ADVERTISEMENT

ಮೈತ್ರಿಗೆ ಕಿಚ್ಚು ಹಚ್ಚಿದ ಬಿಜೆಪಿ: ಜೆಡಿಎಸ್‌, ಕಾಂಗ್ರೆಸ್‌ನಲ್ಲಿ ಕಂಪನ

ಬೆಂಬಲ ವಾಪಸ್‌ ಪಡೆದ ಇಬ್ಬರು ಪಕ್ಷೇತರರು

​ಪ್ರಜಾವಾಣಿ ವಾರ್ತೆ
Published 15 ಜನವರಿ 2019, 20:24 IST
Last Updated 15 ಜನವರಿ 2019, 20:24 IST
   

ಬೆಂಗಳೂರು: ಇಬ್ಬರು ಪಕ್ಷೇತರ ಶಾಸಕರು ಬೆಂಬಲ ವಾಪಸು ಪಡೆದ ಬೆನ್ನಲ್ಲೆ, ಆರರಿಂದ ಎಂಟು ಕಾಂಗ್ರೆಸ್ ಶಾಸಕರಿಂದ ರಾಜೀನಾಮೆ ಕೊಡಿಸುವ ಮೂಲಕ ಮೈತ್ರಿ ಸರ್ಕಾರ ಅಲುಗಾಡಿಸುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಮುಂದಿಡಲು ಬಿಜೆಪಿ ಕಾರ್ಯತಂತ್ರ ಹೆಣೆದಿದೆ.

‘ಆಪರೇಷನ್‌ ಕಮಲ’ದ ಆತಂಕದಿಂದ ಕಂಗೆಟ್ಟಂತೆ ಕಂಡ ಕಾಂಗ್ರೆಸ್ ನಾಯಕರು ಪಕ್ಷದ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ನೇತೃತ್ವದಲ್ಲಿ ಮಂಗಳವಾರ ದಿನವಿಡೀ ಚರ್ಚೆ ನಡೆಸಿದರು. ಪಕ್ಷದಿಂದ ದೂರ ಸರಿದಿರುವ ಶಾಸಕರನ್ನು ಮತ್ತೆ ಸೆಳೆಯುವ ಜೊತೆಗೆ,ಬಿಜೆಪಿಯ ಶಾಸಕರನ್ನು ಸೆಳೆದು ಯಡಿಯೂರಪ್ಪ ತಂತ್ರಕ್ಕೆ ತಿರುಮಂತ್ರ ರೂಪಿಸುವ ಬಗ್ಗೆಯೂಮಾತುಕತೆ ನಡೆಸಿದರು.

ADVERTISEMENT

ಕಾಂಗ್ರೆಸ್‌ ಅತೃಪ್ತ ಶಾಸಕರಿಂದ ಬುಧವಾರ ಅಥವಾ ಗುರುವಾರ ರಾಜೀನಾಮೆ ಕೊಡಿಸಿದರೆ, ಇನ್ನಷ್ಟು ಅತೃಪ್ತರು ಪಕ್ಷದತ್ತ ವಾಲಬಹುದೆಂಬ ಲೆಕ್ಕಾಚಾರ ಬಿಜೆಪಿ ನಾಯಕರದ್ದು. ಆದರೆ, ಅದಕ್ಕೂ ಮೊದಲು ತಮ್ಮ ಎಲ್ಲ ಶಾಸಕರನ್ನು ಒಂದೆಡೆ ಸೇರಿಸಲು ಕಾಂಗ್ರೆಸ್‌ ಪಾಳಯದಲ್ಲಿ ಚರ್ಚೆ ನಡೆಯಿತು.

ಸಂಪುಟದಿಂದ ಕೈಬಿಟ್ಟ ಕಾರಣಕ್ಕೆ ಮುನಿಸಿಕೊಂಡಿರುವ ಪಕ್ಷೇತರ ಶಾಸಕ ರಾಣೆಬೆನ್ನೂರಿನ ಆರ್. ಶಂಕರ್ ಹಾಗೂ ಮುಳಬಾಗಿಲಿನ ಶಾಸಕ ಎಚ್. ನಾಗೇಶ್ ಸರ್ಕಾರಕ್ಕೆ ಬೆಂಬಲ ವಾಪಸ್‌ ಪಡೆದು ರಾಜ್ಯಪಾಲರಿಗೆ ಪತ್ರ ಬರೆದಿರುವುದಾಗಿ ಮುಂಬೈಯಿಂದಲೇ ಪ್ರಕಟಿಸಿದರು. ಆ ಮೂಲಕ, ದೋಸ್ತಿ ಸರ್ಕಾರಕ್ಕೆ ಮರ್ಮಾಘಾತ ನೀಡಿದರು.

‘ಆಪರೇಷನ್‌ ಭೀತಿ’ ಖಚಿತವಾಗುತ್ತಿದ್ದಂತೆ ಸೋಮವಾರ ತಡರಾತ್ರಿ ರಾಜ್ಯಕ್ಕೆ ಧಾವಿಸಿದ ಬಂದ ವೇಣುಗೋಪಾಲ್ ಕುಮಾರಕೃಪಾ ಅತಿಥಿಗೃಹದಲ್ಲಿ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ, ಸಚಿವ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಜೊತೆ ಚರ್ಚೆ ನಡೆಸಿದರು.

ಪಕ್ಷೇತರ ಶಾಸಕರು ಬೆಂಬಲ ವಾಪಸು ಪಡೆದ ಮಾಹಿತಿ ಸಿಗುತ್ತಿದ್ದಂತೆ ಕುಮಾರಕೃಪಾಕ್ಕೆ ಧಾವಿಸಿದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಸುಮಾರು ಒಂದು ಗಂಟೆ ಮಾತುಕತೆ ನಡೆಸಿದರು. ಸರ್ಕಾರದ ಅಳಿವುಉಳಿವಿನ ಸ್ಥಿತಿ ಎದುರಾದರೆ ಏನು ಮಾಡಬೇಕು, ಕಾನೂನಾತ್ಮಕ ಕ್ರಮಗಳೇನು ಎಂಬ ಬಗ್ಗೆ ವಿಚಾರ ವಿನಿಮಯ ಮಾಡಿದರು.

ಬಿಜೆಪಿ ಕಡೆ ವಾಲುವ ಶಾಸಕರ ಪಟ್ಟಿಯಲ್ಲಿದ್ದಾರೆ ಎನ್ನಲಾದ ವಿಜಯನಗರ ಶಾಸಕ ಆನಂದ್ ಸಿಂಗ್ ಜೊತೆ ವೇಣುಗೋಪಾಲ್ ಚರ್ಚೆ ನಡೆಸಿದರು. ‘ಬಿಜೆಪಿಯವರು ಆಮಿಷ ಒಡ್ಡಿದ್ದು ನಿಜ. ನಾನು ಅದನ್ನು ನಿರಾಕರಿಸಿದ್ದೂ ನಿಜ’ ಎಂದು ವೇಣುಗೋಪಾಲ್‌ ಬಳಿ ಆನಂದ್ ಸಿಂಗ್ ಮಾಹಿತಿ ಬಿಚ್ಚಿಟ್ಟಿದ್ದಾರೆ.

ರಮೇಶ ಜಾರಕಿಹೊಳಿ ಯಾರೆನ್ನಲ್ಲ ಸಂಪರ್ಕಿಸಿದ್ದಾರೆ, ಎಷ್ಟು ಶಾಸಕರು ರಮೇಶ ಜೊತೆ ಇದ್ದಾರೆ ಎಂಬ ಬಗ್ಗೆಯೂ ಆನಂದ್ ಸಿಂಗ್ ಮಾಹಿತಿ ನೀಡಿದ್ದಾರೆ. ಅವರ ಮಾಹಿತಿ ಪ್ರಕಾರ ರಮೇಶ ಅವರು ಇಬ್ಬರು ಪಕ್ಷೇತರರನ್ನು ಹೊರತುಪಡಿಸಿ 9 ಶಾಸಕರನ್ನು ಕರೆತರುವ ಭರವಸೆಯನ್ನು ಬಿಜೆಪಿ ನಾಯಕರಿಗೆ ನೀಡಿದ್ದಾರೆ.

‘ರಮೇಶ ಜಾರಕಿಹೊಳಿ, ಮಹೇಶ ಕುಮಟಹಳ್ಳಿ, ಉಮೇಶ್ ಜಾಧವ್, ಬಿ. ನಾಗೇಂದ್ರ ಮಾತ್ರ ‘ಆಪರೇಷನ್’ ಗೆ ಒಳಗಾಗುವ ಸಾಧ್ಯತೆ ಇದೆ. ಆದರೆ, ಭೀಮಾ ನಾಯಕ್, ಗಣೇಶ್, ಪ್ರತಾಪ್ ಗೌಡ ಪಾಟೀಲ, ಬಸವರಾಜ್ ದದ್ದಲ್, ಶಿವರಾಮ ಹೆಬ್ಬಾರ್ ಹಿಂದೇಟು ಹಾಕಿದ್ದಾರೆ. ಸಂಗಮೇಶ್ವರ, ಬಿ.ಸಿ. ಪಾಟೀಲ ಮತ್ತು ಡಾ. ಸುಧಾಕರ್‌ ಅವರಿಗೂ ಬಿಜೆಪಿ ನಾಯಕರು ಮತ್ತು ರಮೇಶ ಪದೇ ಪದೇ ಕರೆ ಮಾಡಿದ್ದಾರೆ. ಜೆಡಿಎಸ್ ಶಾಸಕರಾದ ಶಿರಾದ ಸತ್ಯನಾರಾಯಣ, ನಾಗಠಾಣದ ದೇವಾನಂದ್ ಚೌಹಾಣ್ ಅವರನ್ನೂ ಸಂಪರ್ಕಿಸಿದ್ದಾರೆ’ ಎಂಬ ಮಾಹಿತಿಯನ್ನು ಆನಂದ್‌ ಸಿಂಗ್‌ ನೀಡಿದ್ದಾರೆ ಎನ್ನಲಾಗಿದೆ.

ಎಲ್ಲಿ ಕೂಡಿಟ್ಟರೂ ಕರೆ ತರುವೆ:‘ನಮ್ಮ ಪಕ್ಷದ ಶಾಸಕರನ್ನು ಬಿಜೆಪಿಯವರು ಎಲ್ಲೇ ಕೂಡಿ ಹಾಕಿರಲಿ. ಅವರನ್ನು ಕರೆದುಕೊಂಡು ಬರುವ ಶಕ್ತಿ ನಮಗಿದೆ. ನಾನು, ಆನಂದ್ ಸಿಂಗ್, ನಾಗೇಂದ್ರ, ಗಣೇಶ್ ಎಲ್ಲರೂ ಸ್ನೇಹಿತರೇ. ಬಿಜೆಪಿ ನಾಯಕರು ಹತಾಶರಾಗಿದ್ದಾರೆ. ರಾಜಕಾರಣದಲ್ಲಿ ಎರಡು ರೀತಿಯ ಆಟ ನಡೆಯುತ್ತದೆ. ಅದನ್ನೆಲ್ಲ ಬಿಡಿಸಿ ಹೇಳಲು ಸಾಧ್ಯವಿಲ್ಲ. ಶಾಸಕರ ಭವಿಷ್ಯವನ್ನು ಹಾಳು ಮಾಡುವುದನ್ನು ಬಿಟ್ಟರೆ ಒಳ್ಳೆಯದು’ ಎಂದು ಶಿವಕುಮಾರ್‌ ಹೇಳಿದರು.

ಸದನ ಸಂಖ್ಯಾಬಲ ಲೆಕ್ಕಾಚಾರ

ವಿಧಾನಸಭೆಯ ಒಟ್ಟು ಸಂಖ್ಯಾಬಲ 224. ಮೈತ್ರಿಕೂಟದ ಬಲ 120 (ಕಾಂಗ್ರೆಸ್- 80, ಜೆಡಿಎಸ್ - 37, ಪಕ್ಷೇತರ -2, ಬಿಎಸ್‌ಪಿ - 1). ಬಿಜೆಪಿ ಸದಸ್ಯರ ಬಲ 104.

ಆದರೆ, ಪಕ್ಷೇತರರು ಬೆಂಬಲ ವಾಪಸ್‌ ಪಡೆದ ಪರಿಣಾಮ ಮೈತ್ರಿ ಬಲ 118ಕ್ಕೆ ಕುಸಿದಿದೆ. ಇದರಲ್ಲಿ ಸಭಾಧ್ಯಕ್ಷರೂ ಇದ್ದಾರೆ. ಸದನದಲ್ಲಿ ವಿಶ್ವಾಸಮತ ಯಾಚನೆ ಸಂದರ್ಭ ಎದುರಾಗಿ ಆಡಳಿತ ಮತ್ತು ವಿರೋಧ ಪಕ್ಷಗಳ ಸಂಖ್ಯಾಬಲ ಸಮ ಆದಾಗ ಮಾತ್ರ ಸಭಾಧ್ಯಕ್ಷರು ಮತ ಚಲಾಯಿಸಲು ಅವಕಾಶವಿದೆ.

ಇಬ್ಬರು ಪಕ್ಷೇತರ ಶಾಸಕರ ಬೆಂಬಲದಿಂದಾಗಿ ಇದೀಗ ಬಿಜೆಪಿ ಸಂಖ್ಯಾಬಲ 106ಕ್ಕೆ ಏರಿದೆ. ಸಭಾಧ್ಯಕ್ಷರನ್ನು ಹೊರತುಪಡಿಸಿದರೆ ಮೈತ್ರಿ ಬಲ 117 ಆಗಿದ್ದು, ಜೆಡಿಎಸ್‌– ಕಾಂಗ್ರೆಸ್‌ನಿಂದ 12 ಶಾಸಕರು ರಾಜೀನಾಮೆ ನೀಡಿದರೆ ಸರ್ಕಾರ ಅಲ್ಪಮತಕ್ಕೆ (105) ಕುಸಿಯಲಿದೆ.

ಬಿಜೆಪಿ ಏನು ಮಾಡಬಹುದು?

* ಕಾಂಗ್ರೆಸ್‌–ಜೆಡಿಎಸ್‌ನ 15ರಿಂದ 17 ಶಾಸಕರನ್ನು ರಾಜೀನಾಮೆ ಕೊಡಿಸಿ ಸರ್ಕಾರ ಅಲ್ಪಮತಕ್ಕೆ ಕುಸಿಯುವಂತೆ ಮಾಡುವುದು

* ಶನಿವಾರದವರೆಗೆ ಶಾಸಕರಿಂದ ಹಂತ ಹಂತವಾಗಿ (ಬುಧವಾರ ಆರರಿಂದ ಎಂಟು, ಗುರುವಾರ ನಾಲ್ವರು ಹಾಗೂ ಶುಕ್ರವಾರ ಇಬ್ಬರು...) ರಾಜೀನಾಮೆ ಕೊಡಿಸುವುದು

* ಸರ್ಕಾರ ಅಲ್ಪಮತಕ್ಕೆ ಕುಸಿದಿದೆ ಎಂದು ರಾಜ್ಯಪಾಲರಿಗೆ ಮನವರಿಕೆ ಮಾಡಲು ಶಾಸಕರ ಪರೇಡ್‌

* ವಿಶ್ವಾಸ ಮತಯಾಚನೆಗೆ ವಿಧಾನಮಂಡಲದ ತುರ್ತು ಅಧಿವೇಶನ ಕರೆಯುವಂತೆ ರಾಜ್ಯಪಾಲರ ಮೇಲೆ ಒತ್ತಡ ಹೇರುವುದು

ಕಾಂಗ್ರೆಸ್–ಜೆಡಿಎಸ್ ತಂತ್ರ ಏನು?

* ಬಿಜೆಪಿಯ ಆರು ಶಾಸಕರಿಂದ ರಾಜೀನಾಮೆ ಕೊಡಿಸುವುದು

* ಶಾಸಕರ ರಾಜೀನಾಮೆ ಅಂಗೀಕಾರ ವಿಳಂಬ ಮಾಡುವಂತೆ ವಿಧಾನಸಭಾಧ್ಯಕ್ಷರ ಮೇಲೆ ಒತ್ತಡ ಹೇರಿ, ಈ ಅವಧಿಯಲ್ಲಿ ಅತೃಪ್ತರನ್ನು ‘ಸಮಾಧಾನ’ಪಡಿಸುವುದು.

* ವಿಶ್ವಾಸಮತ ಯಾಚನೆ ಪ್ರಮೇಯ ಎದುರಾದರೆ ಶಾಸಕರಿಗೆ ವಿಪ್‌ ಜಾರಿ ಮಾಡುವುದು. ವಿಪ್‌ ಉಲ್ಲಂಘಿಸಿದ ಶಾಸಕರನ್ನು ಅನರ್ಹಗೊಳಿಸುವುದು.

* ಬೆಂಬಲ ವಾಪಸ್‌ ‍ಪಡೆದಿರುವ ಪಕ್ಷೇತರರಾದ ಆರ್‌.ಶಂಕರ್‌ ಹಾಗೂ ಎಚ್‌.ನಾಗೇಶ್‌ ಮನವೊಲಿಕೆ

***

ಮಿ ಸಾಫ್ ನಿಯತ್ ಮೋದಿ ಅವರೇ, ಕರ್ನಾಟಕದ ನಾಚಿಕೆಗೆಟ್ಟ ಬಿಜೆಪಿ ನಾಯಕರಿಗೆ ಸರ್ಕಾರ ಬೀಳಿಸಲು ಅವಕಾಶ ಕೊಡುವುದು ಸ್ವಚ್ಛ ಉದ್ದೇಶವೇ?

– ಸಿದ್ದರಾಮಯ್ಯ, ಸಮನ್ವಯ ಸಮಿತಿ ಅಧ್ಯಕ್ಷ

ದೋಸ್ತಿ ಸರ್ಕಾರ ಬಂಡೆಯಂತೆ ಸುಭದ್ರವಾಗಿದೆ. ಪಕ್ಷೇತರರ ಬೆಂಬಲ ವಾಪಸ್ ಪಡೆದ ತಕ್ಷಣ ಸರ್ಕಾರ ಬೀಳುತ್ತದೆಯೇ. ಸರ್ಕಾರ ನಡೆಸುವಷ್ಟು ಸಂಖ್ಯಾಬಲ ನನಗಿದೆ.

– ಎಚ್‌.ಡಿ. ಕುಮಾರಸ್ವಾಮಿ, ಸಿ.ಎಂ

ಎಚ್‌ಡಿಕೆ ಪ್ರಮಾಣ ವಚನ ಸ್ವೀಕರಿಸಿದ ದಿನದಿಂದ ಶಾಸಕರ ಖರೀದಿ ಯತ್ನದಲ್ಲಿ ಬಿಜೆಪಿ ತೊಡಗಿದೆ. ಆದರೆ, ನಮ್ಮವರ ಮೇಲೆ ನಂಬಿಕೆ ಇದೆ.

– ಕೆ.ಸಿ. ವೇಣುಗೋಪಾಲ್, ರಾಜ್ಯ‌ ಕಾಂಗ್ರೆಸ್ ಉಸ್ತುವಾರಿ

ದೆಹಲಿ ಮಟ್ಟದಲ್ಲಿ ಪಕ್ಷದಲ್ಲಿ ನಡೆಯುತ್ತಿರುವ ಚಟುವಟಿಕೆ ಬಗ್ಗೆ ಮಾಹಿತಿ ಬಹಿರಂಗಪಡಿಸಲು ಸಾಧ್ಯವಿಲ್ಲ. ಮಾಹಿತಿ ಬಹಿರಂಗವಾದರೆ ನಮ್ಮ ಯೋಜನೆಗಳು ವಿಫಲವಾಗುತ್ತವೆ.

– ಡಿ.ವಿ.ಸದಾನಂದ ಗೌಡ, ಕೇಂದ್ರ ಸಚಿವ

ಬಿಜೆಪಿ ನಾಯಕರು ನಮ್ಮ ಶಾಸಕರಿಗೆ ಅಧಿಕಾರದ ಆಸೆ, ಆಮಿಷ ತೋರಿಸಿ ಮುಂಬೈನಲ್ಲಿ ಹಿಡಿದಿಟ್ಟುಕೊಂಡಿದ್ದಾರೆ. ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸು ಪಡೆಯಯಲು ಪಕ್ಷೇತರರು ಸ್ವತಂತ್ರರು.

– ಜಿ. ಪರಮೇಶ್ವರ, ಉಪಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.