ಹುಬ್ಬಳ್ಳಿ: ‘ಅರವತ್ತು ವರ್ಷ ಆಗುತ್ತಿದ್ದಂತೆಯೇ ವೃದ್ಧರ ಮನೆ ಬಾಗಿಲಿಗೆ ಪಿಂಚಣಿ ತಲುಪಿಸುವ ನೂತನ ಯೋಜನೆಜಾರಿಗೆ ಸರ್ಕಾರ ಮುಂದಾಗಿದೆ’ ಎಂದು ಕಂದಾಯ ಸಚಿವ ಆರ್. ಅಶೋಕ ತಿಳಿಸಿದರು.
ವಿಮಾನ ನಿಲ್ದಾಣದಲ್ಲಿ ಮಂಗಳವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ಪಿಂಚಣಿಗಾಗಿ ವೃದ್ಧರು ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಯೋಜನೆ ರೂಪಿಸಲಾಗುತ್ತಿದೆ. ವಾರದೊಳಗೆ ಯೋಜನೆಯ ಹೆಸರು ಘೋಷಿಸಿ, ಅನುಷ್ಠಾನಗೊಳಿಸಲಾಗುವುದು’ ಎಂದರು.
‘ಪ್ರತಿಯೊಬ್ಬರ ಆಧಾರ್ ಕಾರ್ಡ್ ನಂಬರ್ ಈಗಾಗಲೇ ಸರ್ಕಾರದ ದಾಖಲೆಗಳಲ್ಲಿ ನೋಂದಣಿಯಾಗಿದೆ. ಅವರಿಗೆ ಅರವತ್ತು ವರ್ಷ ಆಗುತ್ತಿದ್ದಂತೆ, ಇಲಾಖೆ ವತಿಯಿಂದಲೇ ಅವರಿಗೆ ಪತ್ರ ಬರೆದು, ಪಿಂಚಣಿಗೆ ಅರ್ಹರಾಗಿದ್ದೀರಿ ಎಂದು ತಿಳಿಸಲಾಗುತ್ತದೆ. ಯಾವುದೇ ದಾಖಲೆ ಪತ್ರಗಳನ್ನು ಪಡೆಯದೇ ಪಿಂಚಣಿ ಸೌಲಭ್ಯ ಒದಗಿಸಲಾಗುವುದು’ ಎಂದು ತಿಳಿಸಿದರು.
‘ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಜೊತೆ ಈಗಾಗಲೇ ಚರ್ಚೆ ನಡೆಸಲಾಗಿದೆ. ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೊ ಸಂವಾದ ನಡೆಸಿ, ದಾಖಲೆಗಳ ಸಂಗ್ರಹ ಹೇಗೆ ಮಾಡಬೇಕು ಎನ್ನುವ ಮಾಹಿತಿ ನೀಡಲಾಗುವುದು’ ಎಂದರು.
‘ವಿವಿಧ ಪಿಂಚಣಿ ಯೋಜನೆಗಳಿಗೆ ಪ್ರತಿ ವರ್ಷ ಸರ್ಕಾರ ₹7 ಸಾವಿರ ಕೋಟಿ ವೆಚ್ಚ ಮಾಡುತ್ತಿದೆ. ಆದರೆ, ಅದು ಸಮರ್ಪಕವಾಗಿ ಫಲಾನುಭವಿಗಳನ್ನು ತಲುಪುತ್ತಿಲ್ಲ. ಐದಾರು ತಿಂಗಳು ಕಳೆದರೂ ಸಹ ಕೆಲವರಿಗೆ ಪಿಂಚಣಿಯೇ ದೊರೆಯುತ್ತಿಲ್ಲ. ನೂತನ ಯೋಜನೆಯಿಂದ ಇಂತಹ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅರ್ಜಿ ಹಾಕಬೇಕಿಲ್ಲ; ಕಚೇರಿಗಳಿಗೆ ಅಲೆದಾಡಬೇಕಿಲ್ಲ
ಯಾವುದೇ ದಾಖಲೆಗಳನ್ನು ಪಡೆಯದೆ ಪಿಂಚಣಿ ಸೌಲಭ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.