ADVERTISEMENT

ನಾಪೋಕ್ಲು: ಗಜಗಿರಿ ಬೆಟ್ಟ ಕುಸಿತ ದುರಂತಕ್ಕೆ ವರ್ಷ, ಮರೆಯಾಗದ ಕಹಿ ಘಟನೆ

ಕಾಡುತ್ತಿದೆ ಆಗಸ್ಟ್‌ ಭಯ, ಮರೆಯಾಗದ ಕಹಿ ಘಟನೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2021, 11:38 IST
Last Updated 5 ಆಗಸ್ಟ್ 2021, 11:38 IST
ತಲಕಾವೇರಿ ಗಜಗಿರಿ ಬೆಟ್ಟ ಕುಸಿತದಿಂದ ಉಂಟಾದ ದುರಂತದಲ್ಲಿ ನಡೆದ ಕಾರ್ಯಾಚರಣೆ. (ಸಂಗ್ರಹ ಚಿತ್ರ)
ತಲಕಾವೇರಿ ಗಜಗಿರಿ ಬೆಟ್ಟ ಕುಸಿತದಿಂದ ಉಂಟಾದ ದುರಂತದಲ್ಲಿ ನಡೆದ ಕಾರ್ಯಾಚರಣೆ. (ಸಂಗ್ರಹ ಚಿತ್ರ)   

ನಾಪೋಕ್ಲು: ಕಳೆದ ವರ್ಷ ಆಗಸ್ಟ್ ಮೊದಲ ವಾರ ಕೊಡಗು ಜಿಲ್ಲೆಯಲ್ಲಿ ಮಹಾಮಳೆ ಪ್ರವಾಹ ಹಾಗೂ ಭೂಕುಸಿತಕ್ಕೆ ಸಿಲುಕಿ ಜನರು ಕಂಗಾಲಾಗಿದ್ದರು.

ಇದೀಗ ಆಗಸ್ಟ್ ತಿಂಗಳು ಕಾಲಿರಿಸಿದೆ. ಮಳೆ ಬಿರುಸುಗೊಳ್ಳುತ್ತಿದ್ದು ಪ್ರವಾಹದ ಭೀತಿ ಜನರನ್ನು ಕಾಡುತ್ತಿದೆ. ಕಳೆದ ವರ್ಷದ ಆಗಸ್ಟ್‌ 5ರಂದು ರಾತ್ರಿ ತಲಕಾವೇರಿ ಗಜಗಿರಿ ಬೆಟ್ಟ ಕುಸಿತದಿಂದ ಕ್ಷೇತ್ರದ ಪ್ರಧಾನ ಅರ್ಚಕ ನಾರಾಯಣಾಚಾರ್ ಕುಟುಂಬ ಕಣ್ಮರೆಯಾಗಿತ್ತು. ಗಜಗಿರಿ ಬೆಟ್ಟ ಕುಸಿದು ಒಟ್ಟು 5 ಮಂದಿ ಕಣ್ಮರೆಯಾಗಿದ್ದರು. ನಾರಾಯಣಾಚಾರ್ ಸೇರಿ ಆನಂದತೀರ್ಥ ಸ್ವಾಮೀಜಿ ಹಾಗೂ ಓರ್ವ ಅರ್ಚಕರ ಮೃತದೇಹ ಪತ್ತೆಯಾಗಿತ್ತು. ಹಲವು ಜಾನುವಾರುಗಳೂ ನಾಪತ್ತೆಯಾಗಿದ್ದವು. ನಜ್ಜುಗುಜ್ಜಾದ ವಾಹನಗಳು, ಪುಸ್ತಕಗಳು ಕೆಸರಿನಲ್ಲಿ ಸಿಲುಕಿದ್ದವು. ಎನ್‌ಡಿಆರ್‌ಎಫ್ ತಂಡ ರಕ್ಷಣಾ ಕಾರ್ಯದಲ್ಲಿ ಸತತವಾಗಿ ತೊಡಗಿದ್ದರೂ ಉಳಿದವರ ಶವ ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ. ದುರಂತ ಘಟಿಸಿ ಒಂದು ವರ್ಷ ಸಂದಿದೆ. ಕಹಿ ಘಟನೆ ಜನಮಾನಸದಿಂದ ಮರೆಯಾಗಿಲ್ಲ.

2019ರಲ್ಲೂ ಆಗಸ್ಟ್ 4ರಿಂದ 6ರ ವರೆಗೆ ಭಾರೀ ಮಳೆಯಾಗಿ ಪ್ರವಾಹ ಸೃಷ್ಟಿಯಾಗಿತ್ತು. ಕಳೆದ ವರ್ಷದ ಭೂಕುಸಿತ ಭಾಗಮಂಡಲ ವ್ಯಾಪ್ತಿಯ ಮಂದಿಗೆ ಕರಾಳ ನೆನಪಾಗಿ ಕಾಡುತ್ತಿದೆ. ಭಾಗಮಂಡಲ ವ್ಯಾಪ್ತಿಯ ಚೇರಂಗಾಲ ತಣ್ಣಿಮಾನಿ ಸೇರಿದಂತೆ ಹಲವು ಭಾಗಗಳಲ್ಲಿ ಭೂಕುಸಿತ ಉಂಟಾಗಿತ್ತು. ಕಳೆದ ವರ್ಷ ಆಗಸ್ಟ್ 8ರಂದು ಕೋರಂಗಾಲದಲ್ಲಿ ಅತ್ತೇಟಿ ಐನ್‌ಮನೆ ಕುಸಿದು, ಐವರು ದುರಂತ ಮರಣಕ್ಕೀಡಾಗಿದ್ದರು. ಗಜಗಿರಿ ಬೆಟ್ಟದ ಕುಸಿತದಿಂದ ಉಂಟಾದ ದುರಂತದಿಂದ ತಲಕಾವೇರಿ ಕ್ಷೇತ್ರದಲ್ಲಿ ದೇವಾಲಯಕ್ಕೆ ಪ್ರವೇಶ ಇಲ್ಲದಂತಾಗಿತ್ತು. ಕಾವೇರಿ ಮಾತೆಗೆ ನಿತ್ಯಪೂಜೆಯೂ ಸ್ಥಗಿತಗೊಂಡಿತ್ತು.

ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶವಾದ ತಲಕಾವೇರಿ ಬಳಿಯ ಚೇರಂಗಾಲ ಗ್ರಾಮದ ಜನತೆಯಲ್ಲಿ ಮತ್ತೆ ಮಳೆಗಾಲವೆಂದರೆ ಭಯ ಆತಂಕದ ಮಾತುಗಳೇ ಕೇಳಿ ಬರುತ್ತಿವೆ. ಚೇರಂಗಾಲ ಗ್ರಾಮದ ಕೋಳಿಕಾಡು ಮತ್ತು ಬೆನ್ನೂರು ಕಾಡು ಬೆಟ್ಟಗಳು ಕುಸಿದು ಗ್ರಾಮದ ಜನರು ದಿಗ್ಬಂಧನಕ್ಕೊಳಗಾಗಿದ್ದರು. ತಿಂಗಳ ಕಾಲ ಸಂಪರ್ಕ ಕಳೆದುಕೊಂಡು ಜೀವನ ಸಾಗಿಸಿದ್ದರು. ಕಳೆದ ವರ್ಷ ಹಾನಿಗೀಡಾದ ರಸ್ತೆಗಳು ಅರ್ಧಂಬರ್ಧ ದುರಸ್ತಿಯಾಗಿವೆ. ನಾಟಿ ಗದ್ದೆ ಹಾಗೂ ತೋಟಗಳು ಮಣ್ಣಿನಿಂದ ಮುಚ್ಚಿಹೋಗಿದ್ದು, ಈ ವರ್ಷ ಭತ್ತದ ಕೃಷಿ ಕೈಬಿಟ್ಟಿದ್ದಾರೆ. ಗಜಗಿರಿ ಬೆಟ್ಟ ಕುಸಿದಾಗ ಕಾವೇರಿ ನದಿಗೆ ಅಡ್ಡಲಾಗಿ ಇದ್ದ ಮತ್ತಾರಿ ಸೇತುವೆಗೆ ಹಾನಿ ಉಂಟಾಗಿದ್ದು ಸೇತುವೆಯ ಕೆಲವು ಭಾಗ ಸಂಪರ್ಕ ಕಡಿದು ಹೋಗಿತ್ತು. ಸೇತುವೆಗೆ ಮಣ್ಣಿನ ರಾಶಿ ಹಾಗೂ ಮರದ ತುಂಡು ಬಡಿದು ಸೇತುವೆ ತುಂಡಾಗಿದ್ದು ಇದುವರೆಗೆ ಅದರ ದುರಸ್ತಿಯಾಗಲಿ ಹೊಸ ಸೇತುವೆ ನಿರ್ಮಾಣವಾಗಲಿ ಆಗಿಲ್ಲ.

ADVERTISEMENT

ಕಳೆದ ಭೂಕುಸಿತದ ಸಂದರ್ಭದಲ್ಲಿ ಪರಿವಾರ ದಯಾನಂದ, ಕೂಡಕಂಡಿ ಗಣಪತಿ ಮೂಲೆಮಜಲು ಪ್ರದೇಶ ಪರುವಾಯಿ ರಾಮಪ್ಪ ಸಿರಿಕಜೆ ನಾಗೇಶ ಸೇರಿದಂತೆ 20ಕ್ಕೂ ಅಧಿಕ ಮಂದಿಯ 20 ಎಕರೆ ಗದ್ದೆಗಳಲ್ಲಿ ಮಣ್ಣು ತುಂಬಿದ್ದು ಇಂದು ಭತ್ತದ ಕೃಷಿ ಮಾಡಲು ಯೋಗ್ಯವಾಗಿಲ್ಲ. ಕೋಳಿಕಾಡು ಜೋಯಪ್ಪ ಎಂಬುವರ ಎರಡು ಎಕರೆ ತೋಟವು ಬರೆಕುಸಿತಕ್ಕೆ ಸಿಲುಕಿ ಹಾನಿಯಾಗಿದ್ದು ಅಲ್ಲದೇ ವಾಸದ ಮನೆಗೂ ಹಾನಿಯಾಗಿತ್ತು. ಇದುವರೆಗೂ ಪರಿಹಾರ ಸಿಗದೆ ಸಂಕಷ್ಟದಲ್ಲಿದ್ದಾರೆ.

ಈ ವರ್ಷ ಮಳೆಯ ಪ್ರಮಾಣ ಕಡಿಮೆ ಇದ್ದರೂ ಜನರ ಆತಂಕ ಮರೆಯಾಗಿಲ್ಲ. ಭಾಗಮಂಡಲದಲ್ಲಿ ಇಷ್ಟೆಲ್ಲ ಅವಾಂತರ ಸೃಷ್ಟಿಸಿದ್ದರೂ ಜನರ ಉಪಯೋಗಕ್ಕೆ ಲಭ್ಯವಾಗಬೇಕಿದ್ದ ಮೇಲ್ಸೇತುವೆ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವುದು, ರಸ್ತೆಗಳೆಲ್ಲಾ ಕೆಸರುಮಯವಾಗಿ ನಡೆದಾಡಲೂ ಕಷ್ಟಕರವಾಗಿರುವುದು ನಾಗರಿಕರ ಆಕ್ರೋಶ ಹೆಚ್ಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.