ADVERTISEMENT

‘ಅಂಜನಾದ್ರಿಗೆ ರಸ್ತೆ ನಿರ್ಮಾಣಕ್ಕೆ ₹140 ಕೋಟಿ’

​ಪ್ರಜಾವಾಣಿ ವಾರ್ತೆ
Published 8 ಜುಲೈ 2022, 15:43 IST
Last Updated 8 ಜುಲೈ 2022, 15:43 IST
ಆನಂದ್‌ ಸಿಂಗ್‌
ಆನಂದ್‌ ಸಿಂಗ್‌   

ಬೆಂಗಳೂರು: ಕೊಪ್ಪಳದ ಅಂಜನಾದ್ರಿ ಬೆಟ್ಟಕ್ಕೆ ರಸ್ತೆ ನಿರ್ಮಿಸಲು ₹ 140 ಕೋಟಿ ಅನುದಾನ ಒದಗಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ತಿಳಿಸಿದರು.

ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಅಂಜನಾದ್ರಿ ಅಭಿವೃದ್ಧಿಗೆ ₹ 100 ಕೋಟಿ ಒದಗಿಸಲು ಸರ್ಕಾರ ಈ ಹಿಂದೆ ನಿರ್ಧರಿಸಿತ್ತು. ರಾಷ್ಟ್ರೀಯ ಹೆದ್ದಾರಿ 13ರಲ್ಲಿರುವ ಹೊಸಹಳ್ಳಿಯಿಂದ ಅಂಜನಾದ್ರಿ ಬೆಟ್ಟದವರೆಗೆ ರಸ್ತೆ ನಿರ್ಮಿಸಲು ವಿಶೇಷ ಅನುದಾನ ನೀಡುವ ಅನುದಾನದ ಮೊತ್ತವನ್ನು ₹ 240 ಕೋಟಿಗೆ ಹೆಚ್ಚಿಸಲು ತೀರ್ಮಾನಿಸಲಾಗಿದೆ’ ಎಂದರು.

ರಸ್ತೆ ನಿರ್ಮಾಣಕ್ಕೆ ತಕ್ಷಣ ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಯವರು ಹಣಕಾಸು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಪರಿಸರಕ್ಕೆ ಯಾವುದೇ ರೀತಿಯಲ್ಲಿ ಧಕ್ಕೆಯಾಗದಂತೆ ಮತ್ತು ಬಂಡೆಗಳನ್ನು ಒಡೆಯದೇ ರಸ್ತೆ ನಿರ್ಮಿಸಲು ಸೂಚಿಸಲಾಗಿದೆ ಎಂದು ಹೇಳಿದರು.

ADVERTISEMENT

ದಾಖಲೆ ಪ್ರದರ್ಶಿಸಲು ಸೂಚನೆ: ‘ಅಂಜನಾದ್ರಿ ಹನುಮನ ಸ್ಥಳ. ಇದೇ ರೀತಿ ಕೆಲವರು ಹನುಮನ ಜನ್ಮಸ್ಥಳ ಎಂಬುದಾಗಿ ಬೇರೆ ಸ್ಥಳಗಳನ್ನು ಗುರುತಿಸಲು ಮುಂದಾಗಿದ್ದಾರೆ. ಅಂಜನಾದ್ರಿ ಬೆಟ್ಟವೇ ಹನುಮನ ಜನ್ಮಸ್ಥಳ ಎಂಬುದನ್ನು ನಿರೂಪಿಸುವ ದಾಖಲೆಗಳನ್ನು ಬೆಟ್ಟದಲ್ಲಿ ಪ್ರದರ್ಶಿಸುವಂತೆ ಪ್ರಾಚ್ಯವಸ್ತು ಇಲಾಖೆಗೆ ಸೂಚಿಸಲಾಗಿದೆ’ ಎಂದು ಸಚಿವರು ತಿಳಿಸಿದರು.

ಹಂಪಿ, ಪಟ್ಟದಕಲ್ಲು ಸೇರಿದಂತೆ ರೂಪಿಸಲಾಗುತ್ತಿರುವ ಪ್ರವಾಸೋದ್ಯಮದ ‘ಕ್ಲಸ್ಟರ್’ನಲ್ಲಿ ಅಂಜನಾದ್ರಿ ಬೆಟ್ಟವನ್ನು ಸೇರಿಸಲಾಗುವುದು. ಮೂಲಸೌಕರ್ಯ ಒದಗಿಸಲು ಜಮೀನು ಬಿಟ್ಟುಕೊಡುವ ರೈತರಿಗೆ ಅಲ್ಲಿ ವ್ಯಾಪಾರ ವಹಿವಾಟು ನಡೆಸಲು ಅವಕಾಶ ಕಲ್ಪಿಸುವ ಕುರಿತು ಪರಿಶೀಲಿಸಲಾಗುತ್ತಿದೆ ಎಂದರು.

ಲಲಿತ ಮಹಲ್‌ ಪಕ್ಕ ಟೆಂಟ್‌: ಮೈಸೂರಿನ ಲಲಿತ ಮಹಲ್‌ ಹೋಟೆಲ್‌ನಲ್ಲಿ ಸ್ಥಳಾವಕಾಶದ ಕೊರತೆ ಉದ್ಭವಿಸುತ್ತಿದೆ. ಆದ್ದರಿಂದ ಹೋಟೆಲ್‌ನ ಪಕ್ಕದಲ್ಲಿರುವ 54 ಎಕರೆ ಜಮೀನಿನಲ್ಲಿ 54 ಟೆಂಟ್‌ಗಳನ್ನು ನಿರ್ಮಿಸಲು ಅವಕಾಶ ನೀಡಲಾಗುವುದು. ಇದರಿಂದ ಹೆಚ್ಚಿನ ಆದಾಯ ಪಡೆಯಲು ಸಾಧ್ಯವಾಗಲಿದೆ ಎಂದು ಹೇಳಿದರು.

‘ಪ್ರಸಾದ’ ಯೋಜನೆಯಡಿ ಕೇಂದ್ರ ಸರ್ಕಾರ ಒದಗಿಸಲಿರುವ ₹ 100 ಕೋಟಿ ಅನುದಾನದಲ್ಲಿ ಮೈಸೂರಿನ ಚಾಮುಂಡಿ ಬೆಟ್ಟ ಹಾಗೂ ತಪ್ಪಲಿನಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.