ADVERTISEMENT

ಒಳನೋಟ| ‘ಸಂತಾನ’ ಕಲ್ಪಿಸುವ ‘ಸೃಷ್ಟಿ’ಕರ್ತರ ಕರಾಮತ್ತು!

ರಾಜೇಶ್ ರೈ ಚಟ್ಲ
Published 12 ಅಕ್ಟೋಬರ್ 2019, 20:01 IST
Last Updated 12 ಅಕ್ಟೋಬರ್ 2019, 20:01 IST
   

ಬೆಂಗಳೂರು: ಮಕ್ಕಳಿಲ್ಲದ ದಂಪತಿ, ಆ ಕೊರಗಿನಿಂದ ಹೊರಬರಲು ‘ಬಾಡಿಗೆ ತಾಯ್ತನ’ ಕೇಂದ್ರಗಳ ಮೊರೆ ಹೋಗುವುದು ಸಾಮಾನ್ಯ. ಆದರೆ, ಹೀಗೆ ನೊಂದವರ ದೌರ್ಬಲ್ಯವನ್ನೇ ಬಂಡವಾಳ ಮಾಡಿಕೊಳ್ಳುವ ಐವಿಎಫ್‌ (ಇನ್ ವಿಟ್ರೊ ಫರ್ಟಿಲೈಸೇಷನ್) ಕೇಂದ್ರಗಳೆಂಬ 'ಸೃಷ್ಟಿ'ಕರ್ತರು, ‘ಸಂತಾನ ಭಾಗ್ಯ’ ಕಲ್ಪಿಸುವುದನ್ನೇ ದಂಧೆಯಾಗಿ ಮಾಡಿಕೊಂಡಿದ್ದಾರೆ.

‘ಬಾಡಿಗೆ ತಾಯ್ತನ (ನಿಯಂತ್ರಣ) ಮಸೂದೆ’ ಇನ್ನೂ ಕಾಯ್ದೆ ಸ್ವರೂಪ ಪಡೆದಿಲ್ಲ. ಅದರ ಲಾಭ ಪಡೆಯುತ್ತಿರುವ ಇಂತಹ ಕ್ಲಿನಿಕ್‌ಗಳು ಅಮಾಯಕರನ್ನು ಹಗಲು ದರೋಡೆ ಮಾಡುತ್ತಿವೆ. ಸಂತಾನಹೀನತೆ ನೀಗಿಸುವ ಕುರಿತು ಶೇ 100ರಷ್ಟು ಖಾತರಿ ನೀಡಲು ಸಾಧ್ಯವಿಲ್ಲ. ಆದರೂ, ನೂರಕ್ಕೆ ನೂರರಷ್ಟು ಖಾತರಿ ನೀಡುವ ಜಾಹೀರಾತುಗಳನ್ನು ಪ್ರಕಟಿಸಿ ಸಂತಾನರಹಿತರ ‘ಭಾವನೆ’ಗಳ ಜೊತೆ ಚೆಲ್ಲಾಟವಾಡುತ್ತಿವೆ. ‌ಈ ‘ವ್ಯವಹಾರ’ದಲ್ಲಿ ಸಿಲುಕಿದವರ ಪೈಕಿ ಅನೇಕರು, ಕರುಳು ಕುಡಿ ಇಲ್ಲವೆಂಬ ನೋವಿನ ಜೊತೆಗೇ ಹಣ ಕಳೆದುಕೊಂಡ ನೋವನ್ನೂ ನುಂಗಿಕೊಂಡು ಸುಮ್ಮನಾಗುತ್ತಾರೆ. ಅಲ್ಲೊಂದು – ಇಲ್ಲೊಂದು ಪ್ರಕರಣಗಳು ಮಾತ್ರ ಬಯಲಿಗೆ ಬರುತ್ತವೆ ಅಷ್ಟೆ. ಇಂಥದ್ದೇ ಆರೋಪ ಎದುರಿಸುತ್ತಿದ್ದ ಕೆ.ಟಿ. ­ಗುರುಮೂರ್ತಿ 80ಕ್ಕೂ ಹೆಚ್ಚು ಮಹಿಳೆಯರಿಗೆ ಐವಿಎಫ್‌ ಮೂಲಕ ಸಂತಾನ ಭಾಗ್ಯ ಕಲ್ಪಿಸುವ ಭರವಸೆ ನೀಡಿ ‘ಟೋಪಿ’ ಹಾಕಿ ತಲೆಮರೆಸಿಕೊಂಡಿದ್ದಾನೆ!

ಬೆಂಗಳೂರಿನ ಬಸವೇಶ್ವರನಗರದ ಹಾವನೂರು ವೃತ್ತದ ಬಳಿ ಗುರುಮೂರ್ತಿ ಆರಂಭಿಸಿದ್ದ ‘ಸೃಷ್ಟಿ ಗ್ಲೋಬಲ್‌ ಮೆಡಿಕೇರ್‌ ಆ್ಯಂಡ್‌ ರಿಸರ್ಚ್ ಫೌಂಡೇ­ಶನ್‌’ಗೆ ರಾಜ್ಯ ಸರ್ಕಾರ ಬೀಗ ಜಡಿದಿದೆ (2015ರಲ್ಲಿ). ನಕಲಿ ದಾಖಲಾತಿ ಇಟ್ಟುಕೊಂಡು ‘ಸ್ತ್ರೀ ರೋಗ ತಜ್ಞ’ ಎಂದು ಚಿಕಿತ್ಸೆ ನೀಡುತ್ತಿದ್ದ ಆರೋಪದಲ್ಲಿ ಕಾಮಾಕ್ಷಿ­­ಪಾಳ್ಯ ಪೊಲೀಸರು ಗುರುಮೂರ್ತಿಯನ್ನು ಬಂಧಿಸಿದ್ದರು. ಬಂಜೆತನ ನಿವಾರಿಸುವ ನೆಪದಲ್ಲಿ ₹ 2 ಲಕ್ಷದಿಂದ ₹ 12 ಲಕ್ಷದವರೆಗೆ ವಸೂಲಿ ಮಾಡುತ್ತಿದ್ದ ಗುರುಮೂರ್ತಿ, ಸಂಸ್ಥೆಯ ‘ಬ್ರ್ಯಾಂಡ್‌’ ಹೆಚ್ಚಿಸಿಕೊಳ್ಳಲು ಚಿತ್ರನಟಿ
ಯರು ಸೇರಿದಂತೆ ಖ್ಯಾತನಾಮರನ್ನು ಬಳಸಿಕೊಂಡಿದ್ದ.

ADVERTISEMENT

‘ಬಾಡಿಗೆ ತಾಯಂದಿರ ಮೂಲಕ ಮಕ್ಕಳನ್ನು ಕರುಣಿಸುವುದಾಗಿ ನಂಬಿಸಿ ಲಕ್ಷಾಂತರ ಹಣ ಪಡೆದು ಗುರುಮೂರ್ತಿ ವಂಚಿಸಿದ್ದಾನೆಂದು ಆರೋಪಿಸಿ ಅನೇಕ ಮಹಿಳೆಯರು ವಿವಿಧ ಠಾಣೆಗಳಲ್ಲಿ ದೂರು ನೀಡಿದ್ದರು. ದೂರುದಾರರ ಪೈಕಿ ಅರ್ಧದಷ್ಟು ಮಂದಿಗೆ ಗುರುಮೂರ್ತಿ ಹಣ ಮರಳಿಸಿದ್ದಾನೆ. ಈಗ ಆತ ನಾಪತ್ತೆಯಾಗಿರುವುದಾಗಿ ಪತ್ನಿ ರಾಜರಾಜೇಶ್ವರಿನಗರದ ಠಾಣೆಯಲ್ಲಿ ದೂರು ನೀಡಿದ್ದಾರೆ. ‘ಸೃಷ್ಟಿ’ಕರ್ತ ಗುರುಮೂರ್ತಿಯ ಕರಾಮತ್ತುಗಳು ಇನ್ನೂ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ’ ಎಂದು ಕಾಮಾಕ್ಷಿಪಾಳ್ಯ ಠಾಣೆಯ ಇನ್‌ಸ್ಪೆಕ್ಟರ್‌ ವಿವರಿಸಿದರು.

ಏಳೇ ತಿಂಗಳಲ್ಲಿ ಮಗು!: ದಶಕದ ಹಿಂದಿನ ಕಥೆಯದು. ವಿವಾಹವಾಗಿ ಎಂಟು ವರ್ಷಗಳಾದರೂ ಮಕ್ಕಳ ಭಾಗ್ಯ ಕಾಣದ ಡಾನ್‌ಬಾಸ್ಕೊ– ಸರಳಾದೇವಿ ದಂಪತಿಗೆ ಬಾಡಿಗೆ ತಾಯಿ ಮೂಲಕ ಮಗು ಪಡೆಯಲು ನೆರವು ನೀಡುವುದಾಗಿ ನಂಬಿಸಿದ್ದ ಗುರುಮೂರ್ತಿ, ಮುಂಗಡವಾಗಿ ₹ 3.50 ಲಕ್ಷ ಪಡೆದಿದ್ದ. ಡಾನ್‌ಬಾಸ್ಕೊ ಅವರ ವೀರ್ಯ ಸಂಗ್ರಹಿಸಿದ ಬಳಿಕ, ‘ನಿಮ್ಮ ವೀರ್ಯ ಶಕ್ತಿಯುತವಾಗಿದೆ. ಅದನ್ನು ಬಾಡಿಗೆ ತಾಯಿ ಗರ್ಭಕ್ಕೆ ಸೇರಿಸಲಾಗುವುದು. ಈ ಬಗ್ಗೆ ನಿಮಗೆ ಕಾಲ ಕಾಲಕ್ಕೆ ಮಾಹಿತಿ ನೀಡುತ್ತೇವೆ’ ಎಂದೂ ಹೇಳಿದ್ದಾನೆ.

ವೀರ್ಯ ನೀಡಿದ ಏಳೇ ತಿಂಗಳಲ್ಲಿಬಾಸ್ಕೊ ದಂಪತಿಯನ್ನು ಸಂಪರ್ಕಿಸಿದ್ದ ಗುರುಮೂರ್ತಿ, ‘ಬಾಡಿಗೆ ತಾಯಿಯಿಂದ ನಿಮಗೆ ಗಂಡು ಮಗು ಜನಿಸಿದೆ. ಬಂದು ತೆಗೆದುಕೊಂಡು ಹೋಗಿ’ ಎಂದಿದ್ದಾನೆ. ಇದರಿಂದ ಆಶ್ಚರ್ಯಗೊಂಡ ದಂಪತಿ, ‘ಏಳು ತಿಂಗಳಲ್ಲಿ ಮಗು ಜನಿಸಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದ್ದಾರೆ. ‘ನಿಮಗೆ ಮಗು ಬೇಕಿದ್ದರೆ ತೆಗೆದುಕೊಳ್ಳಿ, ಬೇಡವಾದರೆ ಬಿಡಿ, ಆದರೆ, ನಿಮ್ಮ ಹಣ ವಾಪಸ್ ನೀಡುವುದಿಲ್ಲ’ ಎಂದಿದ್ದಾನೆ. ‘ಏಳು ತಿಂಗಳಲ್ಲೇ ಮಗು ಜನಿಸಿರಬಹುದು’ ಎಂಬ ಅನುಮಾನದಿಂದಲೇ ಮಗುವನ್ನು ಸ್ವೀಕರಿಸಿ, ಪೋಷಿಸಿದ್ದಾರೆ.

ಅದರೆ, ಮಗುವಿನ ಬೆಳವಣಿಗೆ ಕುಂಠಿತ ಗೊಂಡಿರುವ ಬಗ್ಗೆ ಕೊರಗಿ ಕೊರಗಿ ಸರಳಾದೇವಿ ನಿಧನರಾಗುತ್ತಾರೆ. ತನ್ನ ವೀರ್ಯದಿಂದಲೇ ಜನಿಸಿದ ಮಗುವೇ ಎಂಬ ಬಗ್ಗೆ ಅನುಮಾನ ಹೊಂದಿದ್ದ ಬಾಸ್ಕೊ, ಹೈದರಾ­ಬಾದಿನ ಪ್ರಯೋಗಾಲಯ­ವೊಂದರಲ್ಲಿ ಡಿಎನ್‌ಎ ಪರೀಕ್ಷೆ ಮಾಡಿಸಿದ್ದರು. ಪರೀಕ್ಷೆಯಲ್ಲಿ ತಾನು ಮಗುವಿನ ನಿಜವಾದ ತಂದೆಯಲ್ಲ ಎಂಬ ಸಂಗತಿ ಬಹಿರಂಗವಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ನಂದಿನಿ ಲೇಔಟ್‌ ಠಾಣೆಯಲ್ಲಿ ದೂರು ನೀಡಿದ್ದರು. ಹೀಗಾಗಿ, ಆಗ ಮಾರಾಟ ಮಾಡುವ ಉದ್ದೇಶದಿಂದ ನವಜಾತ ಶಿಶು ಅಪಹರಣ, ಕಳ್ಳಸಾಗಣೆ, ವಂಚನೆ, ಬೆದರಿಕೆ ಹಾಗೂ ಅಪರಾಧ ಉದ್ದೇಶ ಸಂಬಂಧ ಪ್ರಕರಣ ದಾಖಲಿಸಿಕೊಂಡು ಗುರುಮೂರ್ತಿಯನ್ನು ಪೊಲೀಸರು ಬಂಧಿಸಿದ್ದರು.

₹ 34 ಲಕ್ಷ ದಂಡ: ಸಂತಾನರಹಿತ ದಂಪತಿಗೆ ಮಕ್ಕಳ ಆಸೆ ಹುಟ್ಟಿಸಿ ಮೋಸ ಮಾಡಿದ ಗುರುಮೂರ್ತಿಗೆ, ಒಂಬತ್ತು ಪ್ರತ್ಯೇಕ ಪ್ರಕರಣಗಳಲ್ಲಿ, ವಂಚನೆಯ ಪ್ರಮಾಣ ಆಧರಿಸಿ ಬೆಂಗಳೂರಿನ ಗ್ರಾಹಕರ ವ್ಯಾಜ್ಯಗಳ ಪರಿಹಾರ ನ್ಯಾಯಾಲಯ 2014ರ ಮೇ 30ರಂದು ₹ 34 ಲಕ್ಷ ದಂಡ ವಿಧಿಸಿದೆ. ಬೆಂಗಳೂರಿನ ಚೋಳನಾಯಕನಹಳ್ಳಿ, ಪದ್ಮನಾಭನಗರ, ಕೆಂಗೇರಿ ಉಪನಗರ, ರಾಜಾಜಿನಗರ, ಬ್ಯಾಡರಹಳ್ಳಿ, ಬನ್ನೇರುಘಟ್ಟ ಮರಿಯಮ್ಮನಪಾಳ್ಯ ಹಾಗೂ ರಾಜ್ಯದ ತರೀಕೆರೆ, ಶಿವಮೊಗ್ಗದ ಸಂತ್ರಸ್ತರು ದೂರು ಸಲ್ಲಿಸಿದ್ದರು.‌ ಆದರೆ, ಅನೇಕರಿಗೆ ಪರಿಹಾರ ಮರೀಚಿಕೆಯಾಗಿದೆ!

ಸಂತಾನಹೀನತೆಗೆ ಕಾರಣಗಳು

-ವಯಸ್ಸು

-ಆನುವಂಶಿಕ ಕಾರಣಗಳು

-ಜೀವನಶೈಲಿ (ಧೂಮಪಾನ, ಮದ್ಯಪಾನ, ಮಾನಸಿಕ ಒತ್ತಡ, ಅನಾರೋಗ್ಯಕರ ಆಹಾರಪದ್ಧತಿ)

-ಆರೋಗ್ಯ ಸಮಸ್ಯೆಗಳು (ಋತುಚಕ್ರದಲ್ಲಿ ಸಮಸ್ಯೆ; ಗರ್ಭಕೋಶ, ಅಂಡಾಶಯ, ಅಂಡಾಣು, ಅಂಡನಾಳಗಳಲ್ಲಿ ಸಮಸ್ಯೆ, ವೀರ್ಯಾಣು ಸಂಖ್ಯೆಯಲ್ಲಿ ಕೊರತೆ, ಆರೋಗ್ಯವಂತ ವೀರ್ಯಾಣುವಿನ ಕೊರತೆ, ಮಧುಮೇಹ, ಥೈರಾಯ್ಡ್‌, ಪಿಸಿಓಡಿ)

ಬಾಡಿಗೆ ತಾಯಿಯೂ ಇಲ್ಲ ಮಗುವೂ ಇಲ್ಲ

ಮೈಸೂರಿನ ಮಾರ್ಟಿನ್ ಸುಜಯ್, ತಮ್ಮ ತಾಯಿ ಆಸೆ ನೆರವೇರಿಸುವುದಕ್ಕಾಗಿ ಬಾಡಿಗೆ ತಾಯಿ ಮೂಲಕ ಮಗು ಪಡೆಯಲು ಬಯಸಿದ್ದರು. ಆದರೆ, ತನ್ನನ್ನು ಬೆಂಗಳೂರಿನ ಡಾ. ರಮಾಸ್‌ ಫರ್ಟಿಲಿಟಿ ಐವಿಫ್‌ ಕೇಂದ್ರ ವಂಚಿಸಿದೆ ಎಂದು ಗೊತ್ತಾಗುತ್ತಲೇ ಅವರು ಗ್ರಾಹಕರ ನ್ಯಾಯಾಲಯದ ಮೊರೆ ಹೋಗಿದ್ದರು. ‘ಬಾಡಿಗೆ ತಾಯಿಯೂ ಇಲ್ಲದ, ಮಗುವೂ ಇಲ್ಲದ ಪ್ರಸಂಗ’ವನ್ನು ಗಂಭೀರವಾಗಿ ಪರಿಗಣಿಸಿದ್ದ ನ್ಯಾಯಾಲಯ, ಮಾರ್ಟಿನ್‌ಗೆ ₹ 3 ಲಕ್ಷ ನಷ್ಟ ಪರಿಹಾರವನ್ನು ಮತ್ತು ಜೊತೆಗೆ ಆತ ನೀಡಿದ್ದ ₹ 4.75 ಲಕ್ಷ ಹಣವನ್ನು ಶೇ 10 ಬಡ್ಡಿ ಸಹಿತ ಮರಳಿಸುವಂತೆ ಆದೇಶಿಸಿತ್ತು.

2016ರಲ್ಲಿ ಪತ್ರಿಕೆಗಳಲ್ಲಿ ಜಾಹೀರಾತುಗಳನ್ನು ನೋಡಿ ರಮಾಸ್ ಫರ್ಟಿಲಿಟಿ ಐವಿಎಫ್ ಸೆಂಟರ್‌ಗೆ ಮಾರ್ಟಿನ್ ಭೇಟಿ ನೀಡಿದ್ದರು. ಬಾಡಿಗೆ ತಾಯಿಯ ಮೂಲಕ ಒಂದು ಮಗುವಿಗೆ ₹ 7 ಲಕ್ಷ, ಅವಳಿ ಮಕ್ಕಳಿಗೆ ₹ 8.5 ಲಕ್ಷ ರೂಪಾಯಿ ಶುಲ್ಕ ಭರಿಸುವಂತೆ ಕೇಂದ್ರ ಹೇಳಿತ್ತು. ಮಾರ್ಟಿನ್‌ ಮುಂಗಡವಾಗಿ ₹ 2.25 ಲಕ್ಷ ಪಾವತಿಸಿದ್ದರು. ಆದರೆ, ಬಾಡಿಗೆ ತಾಯಿ ಯಾರು ಎಂಬುದನ್ನು ದಿನಗಳೆದರೂ ಭೇಟಿ ಮಾಡಿಸಲಿಲ್ಲ. ಸುಮಾರು ಎಂಟು ತಿಂಗಳ ನಂತರ ಮತ್ತೆ ₹ 2.50 ಲಕ್ಷ ಪಾವತಿಸಲು ಸೂಚಿಸಿದ ವೈದ್ಯರು, ಇನ್ನೇನು ಬಾಡಿಗೆ ತಾಯಿ ಬರುತ್ತಿದ್ದಾರೆ. ಟ್ರಾಫಿಕ್‌ನಲ್ಲಿ ಸಿಲುಕಿದ್ದಾರೆ ಎಂದಿದ್ದರು. ಬಳಿಕ, ಬಾಡಿಗೆ ತಾಯಿ ಅಪಘಾತಕ್ಕೀಡಾಗಿದ್ದಾರೆ ಎಂದು ತಿಳಿಸಿದ ವೈದ್ಯರು, ಮತ್ತೊಬ್ಬ ಬಾಡಿಗೆ ತಾಯಿ ಹುಡುಕುವ ಭರವಸೆ ನೀಡಿದರು.

ಸಂಶಯಗೊಂಡ ಮಾರ್ಟಿನ್‌ ಕೇಂದ್ರಕ್ಕೆ ಹೋಗಿ ವಿಚಾರಿಸಿದಾಗ, ‘ಒಬ್ಬ ಪೋಷಕ (ಸಿಂಗಲ್‌ ಪೇರೆಂಟ್‌) ಇದ್ದರೆ ಬಾಡಿಗೆ ತಾಯಿಯಿಂದ ಮಗು ಪಡೆಯಲು ಸಾಧ್ಯವಿಲ್ಲ’ ಎಂದು ಹೇಳಿದ್ದರು. ಅಷ್ಟೇ ಅಲ್ಲದೆ, ಸುಜಯ್‌ ನೀಡಿದ್ದ ಹಣದಲ್ಲಿ ಸ್ವಲ್ಪ ಮಾತ್ರ ಮರುಪಾವತಿ ಮಾಡಲಾಗುವುದು. ಉಳಿದ ಹಣ ಪ್ರಯೋಗಾಲಯದ ಪರೀಕ್ಷೆಗಳಿಗೆ ವ್ಯಯವಾಗಿದೆ’ ಎಂದಿದ್ದರು. ಆದರೆ ಪಟ್ಟು ಬಿಡದ ಮಾರ್ಟಿನ್, ತಾವು ಪಾವತಿಸಿರುವ ಪೂರ್ತಿ ₹ 4.75 ಲಕ್ಷ ಹಿಂದಿರುಗಿಸುವಂತೆ ಆಗ್ರಹಿಸಿದ್ದರು. ಅದಕ್ಕೆ ಒಪ್ಪದಿದ್ದಾಗ ಶಾಂತಿನಗರದಲ್ಲಿರುವ ಗ್ರಾಹಕರ ನ್ಯಾಯಾಲಯದಲ್ಲಿ ದೂರು (2018) ನೀಡಿದ್ದರು.


ಮೂಗುದಾರ ಬೀಳಲಿ

ಮಕ್ಕಳಿಲ್ಲದ ಹತ್ತು ದಂಪತಿಗಳ ಪೈಕಿ ಇಬ್ಬರಿಗೆ ಮಾತ್ರ ಐವಿಎಫ್‌ ಅಗತ್ಯವಿರುತ್ತದೆ. ತಜ್ಞರು ಇದನ್ನು ಸರಿಯಾಗಿ ಗುರುತಿಸಬೇಕು. ಕಾನೂನು ನೆರವಿಲ್ಲದೆ ಶೋಷಿಸುವವರನ್ನು ಶಿಕ್ಷಿಸಲು ಆಗುತ್ತಿಲ್ಲ. ಅಸಿಸ್ಟೆಡ್ ರಿಪ್ರೊಡಕ್ಟಿವ್ ಟೆಕ್ನಾಲಜಿ (ರೆಗ್ಯುಲೇಶನ್) ಬಿಲ್ -2014 ಶೀಘ್ರವೇ ಸಂಸತ್ತಿನಲ್ಲಿ ಅಂಗೀಕಾರವಾಗುವ ನಿರೀಕ್ಷೆ ಇದೆ. ಆಗ ಐವಿಎಫ್‌ ಕೇಂದ್ರಗಳು ಸರ್ಕಾರದ ನಿಯಂತ್ರಣಕ್ಕೆ ಒಳಪಟ್ಟು, ನಿಯಮ ಉಲ್ಲಂಘಿಸುವ ಕೇಂದ್ರಗಳಿಗೆ ಮೂಗುದಾರ ಬೀಳಲಿದೆ.

-ಡಾ. ಕಾಮಿನಿ ರಾವ್‌, ಪ್ರಸೂತಿ ತಜ್ಞೆ, ಐಸಿಎಂಆರ್ ಮಾರ್ಗಸೂಚಿ ಸಮಿತಿ ಅಧ್ಯಕ್ಷೆ

ಮಿತಿ ಮೀರಿದೆ

2010ರಲ್ಲಿ ಬೆಂಗಳೂರಿನಲ್ಲಿ ಕೇವಲ ಎರಡು ಐವಿಎಫ್‌ ಕೇಂದ್ರಗಳಿದ್ದವು. ಈ ಎರಡು ದಶಕಗಳ ಅಂತರದಲ್ಲಿ ಅವುಗಳ ಸಂಖ್ಯೆ ಮಿತಿಮೀರಿ ಬೆಳೆದಿದೆ. ಬೆಂಗಳೂರಿನಲ್ಲಿಯೇ 250ರಷ್ಟು ಕೇಂದ್ರಗಳಿವೆ. ಅವುಗಳಲ್ಲಿ ಸುಮಾರು 70 ಸುಸಜ್ಜಿತ ಕೇಂದ್ರಗಳಾದರೆ, ಯಾವುದೇ ಸೌಲಭ್ಯ, ಸೌಕರ್ಯ, ಅಗತ್ಯ ತಜ್ಞರ–ತಂತ್ರಜ್ಞರ ತಂಡವಿಲ್ಲದೇ ಕಾರ್ಯನಿರ್ವಹಿಸುವ ಕ್ಲಿನಿಕ್‌ಗಳ ಸಂಖ್ಯೆ 170–180ರಷ್ಟಿದೆ.

-ಡಾ. ದೇವಿಕಾ ಗುಣಶೀಲ, ಗುಣಶೀಲಫರ್ಟಿಲಿಟಿ ಸೆಂಟರ್‌

ಕಡ್ಡಾಯವಾಗಬೇಕು...

ಕೆಲ ಐವಿಎಫ್ ಕೇಂದ್ರಗಳು ಮಾತ್ರ ಐಸಿಎಂಆರ್‌ನಲ್ಲಿ ನೋಂದಾಯಿಸಿವೆ ಎನ್ನುವುದು ನಿಜ. ನೋಂದಣಿ ಕಟ್ಟುನಿಟ್ಟಾಗಿದೆ ಮತ್ತು ಪಾರದರ್ಶಕವಾಗಿದೆ. ಸಿಬ್ಬಂದಿ ಸಾಮರ್ಥ್ಯ, ಅರ್ಹತೆ, ಸೌಲಭ್ಯ ಸಾಧನಗಳನ್ನು ಪರಿಶೀಲಿಸಲಾಗುತ್ತದೆ. ಉತ್ತಮ ಗುಣಮಟ್ಟದ ಸುರಕ್ಷಿತ ಮತ್ತು ಹೆಚ್ಚು ನೈತಿಕವಾದ ಆರೈಕೆಗೆ ಆದ್ಯತೆ ನೀಡುವ ಸಲುವಾಗಿ ಕಠಿಣ ಮಾರ್ಗಸೂಚಿ ನಿಗದಿಪಡಿಸಲಾಗಿದೆ. ಸರ್ಕಾರ ಈ ನೋಂದಣಿಯನ್ನು ಕಡ್ಡಾಯಗೊಳಿಸಬೇಕು.

-ಡಾ.ಆರತಿ ರಾಮರಾವ್, ಅಪೊಲೊ ಫರ್ಟಿಲಿಟಿ ಸೆಂಟರ್‌

ಯಾವಾಗ ಐವಿಎಫ್‌

ಸಹಜ ಗರ್ಭಧಾರಣೆ ತೊಡಕಿರುವವರಿಗೆಲ್ಲಾ ಐವಿಎಫ್‌, ಐಯುಐ ಚಿಕಿತ್ಸೆಗಳೇ ಪರಿಹಾರವಲ್ಲ. ಅದಕ್ಕೂ ಮುನ್ನ ಕೆಲ ಪರೀಕ್ಷೆಗಳು ಚಿಕಿತ್ಸೆಗಳು ಇರುತ್ತವೆ. ಗಂಭೀರ ಸಮಸ್ಯೆ ಇದ್ದಾಗ, ಅನ್ಯ ಮಾರ್ಗದ ಗರ್ಭಧಾರಣೆ ಸಾಧ್ಯವಿಲ್ಲ ಎಂದಾಗ ಐವಿಎಫ್‌ ಅನಿವಾರ್ಯ. ‘ನೈಸರ್ಗಿಕ ಗರ್ಭಧಾರ ಣೆ ವಿಫಲವಾದಲ್ಲಿ ಸುಧಾರಿತ ಚಿಕಿತ್ಸೆಯನ್ನು ಪ್ರಯತ್ನಿಸಬೇಕು. ಪುರುಷರಲ್ಲಿ ತೊಂದರೆ ಇದ್ದರೆ ಕೃತಕ ವೀರ್ಯಧಾರಣೆ (ಐಯುಐ) ಪ್ರಯತ್ನಿಸಬೇಕು. ಗರ್ಭನಾಳಗಳಲ್ಲಿ ಸಮಸ್ಯೆಗಳಿದ್ದರೆ ಐವಿಎಫ್‌ಗೆ ಹೋಗಬೇಕಾಗುತ್ತದೆ. ಕೆಲವೊಮ್ಮೆ ವಿವರಿಸಲಾಗದ ಬಂಜೆತನವಿದ್ದಾಗಲೂ ಐವಿಎಫ್‌ ಅನಿವಾರ್ಯ ’ ಎನ್ನುತ್ತಾರೆ ಪ್ರಸೂತಿ ತಜ್ಞೆ ಡಾ. ಪದ್ಮಿನಿ ಪ್ರಸಾದ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.