ಚಿತ್ರದುರ್ಗ: ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರ ನಂಬಿಕಸ್ಥ ವಲಯದಲ್ಲಿ ಗುರುತಿಸಿಕೊಂಡಿದ್ದ ಸಿ.ಕೆ.ಜಾಫರ್ ಷರೀಫ್ ನಿಷ್ಠಾವಂತ ಕಾಂಗ್ರೆಸಿಗರಾಗಿದ್ದರು. ಪಕ್ಷದ ಸಂಘಟನೆಗೆ ಕಚೇರಿಯಲ್ಲಿಯೇ ವಾಸ್ತವ್ಯ ಹೂಡುತ್ತಿದ್ದ ಅಪರೂಪದ ರಾಜಕಾರಣಿಯಾಗಿದ್ದರು.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ದೊಡ್ಡೇರಿ ಗ್ರಾಮದ ಸಿ. ಅಬ್ದುಲ್ ಕರೀಮ್ ಅವರ ಪುತ್ರರಾಗಿ 1933ರಲ್ಲಿ ಜನಿಸಿದ ಜಾಫರ್ ಷರೀಪ್ ಮೆಟ್ರುಕ್ಯೂಲೇಷನ್ ವರೆಗೆ ಶಿಕ್ಷಣ ಪಡೆದಿದ್ದರು. ಸ್ವಾತಂತ್ರ್ಯಕ್ಕಾಗಿ ದೇಶದಲ್ಲಿ ನಡೆಯುತ್ತಿದ್ದ ಚಳವಳಿಯನ್ನು ನೋಡಿ ಬೆಳೆದಿದ್ದ ಅವರನ್ನು ರಾಜಕೀಯ ರಂಗ ಆಕರ್ಷಿಸಿತು.
ಆ ಕಾಲದ ಪ್ರಭಾವಿ ರಾಜಕಾರಣಿಯಾಗಿದ್ದ ಎಸ್.ನಿಜಲಿಂಗಪ್ಪ ಅವರ ಗರಡಿಯಲ್ಲಿ ಪಳಗಿದರು. ನಂಬಿಕಸ್ಥ ಸಹಾಕರಾಗಿ ಕೆಲಸ ಮಾಡಿದರು. ನಿಜಲಿಂಗಪ್ಪ ಅವರು ಮುಖ್ಯಮಂತ್ರಿಯಾದ ಬಳಿಕ ಷರೀಫ್ ಅವರ ಕಾರ್ಯಕ್ಷೇತ್ರ ಬೆಂಗಳೂರಿಗೆ ಬದಲಾಯಿತು. ಆರಂಭದ ಬಹುದಿನಗಳ ಕಾಲ ಬೆಂಗಳೂರಿನ ಪಕ್ಷದ ಕಚೇರಿಯಲ್ಲಿಯೇ ವಾಸ್ತವ್ಯ ಹೂಡುತ್ತಿದ್ದರು.
ಕಾಂಗ್ರೆಸ್ ಇಬ್ಬಾಗವಾದಾಗ ನಿಜಲಿಂಗಪ್ಪ ಅವರೊಂದಿಗೆ ಷರೀಫ್ ಹೋಗಲಿಲ್ಲ. ಈ ನಡೆ ಇಂದಿರಾಗಾಂಧಿ ಅವರ ಮೆಚ್ಚುಗೆಗೆ ಪಾತ್ರವಾಯಿತು. ಬೆಂಗಳೂರು ಉತ್ತರ ಕ್ಷೇತ್ರದಿಂದ 1971ರಿಂದ ಸಂಸದರಲ್ಲಿ ಆಯ್ಕೆಯಾದರು. ಷರೀಫ್ ಅವರ ಕುಟುಂಬದ ಹೆಜ್ಜೆ ಗುರುತುಗಳು ಕೋಟೆ ನಾಡಿನಲ್ಲಿ ಅಚ್ಚಳಿಯದೇ ಉಳಿದಿವೆ. ಧರ್ಮಶಾಲಾ ರಸ್ತೆಯಲ್ಲಿರುವ ಸಂಬಂಧಿಕರ ಮನೆಗೆ ಆಗಾಗ ಬಂದು ಹೋಗುತ್ತಿದ್ದರು.
ಸಿ.ಕೆ.ಜಾಫರ್ ಷರೀಫ್ ಕೇಂದ್ರದ ರೈಲ್ವೆ ಸಚಿವರಾಗಿದ್ದಾಗ ಚಿತ್ರದುರ್ಗಕ್ಕೆ ಪ್ರಥಮ ಬಾರಿಗೆ ರೈಲ್ವೆ ಯೋಜನೆ ಮಂಜೂರು ಮಾಡಿದರು. 1982ರಲ್ಲಿ ಚಿತ್ರದುರ್ಗದಿಂದ ರಾಯದುರ್ಗ ರೈಲು ಮಾರ್ಗಕ್ಕೆ ಅವರು ಚಾಲನೆ ನೀಡಿದ್ದರು. 1994ರಲ್ಲಿ ಬಳ್ಳಾರಿ, ರಾಯದುರ್ಗ, ಚಿತ್ರದುರ್ಗ, ಬೆಂಗಳೂರು ಮಾರ್ಗದ ಸುಮಾರು 466 ಕಿ.ಮೀ. ಉದ್ದದ ಹೊಸ ರೈಲು ಮಾರ್ಗಕ್ಕೆ ಚಾಲನೆ ಸಿಕ್ಕಿತ್ತು.
* ಇವನ್ನೂ ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.