ಳುತ್ತಿದ್ದರು. ಸಕಾಲಕ್ಕೆ ಸರಕು ತಲುಪಿಸಲಾಗದೆ ನಷ್ಟ ಆಗುತ್ತಿತ್ತು. ಅದನ್ನು ತಪ್ಪಿಸಿಕೊಳ್ಳಲು ಲಂಚಕ್ಕೆ ಬೇಡಿಕೆ ಇಡುತ್ತಿದ್ದರು. ಈ ಕುರಿತು ಸರಕು ಸಾಗಣೆ ವಾಹನಗಳ ಮಾಲೀಕರು ನೀಡಿದ್ದ ದೂರನ್ನು ಆಧರಿಸಿ ವಾಣಿಜ್ಯ ತೆರಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಸೈಯದ್ ಮನೆಯಲ್ಲಿ ₹ 3.35 ಲಕ್ಷ ನಗದು, 384 ಗ್ರಾಂ. ಚಿನ್ನ, ಒಂದು ಕಾರು ಮತ್ತು ಒಂದು ದ್ವಿಚಕ್ರ ವಾಹನ ಪತ್ತೆಯಾಗಿವೆ. ಯಶವಂತ್ ಮನೆಯಲ್ಲಿ 50 ಗ್ರಾಂ. ಚಿನ್ನ, 1 ಕೆ.ಜಿ. ಬೆಳ್ಳಿ ಹಾಗೂ ಸ್ತಿರಾಸ್ತಿ ದಾಖಲೆಗಳು ದೊರಕಿವೆ. ಕೃಷ್ಣಮೂರ್ತಿ ಮನೆಯಲ್ಲಿ ₹ 2,100 ನಗದು ಪತ್ತೆಯಾಗಿದೆ ಎಂದು ತನಿಖಾ ಸಂಸ್ಥೆ ಮಾಹಿತಿ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.