ಬೆಂಗಳೂರು/ ರಾಮನಗರ: ‘ಆಪರೇಷನ್’ ಭಯದ ಕಾರಣ ವಾರದಿಂದ ರೆಸಾರ್ಟ್ ವಾಸದ ಮೊರೆ ಹೋಗಿದ್ದ ಬಿಜೆಪಿ ಶಾಸಕರು ಶನಿವಾರ ರಾಜ್ಯಕ್ಕೆ ವಾಪಸಾಗಿದ್ದಾರೆ.
ಅತೃಪ್ತರನ್ನು ಹಿಡಿದಿಟ್ಟುಕೊಳ್ಳುವ ಉದ್ದೇಶದಿಂದ ರೆಸಾರ್ಟ್‌ಗೆ ಹೋಗಿದ್ದ ಕಾಂಗ್ರೆಸ್ ಶಾಸಕರ ತಂಡ ಸಹ ಭಾನುವಾರ ಸಂಜೆಯೊಳಗೆ ವಾಪಸ್ ಬರಲಿದೆ.
ಬಿಜೆಪಿ ಜತೆಗೆ ಗುರುತಿಸಿಕೊಂಡಿದ್ದಾರೆ ಎನ್ನಲಾದ ರಮೇಶ್ ಜಾರಕಿಹೊಳಿ, ಉಮೇಶ ಜಾಧವ್, ಬಿ.ನಾಗೇಂದ್ರ ಹಾಗೂ ಮಹೇಶ ಕುಮಟಳ್ಳಿ ಅವರು ಪಕ್ಷ ಎಚ್ಚರಿಕೆ ನೀಡಿದ ಬಳಿಕವೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಿಂದ ದೂರ ಉಳಿದಿದ್ದರು. ರೆಸಾರ್ಟ್ ಕಡೆಗೂ ಸುಳಿಯಲಿಲ್ಲ. ಇದರಿಂದ, ‘ಕೈ’ಪಾಳಯದಲ್ಲಿ ತಳಮಳ ಇನ್ನಷ್ಟು ಹೆಚ್ಚಿದ್ದರೆ, ಬಿಜೆಪಿ ನಾಯಕರ ಹುರುಪು ಮತ್ತಷ್ಟು ಜಾಸ್ತಿ ಆಗಿದೆ.
ಮೈತ್ರಿ ಸರ್ಕಾರದ ಸಂಖ್ಯಾಬಲವನ್ನು ಅಲ್ಪ ಮತಕ್ಕೆ ಕುಸಿಯುವಂತೆ ಮಾಡಲು ಬಿಜೆಪಿ ಎಲ್ಲ ಕಾರ್ಯತಂತ್ರ ಹೆಣೆದಿರುವ ಬೆನ್ನಲ್ಲೇ, ಕಮಲ ಪಕ್ಷದ ಶಾಸಕರನ್ನು ಸೆಳೆದು ತಿರುಗೇಟು ನೀಡಲು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಯೋಜನೆ ರೂಪಿಸಿದ್ದಾರೆ.
ಎರಡು ಪಕ್ಷಗಳ ಶಾಸಕರು ಭಾನುವಾರ ಸಂಜೆ ವೇಳೆಗೆ ಸರ್ವ‘ಸ್ವತಂತ್ರ‘ರಾಗುವುದರಿಂದ ಮುಂದಿನ ವಾರದಲ್ಲಿ ‘ಖರೀದಿ’ ಭರಾಟೆ ಜೋರಾಗಬಹುದು ಎಂಬ ಚರ್ಚೆ ರಾಜಕೀಯ ಪಡಸಾಲೆಯಲ್ಲಿ ನಡೆದಿದೆ.
ಈಗಲ್‌ಟನ್ ರೆಸಾರ್ಟ್‌ನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಶಾಸಕರ ಜತೆಗೆ ಸಭೆ ನಡೆಸಿದರು. ಆಮಿಷಕ್ಕೆ ಬಲಿಯಾಗಿ ರಾಜಕೀಯ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ ಎಂದು ಕಿವಿಮಾತು ಹೇಳಿದರು. ‘ಬಿಜೆಪಿ ಪತನದ ಹಾದಿಯಲ್ಲಿದೆ. ಕಾಂಗ್ರೆಸ್ ಏಳಿಗೆಯ ದಾರಿಯಲ್ಲಿದೆ. ಪಕ್ಷದಲ್ಲಿ ನಿಮಗೆ ಉತ್ತಮ ಭವಿಷ್ಯವಿದೆ’ ಎಂದೂ ಹೇಳಿದರು ಎಂದು ಗೊತ್ತಾಗಿದೆ.
ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಭಾನುವಾರ ಬೆಳಿಗ್ಗೆ 11 ಗಂಟೆಗೆ ರೆಸಾರ್ಟ್‌ಗೆ ಬರಲಿದ್ದಾರೆ. ಅವರು ಹಾಗೂ ಸಿದ್ದರಾಮಯ್ಯ ಅವರು ಪ್ರತಿ ಶಾಸಕರ ಜತೆಗೆ ವೈಯಕ್ತಿಕ ಸಮಾಲೋಚನೆ ನಡೆಸಲಿದ್ದಾರೆ. ಶಾಸಕರಅಹವಾಲುಗಳನ್ನು ಆಲಿಸಲಿದ್ದಾರೆ. ಮುಂದಿನ ಬಜೆಟ್‌ನಲ್ಲಿ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡುವಂತೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಒತ್ತಡ ಹೇರುತ್ತೇವೆ ಎಂಬುದನ್ನು ಮನವರಿಕೆ ಮಾಡಲಿದ್ದಾರೆ. ಅತೃಪ್ತರ ಮನಪರಿವರ್ತನೆಗೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
‘ಇಂದಿನ ಸಭೆಯಲ್ಲಿ ಪ್ರಸಕ್ತ ರಾಜಕೀಯ ವಿದ್ಯಮಾನ, ಬಿಜೆಪಿ ಷಡ್ಯಂತ್ರದ ಬಗ್ಗೆ ಚರ್ಚಿಸಿದೆವು.ಸಮ್ಮಿಶ್ರ ಸರ್ಕಾರವನ್ನು ಕೆಡಹುವ ತಂತ್ರಗಾರಿಕೆ ಈ ಬಾರಿಯೂ ವಿಫಲ ಆಗಲಿದೆ. ಒಗ್ಗಟ್ಟಿನಿಂದ ಇದನ್ನು ಎದುರಿಸಲು ತೀರ್ಮಾನ ಕೈಗೊಂಡಿದ್ದೇವೆ. ಬಿಜೆಪಿಗೆ ತಕ್ಕ
ಉತ್ತರ ನೀಡುವ ಕೆಲಸವನ್ನು ಮಾಡಲಿದ್ದೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಹೇಳಿದರು.
ಭಿನ್ನರಿಗೆ ನೋಟಿಸ್: ಕಾಂಗ್ರೆಸ್ ತೀರ್ಮಾನ
ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗದೇ ನಾಯಕತ್ವದ ವಿರುದ್ಧ ಬಂಡೆದ್ದಿರುವ ರಮೇಶ ಜಾರಕಿಹೊಳಿ, ಉಮೇಶ ಜಾಧವ್, ಬಿ. ನಾಗೇಂದ್ರ, ಮಹೇಶ ಕುಮಟಳ್ಳಿ ಅವರಿಗೆ ಭಾನುವಾರವೇ ನೋಟಿಸ್ ನೀಡಿ, ವಿವರಣೆ ಕೇಳಲು ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದಾರೆ.
ಬಿಡದಿ ಬಳಿಯ ಈಗಲ್‌ಟನ್ ರೆಸಾರ್ಟ್‌ನಲ್ಲಿ ಶನಿವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
‘ನೋಟಿಸ್ ನೀಡುವ ಜತೆಗೆ ಶಾಸಕರ ಆಪ್ತರು ಅಥವಾ ಕುಟುಂಬದವರನ್ನು ಸಂಪರ್ಕಿಸಿ ಮನವೊಲಿಸುವ ಯತ್ನವನ್ನೂ ಮಾಡಲಾಗುತ್ತದೆ. ಅದಕ್ಕೆ ಬಗ್ಗದೇ ಇದ್ದರೆ ಶಿಸ್ತುಕ್ರಮ ಕೈಗೊಳ್ಳುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ. ಶಾಸಕರು ಬಿಜೆಪಿ ಬಲೆಯೊಳಗೆ ಬಿದ್ದಿದ್ದು, ಅವರ ನಡವಳಿಕೆ ಸಂಶಯಕ್ಕೆ ಎಡೆ ಮಾಡಿದೆ. ಆಮಿಷ ಒಡ್ಡಿ ರಾಜೀನಾಮೆ ಕೊಟ್ಟರೆ ಅದನ್ನು ಸ್ವೀಕರಿಸದೇ, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿಧಾನಸಭಾಧ್ಯಕ್ಷರಿಗೆ ದೂರು ಕೊಡಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ’ ಎಂದು ಮೂಲಗಳು ಹೇಳಿವೆ.
ಸಚಿವ ಸ್ಥಾನ ತೊರೆಯಲು ಸಿದ್ಧ: ‘ಮೈತ್ರಿ ಸರ್ಕಾರವನ್ನು ಐದು ವರ್ಷ ಉಳಿಸುವ ಸಲುವಾಗಿ ಸಚಿವ ಸ್ಥಾನ ತ್ಯಾಗ ಮಾಡುತ್ತೇವೆ’ ಎಂದು ಕೆಲವು ಸಚಿವರು ಸಭೆಯಲ್ಲಿ ಸ್ಪಷ್ಟಪಡಿಸಿದರು.
ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ವಸತಿ ಸಚಿವ ಎಂ.ಟಿ.ಬಿ.ನಾಗರಾಜ್ ಅವರು ‘ಸಚಿವ ಸ್ಥಾನ ತೊರೆಯಲು ಸಿದ್ಧರಾಗಿದ್ದೇವೆ’ ಎಂದು ಹೇಳಿದರು.
‘ಬಿಜೆಪಿ ಹೆಜ್ಜೆ ಹಿಂದಿಟ್ಟಿದ್ದು ಕಾರ್ಯತಂತ್ರದ ಭಾಗ’
ಗುರುಗ್ರಾಮದ ರೆಸಾರ್ಟ್‌ನಲ್ಲಿದ್ದರೆ ಅನಗತ್ಯ ಆರೋಪಕ್ಕೆ ಗುರಿಯಾಗಬೇಕಾಗುತ್ತದೆ ಎಂಬ ಕಾರಣಕ್ಕೆ ಶಾಸಕರನ್ನು ವಾಪಸು ಕರೆಸಿಕೊಂಡಿರುವ ಬಿಜೆಪಿ ನಾಯಕರು, ಆಪರೇಷನ್ ವಿಫಲವಾಗಿಲ್ಲ; ಹೆಜ್ಜೆ ಹಿಂದಿಟ್ಟಿದ್ದು ಮುಂದಿನ ರಹಸ್ಯ ನಡೆಯ ಭಾಗ ಎಂದು ಪ್ರತಿಪಾದಿಸಿದ್ದಾರೆ.
‘ಕಾಂಗ್ರೆಸ್ ನಾಲ್ವರು ಶಾಸಕರು ಸಂಪರ್ಕದಲ್ಲಿದ್ದಾರೆ. ಇಬ್ಬರು ಪಕ್ಷೇತರರು ಈಗಾಗಲೇ ಮೈತ್ರಿ ಸರ್ಕಾರಕ್ಕೆ ನೀಡಿರುವ ಬೆಂಬಲ ವಾಪಸು ಪಡೆಯುವುದಾಗಿ ಹೇಳಿಕೊಂಡಿದ್ದಾರೆ. ಇದು ಪಕ್ಷಕ್ಕೆ ಆಗಿರುವ ಮುನ್ನಡೆ’ ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದರು.
ಕಾಂಗ್ರೆಸ್ ನಾಯಕರೊಂದಿಗೆ ಈಗಲ್ ಟನ್ ರೆಸಾರ್ಟ್‌ಗೆ ಹೋಗಿದ್ದ ಅನೇಕ ಶಾಸಕರು ನಮ್ಮ ನಾಯಕರ ಸಂಪರ್ಕದಲ್ಲಿದ್ದಾರೆ. ಸೂಕ್ತ ಸಮಯದಲ್ಲಿ ಕಾಂಗ್ರೆಸ್‌ಗೆ ಕೈ ಕೊಟ್ಟು ಬರಲಿದ್ದಾರೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಕನಿಷ್ಠ ನಾಲ್ಕು ಶಾಸಕರು ರಾಜೀನಾಮೆ ಕೊಡುವುದು ಖಚಿತ ಎಂದರು.
‘ಆಪರೇಷನ್ ಕಮಲ’ ಮುಗಿದಿದೆ ಎಂದು ಬಿಂಬಿಸಿಕೊಳ್ಳುವ ಸಲುವಾಗಿ ಶಾಸಕರನ್ನು ವಾಪಸು ಕರೆಸಿಕೊಂಡು, ಕ್ಷೇತ್ರಕ್ಕೆ ಕಳುಹಿಸಲಾಗಿದೆ. ಅಲ್ಲದೇ, ನಾಯಕರು ಬರಪೀಡಿತ ಜಿಲ್ಲೆಗಳ ಅಧ್ಯಯನಕ್ಕೆ ತೆರಳಿದ್ದಾರೆ. ಕಾಂಗ್ರೆಸ್ ನಾಯಕರ ಹಿಡಿತದಿಂದ ಹೊರಬರಲಿರುವ ಶಾಸಕರನ್ನು ಸೆಳೆಯುವುದು ಮುಂದಿನ ಹೆಜ್ಜೆಯಾಗಿದೆ’ ಎಂದೂ ಅವರು ವಿವರಿಸಿದರು.
ಪಕ್ಷ ತೊರೆಯುವುದಿಲ್ಲ: ‘ಜೆಡಿಎಸ್ ನಾಯಕರು ನನ್ನನ್ನು ಸಂಪರ್ಕಿಸಿದ್ದಾರೆ ಎಂಬುದು ಸುಳ್ಳು. ನಾನು ಯಾವುದೇ ಕಾರಣಕ್ಕೂ ಪಕ್ಷ ತೊರೆಯುವುದಿಲ್ಲ. ಅದೆಲ್ಲವೂ ಕೇವಲ ವದಂತಿ’ ಎಂದು ಗೋವಿಂದರಾಜನಗರ ಕ್ಷೇತ್ರದ ಬಿಜೆಪಿ ಶಾಸಕ ವಿ. ಸೋಮಣ್ಣ ಸ್ಪಷ್ಟಪಡಿಸಿದ್ದಾರೆ.
*ನಾವು ವಿರೋಧ ಪಕ್ಷವಾಗಿ ಕೆಲಸ ಮಾಡಲಿದ್ದೇವೆ. ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುತ್ತೇವೆ ಎಂಬ ಭಯ ದೋಸ್ತಿ ಪಕ್ಷಗಳಿಗೆ ಬೇಡ
-ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
* ದೆಹಲಿಯಲ್ಲಿ ಕುಳಿತು ಅಮಿತ್ ಶಾ ನೇತೃತ್ವದಲ್ಲಿ ಸರ್ಕಾರ ಕೆಡವಲು ತಂತ್ರ ರೂಪಿಸುತ್ತಿರುವುದು ಸ್ಪಷ್ವ. ಬಿಜೆಪಿಯವರೇ ಹೇಳಿದ್ದಾರೆ
-ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ
*ಕಾಂಗ್ರೆಸ್ ಹಾಗೂ ಜೆಡಿಎಸ್‌ನವರು ಮಕ್ಕಳ ಕಳ್ಳರಿದ್ದಂತೆ. ಹಾಗಾಗಿ, ನಮ್ಮ ಮಕ್ಕಳನ್ನು ಕಾಪಾಡಲು ರೆಸಾರ್ಟ್‌ನಲ್ಲಿ ಇಟ್ಟಿದ್ದೆವು
-ಕೆ.ಎಸ್.ಈಶ್ವರಪ್ಪ, ಬಿಜೆಪಿ ಶಾಸಕ
* ಇವನ್ನೂ ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.