ADVERTISEMENT

ಬಿಸಿಲು, ಮಳೆಗೆ ಬೆಚ್ಚಿ ಬೀಳುವರು!

ಬಿಸನಾಳಕೊಪ್ಪ: ಇದು ಯುಕೆಪಿ ಸಂತ್ರಸ್ತರ ಪುನರ್ವಸತಿ ಮಾದರಿ

ವೆಂಕಟೇಶ್ ಜಿ.ಎಚ್
Published 22 ಡಿಸೆಂಬರ್ 2018, 20:44 IST
Last Updated 22 ಡಿಸೆಂಬರ್ 2018, 20:44 IST
ನಾರಾಯಣಪುರ ಜಲಾಶಯದ ಹಿನ್ನೀರಿನಿಂದ ಬಾಧಿತರಾದ ಹುನಗುಂದ ತಾಲ್ಲೂಕಿನ ಬಿಸನಾಳಕೊಪ್ಪ ಗ್ರಾಮಸ್ಥರಿಗೆ 12 ವರ್ಷಗಳಿಂದ ತಗಡಿನ ಶೆಡ್‌ಗಳೇ ನೆಲೆ.ಪ್ರಜಾವಾಣಿ ಚಿತ್ರ: ಮಂಜುನಾಥ ಗೋಡೆಪ್ಪನವರ
ನಾರಾಯಣಪುರ ಜಲಾಶಯದ ಹಿನ್ನೀರಿನಿಂದ ಬಾಧಿತರಾದ ಹುನಗುಂದ ತಾಲ್ಲೂಕಿನ ಬಿಸನಾಳಕೊಪ್ಪ ಗ್ರಾಮಸ್ಥರಿಗೆ 12 ವರ್ಷಗಳಿಂದ ತಗಡಿನ ಶೆಡ್‌ಗಳೇ ನೆಲೆ.ಪ್ರಜಾವಾಣಿ ಚಿತ್ರ: ಮಂಜುನಾಥ ಗೋಡೆಪ್ಪನವರ   

ಬಾಗಲಕೋಟೆ: ಹುನಗುಂದ ತಾಲ್ಲೂಕಿನ ಬಿಸನಾಳಕೊಪ್ಪದ ಮಹಾಂತೇಶಗೆ ಈಗ 29 ವರ್ಷ. ಪೆಟ್ರೋಲ್ ಪಂಪ್‌ನಲ್ಲಿ ಮ್ಯಾನೇಜರ್ ಆಗಿರುವ ಅವರಿಗೆ 18 ಎಕರೆ ಹೊಲ ಕೂಡ ಇದೆ. ಆರ್ಥಿಕವಾಗಿಯೂ ಸದೃಢರಿದ್ದಾರೆ. ಆದರೆ ಅವರಿಗೆ ಕನ್ಯೆ ಸಿಗುತ್ತಿಲ್ಲ. ಈಗಾಗಲೇ 8ರಿಂದ 10 ಕಡೆ ನೋಡಿ ಬಂದಿದ್ದಾರೆ. ಮಹಾಂತೇಶ ಮಾತ್ರವಲ್ಲ ಗ್ರಾಮದಲ್ಲಿ ಮದುವೆ ವಯಸ್ಸಿಗೆ ಬಂದಿರುವ 10ಕ್ಕೂ ಹೆಚ್ಚಿನ ಹುಡುಗ–ಹುಡುಗಿಯರದ್ದೂ ಇದೇ ಕಥೆ.

‘ಕನ್ಯೆ ಕೊಡಲು ಒಪ್ಪಿದವರು ಊರಿಗೆ ಬರುತ್ತಾರೆ ಎಂದ ತಕ್ಷಣ ನಮ್ಮ ಉತ್ಸಾಹವೇ ಉಡುಗುತ್ತದೆ. ಊರಿಗೆ ಬಂದು ಮನೆಗಳನ್ನು (10x10 ಅಳತೆಯ ತಗಡಿನ ಶೆಡ್) ನೋಡುತ್ತಲೇ ಹೆಣ್ಣು ಕೊಡೊಲ್ಲ ಅಂತಾರೆ. ಇಂತಲ್ಲಿ ಬಂದರೆ ನಮ್ಮ ಮಕ್ಕಳ ಬಾಳೇವು ಏನು ಎಂದು ಪ್ರಶ್ನಿಸುತ್ತಾರೆ’ ಎಂದು ಗ್ರಾಮದ ಬಸವರಾಜ ಶಿರೂರ ಅಳಲು ತೋಡಿಕೊಳ್ಳುತ್ತಾರೆ.

ಮಲಪ್ರಭಾ ನದಿ ದಂಡೆಯಲ್ಲಿದ್ದ ಬಿಸನಾಳಕೊಪ್ಪ ನಾರಾಯಣಪುರ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗಿದೆ. ಹಳೆಯ ಊರಿನಿಂದ ಆರು ಕಿ.ಮೀ ದೂರದಲ್ಲಿ ತಗಡಿನ ಶೆಡ್‌ಗಳಲ್ಲಿ ಗ್ರಾಮಸ್ಥರ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿಕೊಡಲಾಗಿದೆ. ಕಳೆದ 12 ವರ್ಷಗಳಿಂದ 130 ಕುಟುಂಬಗಳು ನೆಲೆ ನಿಂತಿವೆ. ಅಲ್ಲಿಂದ ಎರಡು ಕಿ.ಮೀ ದೂರದಲ್ಲಿ ಪುನರ್ವಸತಿ ಕೇಂದ್ರದ ನಿರ್ಮಾಣ ಕಾರ್ಯ ಆಮೆಗತಿಯಲ್ಲಿ ಸಾಗಿದೆ.

ಜೀವ ಕೈಯಲ್ಲಿಡಿಯುತ್ತೇವೆ: ‘ಮಳೆಗಾಲದಲ್ಲಿ ಗಾಳಿಗೆ ಶೆಡ್‌ಗಳ ಮೇಲಿನ ತಗಡು ಹಾರಿ ಹೋಗುತ್ತವೆ. ಈ ವೇಳೆ ತಗಡಿನ ಮೇಲೆ ಇಟ್ಟ ಕಲ್ಲುಗಳು ಮನೆಯೊಳಗಿದ್ದವರ ಮೇಲೆ ಬೀಳುತ್ತವೆ. ಬೇಸಿಗೆಯಲ್ಲಿ 42 ಡಿಗ್ರಿವರೆಗೆ ಬಿಸಿಲು ಏರಿಕೆಯಾಗುತ್ತದೆ. ತಗಡು ಕಾದು ಝಳಕ್ಕೆ ಒಳಗಿದ್ದವರೆಲ್ಲಾ ಬೆಂದು ಹೋಗುತ್ತೇವೆ. ಗರ್ಭಿಣಿ, ಬಾಣಂತಿಯರು, ವಯೋವೃದ್ಧರು, ರೋಗ–ರುಜಿನಿಗೆ ತುತ್ತಾದವರ ಪರಿಸ್ಥಿತಿ ಹೇಳತೀರದು. ಕಾಯಿಲೆಗಿಂತ ಬಿಸಿಲ ಕಾವಿಗೆ ಸಾವಿಗೀಡಾಗಿದ್ದಾರೆ. ಬೇಸಿಗೆಯಲ್ಲಿ ಸುತ್ತಲಿನ ಹೊಲಗಳ ಮರಗಳು, ಟ್ರ್ಯಾಕ್ಟರ್‌ನ ಟ್ರೇಲರ್, ಎತ್ತಿನ ಬಂಡಿಯ ನೆರಳಡಿ ಬಾಳೇವು ಮಾಡುತ್ತೇವೆ’ ಎಂದು ನಿವಾಸಿ ಬಸಪ್ಪ ಕುರಿ ನೋವು ತೋಡಿಕೊಳ್ಳುತ್ತಾರೆ.

ಅಧಿಕಾರಿಗಳು ಬರೊಲ್ಲ:‘ಬಿಸನಾಳ ಕೊಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಂಗನವಾಡಿಗೂ ತಗಡಿನ ಶೆಡ್‌ನಲ್ಲಿಯೇ ಪುನರ್ವಸತಿ ಹೊಂದಿವೆ. ಊರಿಗೆ ಬಸ್ ಸೌಕರ್ಯವೂ ಇಲ್ಲ. ಶೆಡ್‌ಗಳಿಗೆ ಅನಧಿಕೃವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಂಡಿದ್ದೇವೆ. ಪೂರಾ ಹೊತ್ತು ನಿಂತವರನ್ನು ಶಿಕ್ಷಾ ಅಂತಾ ನಮ್ಮೂರಿಗೆ ಹಾಕ್ತಾರ್ರಿ. ಸಾಲಿ ದುಸ್ಥಿತಿಯಿಂದ ಮಕ್ಕಳ ಸಂಖ್ಯೆಯೂ ಕುಸಿಯುತ್ತಿದೆ. 1ರಿಂದ 5ನೇ ತರಗತಿವರೆಗೆ ಬರೀ 23 ಮಕ್ಕಳು ಕಲಿಯುತ್ತಿದ್ದಾರೆ. ನಮ್ಮೂರ ಸಾಲಿಯ ಪುಣ್ಯವೇ ಹೋಗಿದೆ. ಇಲ್ಲಿ ಏನೇ ಆದರೂ ಅಧಿಕಾರಿಗಳು ಮಾತ್ರ ತಲೆಹಾಕೊಲ್ಲ. ಬಂದರಾ ಸವಲತ್ತು ಕೇಳ್ತೀವಿ ಅನ್ನೋ ಲೆಕ್ಕಾಚಾರ’ ಎಂದು ಗ್ರಾಮಸ್ಥರು ಹೇಳುತ್ತಾರೆ.

ಬಿಸನಾಳಕೊಪ್ಪದವರಿಗೆ ಇನ್ನೂ ಪುನರ್ವಸತಿಯನ್ನೇ ಕಲ್ಪಿಸಿಲ್ಲ. ಆದರೆ ಪುನರ್‌ವಸತಿ ಕಲ್ಪಿಸಿದ ಕಡೆಯೂ ಸಂತ್ರಸ್ತರ ಸ್ಥಿತಿ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ಈಗಲೂ ಹಲವರು ಪುನರ್ವಸತಿ ಕೇಂದ್ರಗಳಲ್ಲೂ ತಗಡಿನ ಶೆಡ್‌ಗಳಲ್ಲಿ ವಾಸವಿದ್ದಾರೆ.

‘ರಸ್ತೆ, ಗಟಾರ, ಒಳಚರಂಡಿ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಿದ ನಂತರ ಸಂತ್ರಸ್ತರಿಗೆ ಮನೆ ಕಟ್ಟಿಕೊಳ್ಳಲು ನಿವೇಶನ ಗುರುತಿಸಲಾಗುತ್ತದೆ. ಅಷ್ಟೊತ್ತಿಗೆ ಮನೆ ಕಟ್ಟಿಕೊಳ್ಳಲು ಪರಿಹಾರ ಕೊಟ್ಟು ನಾಲ್ಕೈದು ವರ್ಷ ಆಗಿರುತ್ತದೆ. ನಿವೇಶನ ಕೈಗೆ ಬರುವ ವೇಳೆಗೆ ಸಂತ್ರಸ್ತರ ಬಳಿ ಹಣ ಇರುವುದಿಲ್ಲ. ಹಾಗಾಗಿ ಮನೆಯ ಬದಲಿಗೆ ತಗಡಿನ ಶೆಡ್ ಕಾಣಸಿಗುತ್ತದೆ’ ಎಂದು ಸ್ಥಳೀಯರಾದ ಶ್ರೀಧರ್ ಹೇಳುತ್ತಾರೆ.

‘ಮನೆಗೆ ತಳಪಾಯ ಹಾಕುವ ಮುನ್ನ, ಆರ್‌ಸಿಸಿ ವೇಳೆಗೆ, ಪೂರ್ಣಗೊಂಡ ನಂತರ ಹೀಗೆ ಮೂರು ಹಂತಗಳಲ್ಲಿ ಪರಿಹಾರ ನೀಡುವ ವ್ಯವಸ್ಥೆ ಈ ಹಿಂದೆ ಜಾರಿಯಲ್ಲಿತ್ತು. ಅದೇ ಸೂಕ್ತವಾಗಿತ್ತು. ಮತ್ತೆ ಅದೇ ಪದ್ಧತಿ ಬರಲಿ’ ಎನ್ನುತ್ತಾರೆ.

ಪುನರ್ವಸತಿ: ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯಗಳು ನಿರ್ಮಾಣವಾಗಿದ್ದು, ಮೊದಲ ಹಾಗೂ ಎರಡನೇ ಹಂತ ಪೂರ್ಣಗೊಂಡಿದೆ. ಮೂರನೇ ಹಂತದಲ್ಲಿ ಆಲಮಟ್ಟಿ ಜಲಾಶಯದ ಎತ್ತರ 519.60 ಮೀಟರ್‌ನಿಂದ 524.256 ಮೀಟರ್‌ಗೆ ಹೆಚ್ಚಿಸುವ ಮೂಲಕ ಬಚಾವತ್ ತೀರ್ಪಿನ ಅನ್ವಯ ತನ್ನ ಪಾಲಿನ 173 ಟಿಎಂಸಿ ಅಡಿ ನೀರಿನ ಸಂಪೂರ್ಣ ಬಳಕೆಗೆ ಮುಂದಾಗಿದೆ. ಮೂರನೇ ಹಂತದ ಕಾಮಗಾರಿ ಪೂರ್ಣಗೊಂಡಲ್ಲಿ 22 ಹಳ್ಳಿಗಳು ಹಾಗೂ ಬಾಗಲಕೋಟೆ ನಗರದ 12 ವಾರ್ಡ್‌ಗಳು ಸೇರಿದಂತೆ 96,640 ಎಕರೆ ಭೂಮಿ ಮುಳುಗಡೆಯಾಗಲಿದೆ. ಭೂಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ. 32,427 ಕುಟುಂಬಗಳು ಬಾಧಿತವಾಗಲಿದ್ದು, 20 ಪುನರ್‌ವಸತಿ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.