ವಿಜಯಪುರ: ಆಲಮಟ್ಟಿ ಜಲಾಶಯದಿಂದ ಈ ವರ್ಷದಲ್ಲಿ ಇದೇ ಮೊದಲ ಬಾರಿಗೆ ಎಲ್ಲಾ 26 ಗೇಟ್‌ಗಳನ್ನು ತೆರೆದು ಒಂದು ಲಕ್ಷ ಕ್ಯುಸೆಕ್ ನೀರನ್ನು ಶನಿವಾರ ಮಧ್ಯಾಹ್ನದಿಂದ ಕೃಷ್ಣಾ ನದಿಗೆ ಬಿಡಲಾಗಿದೆ.
ಕೃಷ್ಣಾ ತೀರದ ಗ್ರಾಮಗಳ ಜನರು ನದಿ ನೀರಿಗೆ ಇಳಿಯದಂತೆ ನಿಡಗುಂದಿ ತಹಶೀಲ್ದಾರ್ ಎ.ಡಿ. ಅಮರವಾಡಗಿ ಸೂಚಿಸಿದ್ದಾರೆ.
519.6 ಮೀಟರ್ ಗರಿಷ್ಠ ಎತ್ತರದ ಆಲಮಟ್ಟಿ ಜಲಾಶಯದಲ್ಲಿ ಶನಿವಾರ 518 ಮೀಟರ್ ವರೆಗೆ ನೀರು ಸಂಗ್ರಹವಾಗಿದೆ.
ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಎರಡು ದಿನಗಳಿಂದ ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಆಲಮಟ್ಟಿ ಜಲಾಶಯಕ್ಕೆ ಮುಂದಿನ ಎರಡು, ಮೂರು ದಿನಗಳಲ್ಲಿ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ನೀರು ಹರಿದು ಬರುವ ಸಾಧ್ಯತೆಯಿದ್ದು, ಮುಂಜಾಗ್ರತೆಯ ಕ್ರಮವಾಗಿ ಶನಿವಾರದಿಂದಲೇ ಹೊರಹರಿವನ್ನು ಹೆಚ್ಚಿಸಲಾಗಿದೆ.
ಆಲಮಟ್ಟಿ ವಿದ್ಯುತ್ ಉತ್ಪಾದನಾ ಕೇಂದ್ರದ ಮೂಲಕ 40 ಸಾವಿರ ಕ್ಯುಸೆಕ್ ನೀರು ಹರಿಸುತ್ತಿದ್ದು, ಇದರಿಂದ ಎಲ್ಲಾ ಆರೂ ಘಟಕಗಳ ಮೂಲಕ 261 ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ ಎಂದು ಕೆಪಿಸಿಎಲ್ ಅಧಿಕಾರಿ ಚಂದ್ರಶೇಖರ ದೊರೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.