ADVERTISEMENT

ಇ–ಶಿಕ್ಷಣದಲ್ಲಿ ಎಲ್ಲಿದೆ ಆ ಭಾವ, ಬಂಧ?

ಗೀತಾ ವಸಂತ
Published 5 ಜೂನ್ 2020, 20:00 IST
Last Updated 5 ಜೂನ್ 2020, 20:00 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಆನ್‍ಲೈನ್ ತರಗತಿ ಎಂಬುದು ಕೊರೊನಾ ಬಿಕ್ಕಟ್ಟಿನ ನಡುವೆ ಶಿಕ್ಷಣ ಕ್ಷೇತ್ರಕ್ಕೆ ಗೋಚರಿಸಿದ ಒಂದು ಪರ್ಯಾಯ ಮಾರ್ಗ. ಅಂತರವನ್ನು ಕಾಯ್ದುಕೊಳ್ಳುವ ಪ್ರಕ್ರಿಯೆಯಲ್ಲಿ ಅನ್ಯ ಆಯ್ಕೆಯೇ ಇಲ್ಲದಂತಹ ಸಂದರ್ಭದಲ್ಲಿ ಸಿಕ್ಕ ಪರಿಹಾರ.

ಇ-ಕಲಿಕೆಯ ಕುರಿತು ಏನೇ ಟೀಕೆಗಳಿದ್ದರೂ ಒಂದು ಸಂದರ್ಭದ ಪರಿಮಿತಿಗೆ ಈ ವ್ಯವಸ್ಥೆಯು ಸಹಾಯ ಮಾಡುತ್ತಿರುವುದಂತೂ ನಿಜ. ಶೈಕ್ಷಣಿಕ ವರ್ಷದ ಅಂತಿಮ ಭಾಗದಲ್ಲಿ ಉಳಿದ ಪಾಠಗಳನ್ನು ಮುಗಿಸಲು, ಆಂತರಿಕ ಪರೀಕ್ಷೆಗಳನ್ನು ನಡೆಸಲು ಸಿಕ್ಕ ತಾತ್ಕಾಲಿಕ ವ್ಯವಸ್ಥೆ ಇದಾಗಿದೆ. ವಿದ್ಯಾರ್ಥಿಗಳು ತಂತ್ರಜ್ಞಾನದ ದಾಸರಾಗುತ್ತಾರೆ, ಬದುಕಿನ ಅನುಭವಗಳಿಂದ ವಂಚಿತರಾಗುತ್ತಾರೆ ಅನ್ನುವುದು ಈಗಿನ ಕಾಲಘಟ್ಟದಲ್ಲಿ ಅಷ್ಟೊಂದು ಸಮಂಜಸ ಅಭಿಪ್ರಾಯವಲ್ಲ. ಏಕೆಂದರೆ, ಕಂಪ್ಯೂಟರ್, ಮೊಬೈಲ್ ವ್ಯಾಮೋಹಕ್ಕೆ ಯಾವಾಗ ಜಗತ್ತು ಮರುಳಾಯಿತೋ ಆಗಲೇ ಯುವಜನರು ಇದರ ತೆಕ್ಕೆಗೆ ಬಿದ್ದಾಗಿತ್ತು.

ಶಿಕ್ಷಣದಲ್ಲಿ ತಂತ್ರಜ್ಞಾನವನ್ನು ಉಪಯೋಗಿಸಿದ ಮಾತ್ರಕ್ಕೆ ವಿದ್ಯಾರ್ಥಿಗಳ ಭವಿಷ್ಯ ಏನಾದೀತು ಎಂದು ಚಿಂತಿತರಾಗುವ ಅಗತ್ಯವಿಲ್ಲ. ಲಾಕ್‌ಡೌನ್‌ನಿಂದ ಬಂದಿಯಾಗಿರುವ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು, ಅಧ್ಯಯನದಿಂದ ವಿಮುಖರಾಗದಂತೆ ಸ್ವಲ್ಪ ಮಟ್ಟಿಗಾದರೂ ತಡೆದಿದ್ದೇ ಇ–ಶಿಕ್ಷಣ. ಹಾಗೆಂದು ಇ-ತರಗತಿಯ ತಾಂತ್ರಿಕ ಸಮಸ್ಯೆಯನ್ನು, ಪರಿಣಾಮಾತ್ಮಕ ಬೋಧನೆಯ ತೊಡರುಗಳನ್ನು ಅಲ್ಲಗಳೆಯುವಂತಿಲ್ಲ. ಆನ್‌ಲೈನ್‌ ಕಲಿಕೆಯಿಂದ ವಂಚಿತರಾದ ವಿದ್ಯಾರ್ಥಿಗಳಿಗೆ ಮುಂಬರುವ ದಿನಗಳಲ್ಲಿ ಪರ್ಯಾಯ ವ್ಯವಸ್ಥೆ ಮಾಡುವ ಹೊಣೆಯನ್ನು ಶಿಕ್ಷಣ ಸಂಸ್ಥೆಗಳು ಖಂಡಿತಾ ವಹಿಸಿಕೊಳ್ಳುತ್ತವೆ ಹಾಗೂ ವಹಿಸಿಕೊಳ್ಳಲೇಬೇಕು. ಇಲ್ಲದಿದ್ದರೆ ಈ ‘ಡಿಜಿಟಲ್ ಡಿವೈಡ್’, ಜ್ಞಾನಾರ್ಜನೆಯ ದಾರಿಯನ್ನೇ ತುಂಡರಿಸುತ್ತದೆ.

ADVERTISEMENT

ನೈಜ ಆತಂಕವಿರುವುದು ಇ–ಕಲಿಕೆಯ ತಾತ್ಕಾಲಿಕ ಅನಿವಾರ್ಯತೆಯು, ಶಾಶ್ವತವಾಗಿಬಿಟ್ಟರೆ ಹೇಗೆ ಎನ್ನುವ ವಿಚಾರದಲ್ಲಿ. ವ್ಯಾಪಾರೀಕರಣವನ್ನೇ ಕೇಂದ್ರವಾಗಿಸಿಕೊಂಡಿರುವ ಕೆಲ ಶಿಕ್ಷಣ ಸಂಸ್ಥೆಗಳು, ಹೆಚ್ಚಿನ ಖರ್ಚಿಲ್ಲದ ಇ-ತರಗತಿ ವ್ಯವಸ್ಥೆಯನ್ನೇ ಶಾಶ್ವತವಾಗಿ ಅಳವಡಿಸಿಕೊಳ್ಳುವ ಅಪಾಯವಿದೆಯಲ್ಲವೇ ಎನ್ನುವ ಯೋಚನೆಯಲ್ಲಿ. ಸರ್ವರಿಗೂ ಲಭ್ಯವಿರಬೇಕಾದ ಶಿಕ್ಷಣದಿಂದ ಒಂದಷ್ಟು ವಿದ್ಯಾರ್ಥಿಗಳು ಹೊರಗೆ ಉಳಿಯಬಹುದಲ್ಲವೇ ಎನ್ನುವ ಸಂಶಯದಲ್ಲಿ. ಈ ಆತಂಕ ಗಂಭೀರವಾದುದೇ. ಶಿಕ್ಷಣ ಎನ್ನುವ ಪದದ ಹರವು ವ್ಯಾಪಕವಾದುದು. ಅದು ತರಗತಿಯ ನಾಲ್ಕು ಗೋಡೆಯ ಒಳಗೋ, ಪಠ್ಯದ ಚೌಕಟ್ಟಿನೊಳಗೋ, ಕಂಪ್ಯೂಟರ್‌ನ ಕಿಟಕಿಯೊಳಗೋ ನಿಲುಕಲಾರದ್ದು. ವರ್ಗ, ಲಿಂಗ ಭೇದವಿಲ್ಲದೆ ನಡೆಯುವ ಅಧ್ಯಾಪಕ-ವಿದ್ಯಾರ್ಥಿಗಳ ಒಡನಾಟ, ಕಾಲೇಜಿನ ಹಾದಿಯಲ್ಲಿ ಎದುರಾಗುವ ಜೀವನಾನುಭವಗಳ ಒಟ್ಟು ಮಿಶ್ರಣವದು.

ಒಬ್ಬ ವಿದ್ಯಾರ್ಥಿ ಸ್ನಾತಕೋತ್ತರ ಪದವಿ ಪೂರೈಸುವ ಹೊತ್ತಿಗೆ ಹದಿನೇಳು ವರ್ಷಗಳಷ್ಟು ಕಾಲ ಈ ವ್ಯವಸ್ಥೆಯೊಳಗೆ ಇರುತ್ತಾನೆ. ಈ ಅವಧಿಯಲ್ಲಿ ಆತ ಪಡೆಯುವ ಔಪಚಾರಿಕ ಶಿಕ್ಷಣಕ್ಕಿಂತ, ಸಮಾಜದಿಂದ ಪಡೆಯುವ ಅನೌಪಚಾರಿಕ ಶಿಕ್ಷಣವೇ ಮಹತ್ವದ್ದಾಗಿರುತ್ತದೆ. ಅದು ಅವನನ್ನು ಬದುಕಿಗೆ ಸಿದ್ಧ ಮಾಡುತ್ತದೆ, ಅವನಲ್ಲಿ ಮೌಲ್ಯಗಳನ್ನೂ ತುಂಬುತ್ತದೆ. ಬೆಳಗ್ಗೆ ಎದ್ಡೊಡನೆ ಒಂದಡಿಯೂ ಇಡದೆ ಸಿಗುವ ಇ-ಶಿಕ್ಷಣ, ಶಿಕ್ಷಕ ಹಾಗೂ ಸಹಪಾಠಿಯೊಂದಿಗೆ ನೆಲೆಯಾಗದ ಭಾವನಾತ್ಮಕ ಬಂಧ, ಸಮಾಜದಿಂದ ಸಿಗದ ಅನೌಪಚಾರಿಕ ಶಿಕ್ಷಣ ಖಂಡಿತ ಅಪೂರ್ಣ. ಅದು ಇಡೀ ಶಿಕ್ಷಣದ ಪ್ರಕ್ರಿಯೆಯನ್ನೇ ಬುಡಮೇಲು ಮಾಡಿ, ತಾಂತ್ರಿಕ ಜಗತ್ತಿನೊಳಗೆ
ವಿದ್ಯಾರ್ಥಿಗಳನ್ನೂ ಅಧ್ಯಾಪಕರನ್ನೂ ಸಿಲುಕಿಸಿ, ಎಲ್ಲವನ್ನೂ ಯಾಂತ್ರಿಕವನ್ನಾಗಿಸಬಹುದು.

ಬದುಕನ್ನೂ ಸಮಾಜವನ್ನೂ ತೆರೆದ ಕಣ್ಣುಗಳಿಂದ ನೋಡದೆ, ಮೊಬೈಲ್ ಸ್ಕ್ರೀನ್‍ನೊಳಗೋ, ಕಂಪ್ಯೂಟರ್ ತೆರೆಯ ಮೂಲಕವೋ ನೋಡಿದರೆ ಏನಾಗಬಹುದು ಎಂಬ ವಿಚಾರ ಪ್ರಸ್ತಾಪ ಮಾಡುವಾಗ 1922ರಲ್ಲಿ ಅಮೆರಿಕದ ಬರಹಗಾರ, ರಾಜಕೀಯ ಚಿಂತಕ ವಾಲ್ಟರ್ ಲಿಪ್‍ಮ್ಯಾನ್ ತನ್ನ ಪುಸ್ತಕ ‘ಸಾರ್ವಜನಿಕ ಅಭಿಪ್ರಾಯ’ದಲ್ಲಿ ಮಂಡಿಸಿದ ವಿಚಾರಧಾರೆಯ ನೆನಪಾಗುತ್ತದೆ. ಅವನ ಪ್ರಕಾರ, ಸಮಾಜ ಇಂದು ಹುಸಿ (ಸ್ಯೂಡೊ) ಜಗತ್ತಿನೊಳಗೆ ಜೀವಿಸುತ್ತಿದೆ. ಸಮಾಜವನ್ನು ಒಂದು ನಿರ್ದಿಷ್ಟ ಮಾಧ್ಯಮದ ಮೂಲಕವೇ ನೋಡುವುದು ಇದಕ್ಕೆ ಕಾರಣ. ನಿಜಾರ್ಥದಲ್ಲಿ ಪ್ರಪಂಚ ಅತ್ಯಂತ ವಿಶಾಲವಾಗಿದೆ. ಅಲ್ಲಿ ನಡೆಯುವ ಘಟನೆಗಳು, ಸನ್ನಿವೇಶಗಳು, ಅನುಭವಗಳು, ಮಾಧ್ಯಮ ನೀಡುವ ಬಿಂಬಕ್ಕಿಂತ ಸಂಪೂರ್ಣ ಭಿನ್ನವಾಗಿರುತ್ತವೆ. ಆದರೆ, ಮಾಧ್ಯಮ ತನಗೆ ಅನುಕೂಲವಾಗಿ ತೋರಿದ್ದನ್ನಷ್ಟೆ ವರದಿ ಮಾಡುತ್ತದೆ. ಇ- ಶಿಕ್ಷಣವೂ ಅಷ್ಟೆ. ಕಲಿಕೆಯ ಪ್ರಕ್ರಿಯೆಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ತಿರುಗಿಸಿಕೊಳ್ಳುವ ಅಪಾಯ ಇದ್ದೇ ಇದೆ. ಶಿಕ್ಷಕರು ತಮ್ಮ ಕಾರ್ಯವನ್ನು ಪಠ್ಯಕ್ಕಷ್ಟೇ ಸೀಮಿತಗೊಳಿಸಿ ತಮ್ಮ ವೃತ್ತಿಯ ಘನತೆಯನ್ನು ಎತ್ತಿ ಹಿಡಿಯುವ ಶಿಸ್ತನ್ನೂ ಪ್ರೌಢ
ವರ್ತನೆಯನ್ನೂ ನಗಣ್ಯ ಮಾಡಬಹುದು. ವಿದ್ಯಾರ್ಥಿಗಳ ನೈತಿಕ ಮೌಲ್ಯಗಳು ಹಳ್ಳ ಹಿಡಿಯಬಹುದು.

ಹಾಗಿದ್ದರೆ ಇ-ಕಲಿಕೆಯಿಂದ ಅನುಕೂಲವೇ ಇಲ್ಲವೇ? ಖಂಡಿತಾ ಇದೆ, ಪ್ರಸ್ತುತ ಅನಿವಾರ್ಯವಾಗಿರುವ ಇ-ಶಿಕ್ಷಣ ಅಕಾಡೆಮಿಕ್ ವಲಯದ ಕಾರ್ಯವೈಖರಿಯನ್ನು ಪುನರ್ ವಿಮರ್ಶೆ ಮಾಡುತ್ತಿದೆ. ಪ್ರಪಂಚವೇ ಲಾಕ್‍ಡೌನ್ ಆದ ಸಂದರ್ಭದಲ್ಲಿ ಅನಾಯಾಸವಾಗಿ, ಆರ್ಥಿಕ ಹೊರೆ ನೀಡದೆ ನಡೆದ ಮೀಟಿಂಗ್‍ಗಳು, ವೆಬಿನಾರ್‌ಗಳು, ರಚನಾತ್ಮಕ ಚರ್ಚೆಗಳು ತಂತ್ರಜ್ಞಾನ ನೀಡಿದ ವರವೇ ಹೌದು. ಶಿಕ್ಷಣ ಕ್ಷೇತ್ರ ತನ್ನ ಸೀಮೆಯನ್ನು ಮೀರಿದೆ ಹಾಗೂ ಕಣ್ಣಿಗೂ, ಜೇಬಿಗೂ ಎಟುಕುವಂತಿದೆ ಎನ್ನುವುದನ್ನು ತಿಳಿಸಿಕೊಟ್ಟಿದೆ. ಒಬ್ಬ ಅಧ್ಯಾಪಕ ಅಥವಾ ವಿದ್ಯಾರ್ಥಿ, ಜಗತ್ತಿನ ಅತ್ಯಂತ ಶ್ರೇಷ್ಠ ವಿಶ್ವವಿದ್ಯಾನಿಲಯ ನಡೆಸುವ ಆನ್‍ಲೈನ್ ಗೋಷ್ಠಿಯಲ್ಲಿ ಭಾಗವಹಿಸಬಹುದು, ಪರಿಣತರೊಂದಿಗೆ ಚರ್ಚೆ ನಡೆಸಬಹುದು. ಲಕ್ಷಾಂತರ ರೂಪಾಯಿ ಬೇಡುತ್ತಿದ್ದ ಈ ಕಾರ್ಯಕ್ರಮಗಳು ಅತ್ಯಂತ ಕಡಿಮೆ ಖರ್ಚಿನಲ್ಲಿ ನಡೆಯುತ್ತಿವೆ. ಈ ನಿಟ್ಟಿನಲ್ಲಿ ಶಿಕ್ಷಣ ವ್ಯವಸ್ಥೆಯ ಮುಚ್ಚಿರುವ ಬಾಗಿಲುಗಳನ್ನು ತೆರೆದ ಶ್ರೇಯ ಖಂಡಿತಾ ಕೊರೊನಾ ವೈರಸ್‍ನ ನೆರಳಲ್ಲಿ ಮೂಡಿಬಂದ ಆನ್‌ಲೈನ್ ವೇದಿಕೆಗಳಿಗೆ ಸಲ್ಲಲೇಬೇಕು.

ಸಾಂಪ್ರದಾಯಿಕ ಶಿಕ್ಷಣದ ಜೊತೆಗೆ ಆಧುನಿಕ ಇ-ಶಿಕ್ಷಣದ ಯೋಗ್ಯ ಸಮ್ಮಿಲನ ಈಗ ಬೇಕಿರುವುದು. ಯಾವುದೇ ಹೊಸ ಪ್ರಕ್ರಿಯೆ ಅಥವಾ ವಿಚಾರಗಳು ವ್ಯವಸ್ಥೆಯ ಮುಂದಕ್ಕೆ ಬಂದಾಗ ಅದರ ಪೂರ್ತಿ ಪರಿಣಾಮಗಳು ಗೋಚರವಾಗಲು ಸಮಯ ಬೇಕು. ಸಮಯಕ್ಕೆ ತಕ್ಕಹಾಗೆ ಹಾಗೂ ತನ್ನ ಅನುಕೂಲಕ್ಕೆ ತಕ್ಕಹಾಗೆ ಅದನ್ನು ಒಗ್ಗಿಸಿಕೊಳ್ಳುವ ಕಲೆ ತರ್ಕಬದ್ಧವಾಗಿ ಯೋಚನೆ ಮಾಡುವ ಮಾನವನಿಗೆ ಖಂಡಿತಾ ಇದೆ. ಜ್ಞಾನದ ಪರಿಮಿತಿಯನ್ನು, ಎಲ್ಲೆಯನ್ನು ಮೀರುವ ಅನುಕೂಲವಿರುವ ಇ-ಕಲಿಕೆಯು, ಪ್ರಸ್ತುತ ಇರುವ ಶಿಕ್ಷಣ ವ್ಯವಸ್ಥೆಯ ಆಂಶಿಕ ಭಾಗವಾಗಬೇಕು. ಶಿಕ್ಷಣ ಸಂಸ್ಥೆಯ ಹಾಗೂ ಅಧ್ಯಾಪಕರ ಜೊತೆಗಿನ ನೇರ ಒಡನಾಟ ಹಾಗೂ ಜೀವನಾನುಭವದ ಜೊತೆಗೆ ಜ್ಞಾನದ ಬಾಗಿಲನ್ನು ತೆರೆಯುವ ಪರಿಣತರ ಲಭ್ಯತೆ ತಂತ್ರಜ್ಞಾನದ ತೆರೆಯ ಮೂಲಕ ನಮ್ಮ ಯುವಜನಾಂಗಕ್ಕೆ ಸಿಗಬೇಕು.

ಲೇಖಕಿ: ಸಹಾಯಕ ಪ್ರಾಧ್ಯಾಪಕಿ, ಎಸ್‍ಡಿಎಂ ಕಾಲೇಜು, ಉಜಿರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.