ADVERTISEMENT

ಬೆಂಗಳೂರು: ಒಂದೇ ಮೊಬೈಲ್ ಸಂಖ್ಯೆ- 12 ಅಪರಿಚಿತರ ಕೋವಿಡ್ ಟೆಸ್ಟ್‌ಗೆ ನೋಂದಣಿ

ಅಖಿಲ್ ಕಡಿದಾಳ್
Published 12 ಆಗಸ್ಟ್ 2021, 7:04 IST
Last Updated 12 ಆಗಸ್ಟ್ 2021, 7:04 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: 31 ವರ್ಷದ ವಕೀಲೆಯೊಬ್ಬರ ದೂರವಾಣಿ ಸಂಖ್ಯೆಯನ್ನು 12 ಮಂದಿ ಅಪರಿಚಿತರ ಕೋವಿಡ್ ಟೆಸ್ಟ್‌ಗೆ ನೋಂದಣಿ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಬಿಬಿಎಂಪಿಯ ಪೂರ್ವ ವಲಯದ ನಿವಾಸಿ ರಿತಿಕಾ ರೆಡ್ಡಿ(31), ಆಗಸ್ಟ್ 5 ರಂದು ಆರ್ಟಿ-ಪಿಸಿಆರ್ ಪರೀಕ್ಷೆಯನ್ನು ಮಾಡಿಸಿಕೊಂಡ ಬಳಿಕ ಈ ಸಮಸ್ಯೆ ಕಂಡು ಬಂದಿದೆ.

‘ಕೋವಿಡ್ ಪರೀಕ್ಷೆಗೆ ಸ್ವ್ಯಾಬ್ ಕೊಟ್ಟ ಸ್ವಲ್ಪ ಸಮಯದಲ್ಲೇ ನನ್ನ ಮೊಬೈಲ್ ಸಂಖ್ಯೆಗೆ ಹಲವು ಅಪರಿಚಿತರ ಆರ್‌ಟಿ–ಪಿಸಿಆರ್ ಪರೀಕ್ಷಾ ವರದಿಗಳು ಎಸ್ಎಂಎಸ್ ಮೂಲಕ ಬಂದವು’ ಎಂದು ಅವರು ಹೇಳಿದ್ದಾರೆ.

ADVERTISEMENT

ಇದಾದ ಬಳಿಕ, ಆಕೆಯ ಆರ್‌ಟಿ-ಪಿಸಿಆರ್ ಪರೀಕ್ಷಾ ಫಲಿತಾಂಶವು ನೆಗೆಟಿವ್ ಬಂದರೂ, ಆಗಸ್ಟ್ 7 ಮತ್ತು 9 ರಂದು ಬಂದ ಎರಡು ಎಸ್‌ಎಂಎಸ್‌ನಲ್ಲಿ ಇಬ್ಬರು ಅಪರಿಚಿತರಿಗೆ ಪಾಸಿಟಿವ್ ಬಂದಿರುವ ಮಾಹಿತಿ ಕಂಡುಬಂದಿದೆ. ಅದರಲ್ಲಿ ಒಬ್ಬರು 26 ವರ್ಷದ ಮಹಿಳೆ, ಮತ್ತೊಬ್ಬರು 44 ವರ್ಷದ ವ್ಯಕ್ತಿ ಎಂದು ರಿತಿಕಾ ಹೇಳಿದ್ದಾರೆ.

‘ಎಸ್‌ಎಂಎಸ್‌ಗಳು ಬಂದ ಕೂಡಲೇ, ನಾನು ಕೋವಿಡ್-ಪಾಸಿಟಿವ್ ಎಂಬ ಭಾವನೆಯಲ್ಲಿದ್ದ ಬಿಬಿಎಂಪಿಯಿಂದ ನನಗೆ ಹಲವು ದೂರವಾಣಿ ಕರೆಗಳು ಬಂದವು’ ಎಂದು ಅವರು ಹೇಳಿದ್ಧಾರೆ.

ನನ್ನ ಕೋವಿಡ್ ವರದಿ ನೆಗೆಟಿವ್ ಬಂದಿದೆ. ಬಂದಿರುವ ಇತರೆ ಎರಡು ಎಸ್‌ಎಂಎಸ್‌ಗಳಲ್ಲಿ ಇರುವ ಹೆಸರಿನ ವ್ಯಕ್ತಿಗಳು ಯಾರೆಂದು ನನಗೆ ತಿಳಿದಿಲ್ಲವೆಂದು ಹೇಳಿದರೂ ಸಹ ಬಿಬಿಎಂಪಿಯಿಂದ ಬರುವ ಕರೆಗಳು ನಿಲ್ಲಲಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದಾದ ಬಳಿಕ, ಬುಧವಾರ ಮತ್ತಿಬ್ಬರು ವ್ಯಕ್ತಿಗಳ ಕೋವಿಡ್ ವರದಿ ಪಾಸಿಟಿವ್ ಆಗಿರುವ ಎಸ್‌ಎಂಎಸ್ ಬಂದಿದೆ ಎಂದು ಮಹಿಳೆ ಹೇಳಿದ್ದಾರೆ.

ಬಿಬಿಎಂಪಿ ವಾರ್ ರೂಂನ ಮೂಲಗಳು, ಡೇಟಾ ದೋಷವನ್ನು ದೃಢಪಡಿಸಿವೆ. ಪರೀಕ್ಷೆಗಾಗಿ ಸ್ವ್ಯಾಬ್ ಅನ್ನು ಸಂಗ್ರಹಿಸುವ ಮೊದಲು ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಲು ಒಟಿಪಿ ಅಗತ್ಯವಿದೆ. ಹಾಗಿದ್ದರೂ ತಪ್ಪಾಗಿ ನೋಂದಣಿಯಾಗಿದ್ದು ಹೇಗೆ ಎಂದು ಗೊತ್ತಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಆದರೆ, ಒಟಿಪಿ ಇಲ್ಲದೆಯೂ ಕೋವಿಡ್ ಟೆಸ್ಟ್ ನೋಂದಣಿ ಸಾಧ್ಯವಿದೆ ಎಂದು ಹಲವು ಸ್ವ್ಯಾಬ್ ಕಲೆಕ್ಟರ್‌ಗಳು ಡೆಕ್ಕನ್ ಹೆರಾಲ್ಡ್‌ಗೆ ತಿಳಿಸಿದ್ದಾರೆ.

‘ಸಿಸ್ಟಮ್‌ನಲ್ಲಿ 'ಮರು-ಪರೀಕ್ಷೆ' ಆಯ್ಕೆಯಿದೆ, ಆ ಮೂಲಕ ಯಾವುದೇ ವ್ಯಕ್ತಿಯ ಫೋನ್ ಸಂಖ್ಯೆಯನ್ನು ಆಕ್ಸೆಸ್ ಮಾಡಬಹುದು. ಈ ವಿಧಾನದ ಮೂಲಕ, ಕೆಲವು ಪರೀಕ್ಷಾ ತಂಡಗಳು ತಾವು ಪ್ರತಿದಿನ ಮಾಡುತ್ತಿರುವ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಾಗಿ ತೋರಿಸುತ್ತಿವೆ. ಈ ನಿರ್ದಿಷ್ಟ ಮಾರ್ಗದ ಮೂಲಕ ಒಂದೇ ಸಂಖ್ಯೆಗೆ ಹಲವು ನೋಂದಣಿ ಮಾಡಬಹುದು’ಎಂದು ಒಬ್ಬ ಅನುಭವಿ ಬಿಬಿಎಂಪಿ ಸ್ವ್ಯಾಬ್ ಕಲೆಕ್ಟರ್ ಹೇಳಿದ್ದಾರೆ.

ಪರೀಕ್ಷಾ ಪ್ರಯೋಗಾಲಯದಿಂದ ದೋಷ ಸಂಭವಿಸಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ), ಡಿ ರಂದೀಪ್ ಹೇಳಿದ್ದಾರೆ.

‘ಎಲ್ಲಾ ಮಾದರಿಗಳನ್ನು ಖಾಸಗಿ ಮಾದರಿ ಸಂಗ್ರಹಕಾರರು ಸಂಗ್ರಹಿಸಿದ್ದಾರೆ ಮತ್ತು ಸ್ಟ್ರಾಂಡ್ ಲ್ಯಾಬ್‌ನಲ್ಲಿ (ಎಚ್‌ಸಿಜಿ ಆಸ್ಪತ್ರೆ) ಪರೀಕ್ಷಿಸಲಾಗಿದೆ. ಕೊಟ್ಟಿರುವ ಮೊಬೈಲ್ ಸಂಖ್ಯೆಯು ಕೋವಿಡ್ ಪರೀಕ್ಷೆಗೆ ಸ್ವ್ಯಾಬ್ ಕೊಟ್ಟಿರುವ ವ್ಯಕ್ತಿಗಳಲ್ಲಿ ಒಬ್ಬರಾದ ರಿತಿಕಾ ರೆಡ್ಡಿ ಅವರಿಗೆ ಸೇರಿದೆ.. ಆರ್‌ಟಿ-ಪಿಸಿಆರ್‌ ಫೈಲ್‌ಗಳಲ್ಲಿ ಇತರ ವ್ಯಕ್ತಿಗಳ ಮೊಬೈಲ್ ಸಂಖ್ಯೆಗಳು ವಿಭಿನ್ನವಾಗಿವೆ. ಆದರೆ, ಪ್ರಯೋಗಾಲಯವು ಒಂದೇ ಸಂಖ್ಯೆಯನ್ನು ಬಳಸಿಕೊಂಡು ಐಸಿಎಂಆರ್‌ಗೆ ಫಲಿತಾಂಶಗಳನ್ನು ನಮೂದಿಸುವ ಮೂಲಕ ತಪ್ಪು ಮಾಡಿದೆ’ಎಂದು ವಿಶೇಷ ಆಯುಕ್ತರು ತಿಳಿಸಿದ್ದಾರೆ.

ಈ ಗೊಂದಲದ ಪರಿಣಾಮ ಪಾಸಿಟಿವ್ ಬಂದಿರುವ ವ್ಯಕ್ತಿಗಳಿಗೆ ಬಿಬಿಎಂಪಿಯಿಂದ ಮಾಹಿತಿ ತಲುಪಿಲ್ಲ. ಇದು ಆತಂಕಕ್ಕೆ ಕಾರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.