ADVERTISEMENT

ಬೆಂಗಳೂರಿನಲ್ಲಿ ಓಮಿಕ್ರಾನ್‌ ಸೋಂಕಿನ ಶಂಕೆ: ಐಸಿಎಂಆರ್‌ಗೆ ಮಾದರಿ ರವಾನೆ- ಸುಧಾಕರ್

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2021, 7:17 IST
Last Updated 29 ನವೆಂಬರ್ 2021, 7:17 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ದಕ್ಷಿಣ ಆಫ್ರಿಕಾದಿಂದ ಬಂದಿರುವ ಇಬ್ಬರು ವ್ಯಕ್ತಿಗಳಲ್ಲಿ ಕೊರೊನಾ ವೈರಸ್ಸೋಂಕು ದೃಢಪಟ್ಟಿದ್ದು, ಅವರಲ್ಲಿ ಒಬ್ಬರಲ್ಲಿರುವ ಸೋಂಕಿನ ತಳಿಯ ಕುರಿತು ಶಂಕೆ ಇದ್ದು, ಮಾದರಿಯನ್ನು ಹೆಚ್ಚಿನ ಪರೀಕ್ಷೆಗಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಗೆ (ಐಸಿಎಂಆರ್‌) ರವಾನಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ತಿಳಿಸಿದರು.

ಸುದ್ದಿಗಾರರ ಜತೆ ಸೋಮವಾರ ಮಾತನಾಡಿದ ಅವರು, ಇಬ್ಬರ ಮಾದರಿಗಳನ್ನೂ ಪರೀಕ್ಷಿಸಲಾಗಿದೆ. 63 ವರ್ಷದ ವ್ಯಕ್ತಿಯಲ್ಲಿ ಪತ್ತೆಯಾಗಿರುವ ವೈರಾಣುವಿನ ಪರೀಕ್ಷಾ ವರದಿ ಡೆಲ್ಟಾ ತಳಿಗಿಂತ ಭಿನ್ನವಾಗಿರುವುದು ಕಂಡುಬಂದಿದೆ. ಅವರಲ್ಲಿ ಒಮಿಕ್ರಾನ್‌ ತಳಿಯ ವೈರಾಣು ಇರುವ ಬಗ್ಗೆ ಖಚಿತವಾಗಿಲ್ಲ. ಈ ಕುರಿತು ಹೆಚ್ಚಿನ ಅಧ್ಯಯನಕ್ಕಾಗಿ ಮಾದರಿಯನ್ನು ಐಸಿಎಂಆರ್‌ಗೆ ಕಳುಹಿಸಲಾಗಿದೆ ಎಂದರು.

ಸೋಮವಾರ ಸಂಜೆಯ ವೇಳೆಗೆ ಐಸಿಎಂಆರ್‌ ವರದಿ ಲಭ್ಯವಾಗುವ ನಿರೀಕ್ಷೆ ಇದೆ. ಆ ಬಳಿಕ ಎಲ್ಲವೂ ಸ್ಪಷ್ಟವಾಗಲಿದೆ ಎಂದು ಹೇಳಿದರು.

ADVERTISEMENT

ಡೆಲ್ಟಾ ತಳಿಯ ಕೋವಿಡ್‌ ವೈರಾಣು ಒಂಭತ್ತು ತಿಂಗಳಿನಿಂದಲೂ ಪ್ರಸರಣದಲ್ಲಿದೆ. ಅದರಿಂದ ಹೆಚ್ಚಿನ ಸಾವುಗಳು ಸಂಭವಿಸಿವೆ. ಆಸ್ಪತ್ರೆಗೆ ದಾಖಲಾಗಿ, ತೀವ್ರನಿಗಾ ಘಟಕಗಳಲ್ಲಿ ಚಿಕಿತ್ಸೆ ಪಡೆದಿರುವವರ ಸಂಖ್ಯೆಯೂ ದೊಡ್ಡ ಪ್ರಮಾಣದಲ್ಲಿದೆ. ಒಮಿಕ್ರಾನ್‌ ತಳಿಯ ವೈರಾಣು ಡೆಲ್ಟಾಗಿಂತ ಸೌಮ್ಯವಾದುದು ಎಂಬ ವರದಿಗಳಿವೆ. ಆದರೂ, ಸಾಕಷ್ಟು ಮುನ್ನೆಚ್ಚರಿಕೆ ಅಗತ್ಯ ಎಂದರು.

ವರದಿ ಪಡೆಯಲಾಗುತ್ತಿದೆ: ಬೆಂಗಳೂರಿನ ರಾಜಾಜಿನಗರ ಇಎಸ್‌ಐ ಆಸ್ಪತ್ರೆಯಲ್ಲಿ ಕೋವಿಡ್‌ನಿಂದ ಮೃತರಾದ ಇಬ್ಬರ ಶವಗಳನ್ನು 15 ತಿಂಗಳಿನಿಂದ ಇರಿಸಿಕೊಂಡಿದ್ದ ವಿಷಯ ಕಾರ್ಮಿಕ ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ಕಾರ್ಮಿಕ ಸಚಿವರನ್ನು ಸಂಪರ್ಕಿಸಿ ಈ ಬಗ್ಗೆ ಚರ್ಚಿಸಲಾಗಿದೆ. ವರದಿ ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.