ಬೆಂಗಳೂರು: ರಾಜ್ಯದ ವಿವಿಧ ಇಲಾಖೆಗಳು ಸಂಗ್ರಹಿಸಿರುವ ಡಿಜಿಟಲೀಕೃತ ದತ್ತಾಂಶಗಳನ್ನು ಹಂಚಿಕೊಳ್ಳುವ, ಒಪ್ಪಂದದ ಮೂಲಕ ವಿನಿಮಯ ಮತ್ತು ಮಾರಾಟ ಮಾಡುವ ದಾರಿಯೊಂದನ್ನು ತೆರೆಯುವತ್ತ ಕರ್ನಾಟಕ ಸರ್ಕಾರ ಹೆಜ್ಜೆ ಇಟ್ಟಿದೆ.
ಇದಕ್ಕೆ ಪೂರಕವಾಗಿ ‘ಕರ್ನಾಟಕ ಮುಕ್ತ ದತ್ತಾಂಶ ನೀತಿ’ಯನ್ನು ಸರ್ಕಾರ ಪ್ರಕಟಿಸಿದೆ.
ಈ ದತ್ತಾಂಶಗಳನ್ನು ಸಾರ್ವಜನಿಕರು, ಸಂಶೋಧಕರು, ಎನ್‌ಜಿಒಗಳು, ನವೋದ್ಯಮಿಗಳು ಉಚಿತವಾಗಿ ಪಡೆಯಬಹುದು. ಅದರೆ, ‘ಭಾರಿ ಮೌಲ್ಯ’ದ ಕೆಲವೇ ಕೆಲವು ದತ್ತಾಂಶಗಳನ್ನು ಮಾತ್ರ ಸಂಬಂಧಪಟ್ಟ ಇಲಾಖೆಗಳಿಂದಲೇ ಖರೀದಿಸಬೇಕು. ‘ಮೌಲ್ಯಯುತ’ ದತ್ತಾಂಶವನ್ನು ಸಾರ್ವಜನಿಕ ವೇದಿಕೆಯಲ್ಲಿ ಹಂಚಿಕೊಳ್ಳುವುದಿಲ್ಲ. ಅಂತಹ ನಿರ್ದಿಷ್ಟ ದತ್ತಾಂಶವನ್ನು ಮಾರುವ ಮೂಲಕ ಇಲಾಖೆಯು ಆದಾಯಗಳಿಸಲಿದೆ.
ಈ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ‘ಕರ್ನಾಟಕ ಓಪನ್ ಡೆಟಾ, ಡಿಜಿ ಲಾಕರ್’ ಯೋಜನಾ ನಿರ್ದೇಶಕ ಎಚ್.ಎಂ. ಶ್ರೀವ್ಯಾಸ್ ‘ಪ್ರತಿಯೊಂದು ಇಲಾಖೆಯಲ್ಲೂ ಅಪಾರ ಪ್ರಮಾಣದಲ್ಲಿ ಡಿಜಿಟಲ್ ದತ್ತಾಂಶ ಸೃಷ್ಟಿ ಆಗುತ್ತಿದೆ. ವಿವಿಧ ಯೋಜನೆಗಳು, ಕಾರ್ಯಕ್ರಮಗಳು ಮತ್ತು ಸೇವೆಗಳ ಮಾಹಿತಿಗಳನ್ನು ಇಲಾಖೆಗಳಿಗೆ ಹೋಗಿ ಕಾಗದದ ಮೂಲಕ ಪಡೆಯುವುದರ ಬದಲಿಗೆ ಡಿಜಿಟಲ್ ರೂಪದಲ್ಲಿ ಪಡೆಯುವುದಕ್ಕೆ ಈ ವ್ಯವಸ್ಥೆ ರೂಪಿಸಲಾಗಿದೆ’ ಎಂದರು.
ಪ್ರತಿಯೊಂದು ಇಲಾಖೆಯಲ್ಲಿ ಪೋರ್ಟಲ್‌ಗಳು, ಆನ್‌ಲೈನ್‌ಗಳು ಮತ್ತು ಡೇಟಾಬೇಸ್‌ಗಳಿವೆ. ಅವೆಲ್ಲ ಪ್ರತ್ಯೇಕವಾಗಿದ್ದು, ಮುಂದೆ ಒಂದು ಡಿಜಿಟಲ್ ವೇದಿಕೆಯಲ್ಲಿ ಸಿಗುತ್ತವೆ. ಯಾವ ಮಾಹಿತಿಯನ್ನು ಹಂಚಿಕೊಳ್ಳಬೇಕು ಮತ್ತು ಯಾವುದನ್ನು ಹಂಚಿಕೊಳ್ಳಬಾರದು ಎಂಬುದಕ್ಕೆ ಸಂಬಂಧಿಸಿದಂತೆ ನೀತಿಯು ಸ್ಪಷ್ಟತೆಯನ್ನು ಒಳಗೊಂಡಿದೆ.
‘ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಆರೋಗ್ಯ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಹಲವು ಬಗೆಯ ಸಂಶೋಧನೆಗಳು ನಡೆಯುತ್ತವೆ. ಅದಕ್ಕೆ ದತ್ತಾಂಶ ಅತ್ಯಗತ್ಯ. ಕಾನೂನು ಬದ್ಧವಾಗಿ ದತ್ತಾಂಶವನ್ನು ಒದಗಿಸಲಾಗುವುದು. ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಡೆಟಾ ಸೆಟ್‌ಗಳನ್ನು ಬಿಟ್ಟು, ಇತರ ಎಲ್ಲಾ ಡೇಟಾ ಸೆಟ್‌ಗಳನ್ನು ‘ಕರ್ನಾಟಕ ಓಪನ್ ಡೇಟಾ ಪ್ಲಾಟ್ ಫಾರಂ’ ಅಡಿ ಪ್ರಕಟಿಸಲು ಪರಿಗಣಿಸಲಾಗುತ್ತದೆ. ಇದನ್ನು ಸಾರ್ವಜನಿಕರು ಉಚಿತವಾಗಿಯೂ ಬಳಸಬಹುದು’ ಎಂದರು.
ಎಲ್ಲ ಇಲಾಖೆಯಲ್ಲೂ ಸಿಡಿಒ: ಎಲ್ಲಾ ಇಲಾಖೆಗಳಲ್ಲೂ ಮುಖ್ಯ ದತ್ತಾಂಶ ಅಧಿಕಾರಿ (ಚೀಫ್ ಡೇಟಾ ಆಫೀಸರ್)ಗಳನ್ನು ನೇಮಿಸಲಾಗುವುದು. ಇವರ ಮೂಲಕ ದತ್ತಾಂಶವನ್ನು ಪ್ರಕಟಿಸಲಾಗುತ್ತದೆ. ಇದಕ್ಕಾಗಿ ‘ಡೇಟಾ ಕಂಟ್ರೋಲರ್’ಗಳನ್ನೂ ನೇಮಿಸಿಕೊಳ್ಳಬಹುದು. ಇವರು ಮಾಹಿತಿಗಳನ್ನು ವರ್ಗೀಕರಿಸಿ ಯಾವುದನ್ನು ಹಾಕಬೇಕು ಮತ್ತು ಯಾವುದನ್ನು ಹಾಕಬಾರದು ಎಂಬುದನ್ನು ನಿರ್ಧರಿಸಿ, ಹಂಚಿಕೊಳ್ಳಬಹುದಾದ ದತ್ತಾಂಶವನ್ನು ಮಾತ್ರ ಸಾರ್ವಜನಿಕ ವೇದಿಕೆಯಲ್ಲಿ ಒದಗಿಸುತ್ತಾರೆ ಎಂದು ಶ್ರೀವ್ಯಾಸ್ ವಿವರಿಸಿದರು.
‘ಒಂದು ಇಲಾಖೆಯಿಂದ ಮತ್ತೊಂದು ಇಲಾಖೆಯು ದತ್ತಾಂಶವನ್ನು ಸುಲಭವಾಗಿ ಪಡೆಯಬಹುದು. ಈಗ ಪತ್ರ ಬರೆದು, ವಿವಿಧ ಪ್ರಕ್ರಿಯೆಗಳನ್ನು ಅನುಸರಿಸಿ ಪಡೆಯಬೇಕಾಗಿದೆ. ಕೆಲವು ರಾಜ್ಯಗಳು ಈಗಾಗಲೇ ಈ ಪದ್ಧತಿಯನ್ನು ಆರಂಭಿಸಿವೆ. ಆಡಳಿತದಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವಕ್ಕೆ ಪೂರಕವಾಗಿದೆ. ಮುಂದುವರಿದ ದೇಶಗಳಲ್ಲಿ ಈ ಪದ್ಧತಿ ಚಾಲ್ತಿಯಲ್ಲಿದೆ’ ಎಂದರು.
‘ಕೇಂದ್ರ ಸರ್ಕಾರವು ‘ಉಜ್ವಲಾ’ ಯೋಜನೆ ಮತ್ತು ಕೋವಿಡ್ ಲಸಿಕೆ ವಿತರಣೆಗೆ ದತ್ತಾಂಶವನ್ನು ಬಳಸಿಕೊಂಡಿದೆ. ಉಜ್ವಲಾ ಯೋಜನೆಯಲ್ಲಿ ಫಲಾನುಭವಿಗಳಿಗೆ ಸಮೀಪದಲ್ಲಿರುವ ಏಜೆನ್ಸಿಗಳನ್ನು ಜೋಡಿಸಲಾಯಿತು. ಲಸಿಕೆ ವಿತರಣೆಗೆ 65 ವರ್ಷ ಮೇಲ್ಪಟ್ಟವರಿಗೆ ಮೊದಲು, ಆ ಬಳಿಕ 45 ರಿಂದ 65 ಎಂದು ವರ್ಗೀಕರಿಸಲು ದತ್ತಾಂಶ ಸಹಾಯಕವಾಯಿತು’ ಎಂದು ಅವರು ಹೇಳಿದರು.
ದತ್ತಾಂಶದ ವರ್ಗೀಕರಣ
* ವೈಯಕ್ತಿಕ ದತ್ತಾಂಶ: ಇದು ವ್ಯಕ್ತಿಯನ್ನು ಗುರುತಿಸಬಹುದಾದ ಮಾಹಿತಿಯನ್ನು ಸೂಚಿಸುತ್ತದೆ. ಇದರಲ್ಲಿ ವೈಯಕ್ತಿಕ ಹೆಸರು, ವಿಳಾಸ, ಪ್ಯಾನ್, ಆಧಾರ್, ಡ್ರೈವಿಂಗ್ ಲೈಸೆನ್ಸ್ ಮತ್ತು ಇತರ ರೀತಿಯ ಐಡಿಗಳು, ಧರ್ಮದ ವಿವರ. ಇದನ್ನು ಹಂಚಿಕೊಳ್ಳಲು ಅವಕಾಶವಿಲ್ಲ
* ವೈಯಕ್ತಿಕವಲ್ಲದ ದತ್ತಾಂಶ: ಈ ದತ್ತಾಂಶವು ಅನಾಮಧೇಯ ಮಾಹಿತಿ/ ದತ್ತಾಂಶವನ್ನು ಸೂಚಿಸುತ್ತದೆ. ಇವುಗಳನ್ನು ಬಳಸಿ ಯಾವುದೇ ವ್ಯಕ್ತಿಯನ್ನು ಗುರುತಿಸಲು ಮತ್ತು ವೈಯಕ್ತಿಕ ಮಾಹಿತಿ ಪಡೆಯಲು ಅಸಾಧ್ಯ.
* ಹಂಚಿಕೊಳ್ಳಬಹುದಾದ ದತ್ತಾಂಶ: ಸಾರ್ವಜನಿಕ ಬಳಕೆಗೆ ಲಭ್ಯವಿರುವ ದತ್ತಾಂಶ, ಋಣಾತ್ಮಕ ದತ್ತಾಂಶ ಪಟ್ಟಿಯ ವ್ಯಾಪ್ತಿಗೆ ಒಳಪಡದ ಮತ್ತು ಸೂಕ್ಷ್ಮವಲ್ಲದ ಮಾಹಿತಿಗಳು
* ಸೂಕ್ಷ್ಮ ಮಾಹಿತಿ: ಗೋಪ್ಯತೆ ಕಾನೂನುಗಳು, ಕೇಂದ್ರ ಮತ್ತು ರಾಜ್ಯ ಕಾನೂನು ಮತ್ತು ನಿಯಮಗಳಿಂದ ನಿಯಂತ್ರಿಸಲ್ಪಡುವ ದತ್ತಾಂಶ. ಇವುಗಳನ್ನು ಹಂಚಿಕೊಳ್ಳುವುದಿಲ್ಲ
* ನಿರ್ಬಂಧಿತ ಮಾಹಿತಿ: ಯಾವುದೇ ಜೀವಕ್ಕೆ ಅಪಾಯ ಅಥವಾ ಸಾರ್ವಜನಿಕ ಆಸ್ತಿಗಳ ನಷ್ಟ ಅಥವಾ ನಿರ್ಣಾಯಕ ಮೂಲ ಸೌಕರ್ಯಗಳಿಗೆ ಧಕ್ಕೆ ಉಂಟು ಮಾಡುವ ಮಾಹಿತಿ ಹಂಚಿಕೊಳ್ಳುವಂತಿಲ್ಲ.
ಆದಾಯ ತರುವ ದತ್ತಾಂಶ ಯಾವುದು?
‘ಕೇಂದ್ರ ಸರ್ಕಾರವು ಇತ್ತೀಚೆಗೆ ವಾಹನಗಳ ದತ್ತಾಂಶವನ್ನು ಮಾರಿದೆ. ಓಲಾ ಮತ್ತು ಉಬರ್‌ಗಳು ದತ್ತಾಂಶವನ್ನು ಖರೀದಿಸಿವೆ. ಸಾರಿಗೆ ವ್ಯವಸ್ಥೆ, ವಾಹನ ಉತ್ಪಾದನೆಗೆ ಇದರಿಂದ ಅನುಕೂಲವಾಗುತ್ತದೆ. ಈ ರೀತಿಯ ದತ್ತಾಂಶ
ಗಳನ್ನು ಇಲಾಖೆಗಳು ಮಾರಬಹುದು. ಆದರೆ, ನಮ್ಮಲ್ಲಿ ದತ್ತಾಂಶ ಮಾರಾಟ ಮಾಡುವ ಹಂತಕ್ಕೆ ತಲುಪಿಲ್ಲ’ ಎಂದು ಶ್ರೀವ್ಯಾಸ್ ತಿಳಿಸಿದರು.
ಯಾರು ದತ್ತಾಂಶ ಖರೀದಿಸಬಹುದು: ಅಧಿಕೃತ ಬಳಕೆದಾರರು ಭಾರತದಲ್ಲಿ ನೋಂದಾಯಿತ ಸಂಸ್ಥೆಗಳು, ಕಾರ್ಪೊರೇಟ್ ಸಂಸ್ಥೆ, ಖಾಸಗಿ ಏಜೆನ್ಸಿಗಳು, ಶೈಕ್ಷಣಿಕ ಅಥವಾ ಸಂಶೋಧನಾ ಸಂಸ್ಥೆಗಳಾಗಿರಬೇಕು. ಕನಿಷ್ಠ 24 ತಿಂಗಳು ಕೆಲಸ ಮಾಡಿರಬೇಕು. ದತ್ತಾಂಶ ಖರೀದಿಗೆ ಆಯಾ ಇಲಾಖೆ ಜತೆ ಒಪ್ಪಂದ ಮಾಡಿಕೊಳ್ಳಬೇಕು. ಗೋಪ್ಯತೆ ಷರತ್ತುಗಳಿಗೆ ಬದ್ಧವಾಗಿರಬೇಕು.
ಶುಲ್ಕ ಎಷ್ಟು: ದತ್ತಾಂಶಗಳ ಡೇಟಾ ಸೆಟ್‌ಗಳಿಗೆ ಸಮರ್ಥನೀಯ ಶುಲ್ಕವನ್ನು ನಿಗದಿಪಡಿಸುವ ಹಕ್ಕನ್ನು ಕರ್ನಾಟಕ ಸರ್ಕಾರದ ಸಂಬಂಧಿತ ಇಲಾಖೆಗಳು ಹೊಂದಿರುತ್ತವೆ.
‘ಮಾರಾಟಕ್ಕೆ ಪ್ರತ್ಯೇಕ ನೀತಿ ಇರಲಿ’
ಯಾವುದೋ ಒಂದು ನಗರದಲ್ಲಿ ಬೀದಿ ದೀಪಗಳ ಬಗ್ಗೆ ಬಗ್ಗೆ ದತ್ತಾಂಶ ಕೊಟ್ಟರೆ ಸಮಸ್ಯೆ ಇಲ್ಲ. ಆದರೆ, ಸ್ವತ್ತುಗಳ ದತ್ತಾಂಶ ಕೊಟ್ಟರೆ ರಿಯಲ್ ಎಸ್ಟೇಟ್ ಅದರ ದುರುಪಯೋಗ ಮಾಡಿಕೊಳ್ಳಬಹುದು. ಯಾವುದೇ ಮಾಹಿತಿಯನ್ನು ಅನಾಮಧೇಯವಾಗಿ ಮಾಡಲು ಸಾಧ್ಯವಿಲ್ಲ. ಇದೂ ಕೂಡಾ ಅಪಾಯಕಾರಿ. ಯಾವುದೇ ದತ್ತಾಂಶ ಮಾರುವುದೇ ಇದ್ದರೆ, ಅದಕ್ಕೆ ಪ್ರತ್ಯೇಕ ದತ್ತಾಂಶ ನೀತಿ ಪ್ರಕಟಿಸಬೇಕು. ಮುಕ್ತ ದತ್ತಾಂಶ ನೀತಿಯಲ್ಲಿ ಸೇರಿಸಿದ್ದು ಸರಿಯಲ್ಲ.
-ಜಿ.ಎನ್.ತೇಜೇಶ್, ಸಾರ್ವಜನಿಕ ಹಿತಾಸಕ್ತಿ ತಜ್ಞ, ದತ್ತಾಂಶ ಕಾರ್ಯಕರ್ತ
***
‘ಸಾರ್ವಜನಿಕ ಚರ್ಚೆ ಆಗಲಿ’
ಈ ನೀತಿಯ ಬಗ್ಗೆ ಸಾರ್ವಜನಿಕ ಚರ್ಚೆ ನಡೆಯಬೇಕು. ನೀತಿ ರೂಪಿಸುವ ಹಂತದಲ್ಲೇ ಸಲಹೆ ಸೂಚನೆಗಳನ್ನು ಪಡೆಯಬೇಕಿತ್ತು. ಈ ನೀತಿ ಪ್ರಕಟಿಸಿದ್ದೇ ಗೊತ್ತಿರಲಿಲ್ಲ. ದತ್ತಾಂಶ ಮುಕ್ತವಾಗಿ ಹಂಚಿಕೊಳ್ಳುವ ಉದ್ದೇಶ ಏನು ಎಂಬ ಸ್ಪಷ್ಟತೆ ಇಲ್ಲ. ಸರ್ಕಾರದ ಬಳಿ ತುಂಬಾ ಡೇಟಾ ಇದೆ, ಅದನ್ನು ಮಾರಿದರೆ, ಹಣ ಸಿಗುತ್ತದೆ ಎಂಬ ಭಾವನೆ ಮೂಡುತ್ತದೆ. ಯುರೋಪ್‌ನಲ್ಲಿ ಸಾರ್ವಜನಿಕರ ಬಳಕೆಗೆ ಅತಿ ಕಡಿಮೆ ಬೆಲೆಗೆ ದತ್ತಾಂಶ ಮಾರಲಾಗುತ್ತದೆ. ಅನಾಮಧೇಯ ದತ್ತಾಂಶ ಬಳಕೆ ಮಾಡುವಾಗ ಪ್ರಯೋಜನ ಸಾರ್ವಜನಿಕರಿಗೆ ಆಗುತ್ತದೆ ಎಂಬುದು ಮುಖ್ಯ
-ನಂದಿನಿ , ಐಟಿ ಫಾರ್ ಚೇಂಜ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.