ಮಂಗಳೂರು: ಪಶ್ಚಿಮ ಕರಾವಳಿಯ ಸುರಕ್ಷತೆಗೆ ಮತ್ತಷ್ಟು ಬಲ ಬಂದಿದ್ದು, ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ಕಡಲ ಗಸ್ತು ಹಡಗು ‘ವರಹ’ ಮಂಗಳವಾರ ಮಂಗಳೂರಿನ ಕೋಸ್ಟ್ ಗಾರ್ಡ್‌ಗೆ ಸೇರ್ಪಡೆಗೊಂಡಿತು.
ಅತ್ಯಾಧುನಿಕ ಸಂವಹನ, ನ್ಯಾವಿಗೇಷನ್, ಸೆನ್ಸಾರ್, ಯಂತ್ರ, ಬೆಂಕಿ ನಿರೋಧಕತೆ ಸೇರಿದಂತೆ ಹಲವು ವಿಶೇಷತೆಗಳನ್ನು ಹೊಂದಿದ ಶ್ವೇತ ವರ್ಣದ ಹಡಗನ್ನು ನವ ಮಂಗಳೂರು ಬಂದರಿನಲ್ಲಿ (ಎನ್‌ಎಂಪಿಟಿಗೆ) ಬ್ಯಾಂಡ್ ನಿನಾದ ಮತ್ತಿತರ ಗೌರವಗಳ ಮೂಲಕ ಕೋಸ್ಟ್ ಗಾರ್ಡ್ ಅಧಿಕಾರಿಗಳು ಬರಮಾಡಿಕೊಂಡರು.ಕ್ಯಾಪ್ಟನ್ ದುಷ್ಯಂತ್ ಕುಮಾರ್ ಹಡಗಿನ ಸಾರಥ್ಯ ವಹಿಸಿದ್ದರು.
‘9,100 ಕಿಲೋವ್ಯಾಟ್ ಸಾಮರ್ಥ್ಯದ ಎರಡು ಡೀಸೆಲ್ ಎಂಜಿನ್‍ಗಳನ್ನು ಹೊಂದಿರುವ ‘ವರಹ’,ಗರಿಷ್ಠ 26 ನಾಟಿಕಲ್ ಮೈಲ್ ವೇಗದಲ್ಲಿ ಚಲಿಸಬಲ್ಲದು. ಇದು 2,100 ಟನ್ ಭಾರವಿದೆ. ಒಂದು ಬಾರಿಗೆ 5 ಸಾವಿರ ನಾಟಿಕಲ್ ಮೈಲ್ ದೂರವನ್ನು ಸುಮಾರು 20 ದಿನಗಳಲ್ಲಿ ಚಲಿಸಬಲ್ಲದು. ಅಷ್ಟು ದಿನಗಳು ಹಡಗಿಗೆ ಬೇಕಾದ ಇಂಧನ ಹಾಗೂ ಸಿಬ್ಬಂದಿಗೆ ಬೇಕಾದ ಎಲ್ಲ ಸಾಮಗ್ರಿಗಳನ್ನು ದಾಸ್ತಾನು ಇಡಬಹುದಾಗಿದೆ’ ಎಂದು ಹಡಗಿನ ಡೆಪ್ಯುಟಿ ಕಮಾಂಡೆಂಟ್ ಸತೀಶ್ ಕುಮಾರ್ ತಿಳಿಸಿದರು.
‘ಪಶ್ಚಿಮದ ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ಲಕ್ಷದ್ವೀಪಗಳ ಕರಾವಳಿಯ ರಕ್ಷಣೆಯಲ್ಲಿ ವರಹ ಪ್ರಮುಖ ಕೊಡುಗೆ ನೀಡಲಿದೆ’ ಎಂದು ಕೋಸ್ಟ್ ಗಾರ್ಡ್ ಕಮಾಂಡರ್, ಡಿಐಜಿ ಎಸ್‍ಎಸ್ ದಸಿಲ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.