ADVERTISEMENT

ಶಾಲಾ ವಿದ್ಯಾರ್ಥಿಗಳಿಗೆ ಆನ್‌ಲೈನ್ ಶಿಕ್ಷಣ: 8ರಂದು ಆದೇಶ– ಸಚಿವ ಸುರೇಶ್‌ ಕುಮಾರ್

ಶಾಲೆಗಳ ಆರಂಭ: ಸರ್ಕಾರ ಇನ್ನೂ ನಿರ್ಧಾರ ಮಾಡಿಲ್ಲ

​ಪ್ರಜಾವಾಣಿ ವಾರ್ತೆ
Published 6 ಜೂನ್ 2020, 8:58 IST
Last Updated 6 ಜೂನ್ 2020, 8:58 IST
 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌   

ಬಳ್ಳಾರಿ: ‘ಎಷ್ಟನೇ ತರಗತಿಯಿಂದ ಆನ್‌ಲೈನ್‌ ಶಿಕ್ಷಣವನ್ನು ಆರಂಭಿಸಬೇಕು ಎಂದು ಸೋಮವಾರ ಆದೇಶ ಹೊರಡಿಸಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ತಿಳಿಸಿದರು.

ನಗರದಲ್ಲಿ ಶನಿವಾರ ಅಧಿಕಾರಿಗಳ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಎಲ್‌ಕೆಜಿ. ಯುಕೆಜಿ ಮಕ್ಕಳ ಮೇಲೆ ಆನ್‌ಲೈನ್‌ ಶಿಕ್ಷಣವು ದುಷ್ಪರಿಣಾಮ ಬೀರುತ್ತದೆ. ಹೀಗಾಗಿ ಯಾವ ತರಗತಿಯಿಂದ ಆನ್‌ಲೈನ್‌ ಶಿಕ್ಷಣ ಆರಂಭಿಸಬೇಕು? ಅದು ಹೇಗಿರಬೇಕು? ಎಷ್ಟು ಹೊತ್ತು ಆನ್‌ಲೈನ್‌ ತರಗತಿ ನಡೆಯಬೇಕು ಎಂಬ ಬಗ್ಗೆ ಪರಾಮರ್ಶೆ ನಡೆದಿದ್ದು, ಜೂನ್‌ 8ರಂದು ಆದೇಶ ಹೊರಡಿಸಲಾಗುವುದು’ ಎಂದು ಹೇಳಿದರು.

‘ಎಲ್‌ಕೆಜಿ, ಯುಕೆಜಿ ಹಂತದಲ್ಲಿ ಆನ್‌ಲೈನ್‌ ಶಿಕ್ಷಣ ಬೇಡ ಎಂಬುದು ಬಹುತೇಕ ಪೋಷಕರ ಅಭಿಪ್ರಾಯ. ಆಟ ಆಡೋ ವಯಸ್ಸಲ್ಲಿ ಆನ್‌ಲೈನ್ ಶಿಕ್ಷಣ ಒಪ್ಪುವಂಥದ್ದಲ್ಲ ಎಂದೇ ಪೋಷಕರು ಪ್ರತಿಪಾದಿಸಿದ್ದಾರೆ. ಅದಕ್ಕೆ ನನ್ನ ಸಹಮತವೂ ಇದೆ’ ಎಂದರು.

ADVERTISEMENT

‘ಆನ್‌ಲೈನ್‌ ಶಿಕ್ಷಣಕ್ಕೆ ಪೂರಕವಾದ ಪರಿಕರಗಳು ಎಷ್ಟು ಮಕ್ಕಳ ಮನೆಗಳಲ್ಲಿವೆ ಎಂಬ ಬಗ್ಗೆ ಇಲಾಖೆಯು ಸಮೀಕ್ಷೆ ನಡೆಸುತ್ತಿದೆ. 48 ಲಕ್ಷ ಮಕ್ಕಳ ಪೈಕಿ 26 ಲಕ್ಷ ಮಂದಿಯ ಮನೆಯಲ್ಲಿ ಮಾತ್ರ ಆಂಡ್ರಾಯ್ಡ್‌ ಫೋನ್‌ಗಳಿವೆ’ ಎಂದರು.

‘ಶಾಲೆಗಳನ್ನು ಆರಂಭಿಸುವ ಕುರಿತು ಸರ್ಕಾರ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಪ್ರತಿ ಶಾಲೆಯಲ್ಲೂ ಪೋಷಕರ ಸಭೆ ಕರೆದು ಅಭಿಪ್ರಾಯ ಸಂಗ್ರಹಿಸಬೇಕು. ಅದನ್ನು ಶಿಕ್ಷಣಾಧಿಕಾರಿ ಮಟ್ಟದಲ್ಲಿ ಕ್ರೋಢೀಕರಿಸಬೇಕು. ಮತ್ತೆ ಸಮಗ್ರ ಪರಿಶೀಲನೆ ಬಳಿಕವೇ ನಿರ್ಧಾರ ಮಾಡಲಾಗುವುದು’ ಎಂದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಿದ್ಧತೆ

ಜೂನ್‌ 25ರಿಂದ ಆರಂಭವಾಗಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಆತ್ಮವಿಶ್ವಾಸಕ್ಕೆ ಆದ್ಯತೆ ನೀಡಲಾಗುವುದು. ಎಲ್ಲರಿಗೂ ಕನಿಷ್ಠ ಎರಡು ಮಾಸ್ಕ್‌ಗಳನ್ನು ಉಚಿತವಾಗಿ ನೀಡಲಾಗುವುದು. ಪ್ರತಿ ಕೊಠಡಿಗೆ 24 ವಿದ್ಯಾರ್ಥಿಗಳ ಬದಲು 18ರಿಂದ 20 ವಿದ್ಯಾರ್ಥಿಗಳನ್ನು ಕೂರಿಸಿ ಅಂತರ ಕಾಪಾಡಲಾಗುವುದು’ ಎಂದು ಹೇಳಿದರು.

‘ಪರೀಕ್ಷಾ ಕೇಂದ್ರದ ಒಳಕ್ಕೆ ಬಿಡುವ ಮುನ್ನ ಪ್ರತಿ ವಿದ್ಯಾರ್ಥಿಯ ಆರೋಗ್ಯ ತಪಾಸಣೆ ನಡೆಸಲಾಗುವುದು. ಜ್ವರ, ಕೆಮ್ಮಿನಂಥ ಅನಾರೋಗ್ಯ ಕಂಡುಬಂದರೆ ಅವರನ್ನು ಪ್ರತ್ಯೇಕ ಕೊಠಡಿಯಲ್ಲಿರಿಸಿ ಪರೀಕ್ಷೆ ಎದುರಿಸಲು ಅವಕಾಶ ಮಾಡಿಕೊಡಲಾಗುವುದು’ ಎಂದರು.

ವಿದ್ಯಾರ್ಥಿಗಳ ಸಮೀಕ್ಷೆ: ಪರೀಕ್ಷಾ ಕೇಂದ್ರಕ್ಕೆ ಕಾಲ್ನಡಿಗೆಯಲ್ಲಿ ಬರುವವರು, ಪೋಷಕರೊಂದಿಗೆ ಬರುವವರು, ಒಬ್ಬರೇ ಖಾಸಗಿ ವಾಹನಗಳಲ್ಲಿ ಬರುವವರ, ಶಾಲೆಯ ವಾಹನದಲ್ಲಿ ಬರುವವರು ಎಷ್ಟು ಮಂದಿ ಎಂಬ ಸಮೀಕ್ಷೆಯನ್ನೂ ನಡೆಸಲಾಗುತ್ತಿದೆ. ಎಲ್ಲ ವಿದ್ಯಾರ್ಥಿಗಳಿಗೂ ಅವರಿರುವ ಹಳ್ಳಿ, ಪಟ್ಟಣದಿಂದ ಪರೀಕ್ಷಾ ಕೇಂದ್ರಕ್ಕೆ ತೆರಳಲು ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗುವುದು. ಈ ಬಗ್ಗೆ ಸಾರಿಗೆ ಇಲಾಖೆಯೊಂದಿಗೆ ಸಮಾಲೋಚನೆ ನಡೆದಿದೆ’ ಎಂದು ಹೇಳಿದರು.

ಕ್ವಾರಂಟೈನ್‌ ಕೇಂದ್ರದಲ್ಲಿ ಪರೀಕ್ಷೆ ಇಲ್ಲ

‘ಕೋವಿಡ್‌ ನಿಯಂತ್ರಣದ ಸಲುವಾಗಿ ಕ್ವಾರಂಟೈನ್‌ ಕೇಂದ್ರಗಳಾಗಿ ಮಾರ್ಪಡಿಸಿದ್ದ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳಲ್ಲಿ ಈ ಬಾರಿ ಪರೀಕ್ಷೆ ನಡೆಸುವುದಿಲ್ಲ. ಆ ಶಾಲೆಗಳ ವಿದ್ಯಾರ್ಥಿಗಳಿಗೆ ಅವರ ಮನೆ ಸಮೀಪದ ಕೇಂದ್ರಗಳಲ್ಲಿ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಾಗಿದೆ. 14 ಸಾವಿರ ವಿದ್ಯಾರ್ಥಿಗಳು ಆ ಅವಕಾಶವನ್ನು ಆಯ್ಕೆ ಮಾಡಿಕೊಂಡಿದ್ದಾರೆ’ ಎಂದು ಹೇಳಿದರು.

‘ಅನಾರೋಗ್ಯ ಕಾರಣದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗದವರು ನಂತರ ನಡೆಯುವ ಪೂರಕ ಪರೀಕ್ಷೆಗೆ ಹಾಜರಾಗಬಹುದು. ಅವರನ್ನು ಆಗಲೂ ಫ್ರೆಶ್‌ ವಿದ್ಯಾರ್ಥಿಗಳೆಂದೇ ಪರಿಗಣಿಸಲಾಗುವುದು’ ಎಂದು ಸ್ಪಷ್ಟಪಡಿಸಿದರು.

ಆರ್‌ಟಿಇ ಅನುದಾನ: ‘ಶಿಕ್ಷಣ ಹಕ್ಕು ಕಾಯ್ದೆ ಅಡಿ ಖಾಸಗಿ ಶಾಲೆಗಳಲ್ಲಿ ದಾಖಲಾದ ಮಕ್ಕಳ ಶುಲ್ಕ ಹಿಂದಿನ ವರ್ಷ ₹1,040 ಕೋಟಿ ಹಾಗೂ ಪ್ರಸಕ್ತ ವರ್ಷ ₹520 ಕೋಟಿ ಬಾಕಿ ಇದೆ. ಶೀಘ್ರ ಪಾವತಿಸಬೇಕು ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳು ಮನವಿ ಸಲ್ಲಿಸಿದ್ದವು. ಆ ಹಿನ್ನೆಲೆಯಲ್ಲೇ ₹275 ಕೋಟಿ ಬಿಡುಗಡೆ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

‘ಪದವಿಪೂರ್ವ ಕಾಲೇಜು ಉಪನ್ಯಾಸಕ ನೇಮಕಾತಿಯ ಸ್ಥಳ ನಿಯೋಜನೆ ಕೌನ್ಸೆಲಿಂಗ್‌ ಜೂನ್‌ 18ರ ಬಳಿಕ ನಡೆಯಲಿದೆ. ನಂತರ ತಡಮಾಡದೇ ನೇಮಕಾತಿ ಪತ್ರ ವಿತರಿಸಲಾಗುವುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.