ADVERTISEMENT

‘ಆಪರೇಷನ್‌ ಕಮಲ’ ಆಡಿಯೊ- ಪಕ್ಷಕ್ಕೆ ಮುಜುಗರ: ವರಿಷ್ಠರು ಕೆಂಡಾಮಂಡಲ

ರಾಷ್ಟ್ರಮಟ್ಟದಲ್ಲಿ ಸುದ್ದಿಮಾಡಿದ ‘ಆಪರೇಷನ್‌ ಕಮಲ’ ಆಡಿಯೊ ಪ್ರಕರಣ...

ಸಿದ್ದಯ್ಯ ಹಿರೇಮಠ
Published 13 ಫೆಬ್ರುವರಿ 2019, 20:30 IST
Last Updated 13 ಫೆಬ್ರುವರಿ 2019, 20:30 IST
   

ನವದೆಹಲಿ: ರಾಷ್ಟ್ರಮಟ್ಟದಲ್ಲಿ ಪಕ್ಷವನ್ನು ಮುಜುಗರಕ್ಕೆ ಈಡುಮಾಡಿರುವ ‘ಆಪರೇಷನ್ ಕಮಲ’ದ ಆಡಿಯೊ ಬಹಿರಂಗಗೊಂಡ ಪ್ರಕರಣವು ಬಿಜೆಪಿ ಹೈಕಮಾಂಡ್‌ ಆಕ್ರೋಶಕ್ಕೆ ಕಾರಣವಾಗಿದೆ.

‘ವಿವಿಧ ಆಯಾಮಗಳಲ್ಲಿ ಈ ಪ್ರಕರಣದ ತನಿಖೆ ನಡೆದರೆ ಪಕ್ಷಕ್ಕೆ ಮತ್ತಷ್ಟು ಇರುಸುಮುರುಸು ಉಂಟಾಗಲಿದೆ’ ಎಂಬ ಅಂಶವೂ ವರಿಷ್ಠರ ನಿದ್ದೆಗೆಡಿಸಿದೆ.

ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಸೇರಿದಂತೆ ಪ್ರಮುಖ ಮುಖಂಡರನ್ನು ತರಾಟೆಗೆ ತೆಗೆದುಕೊಂಡಿರುವ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಈ ಪ್ರಕರಣವು ಲೋಕಸಭೆ ಚುನಾವಣೆಯ ಫಲಿತಾಂಶದ ಮೇಲೆ ಅಡ್ಡ ಪರಿಣಾಮ ಉಂಟು ಮಾಡದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದ್ದಾಗಿ ಹೈಕಮಾಂಡ್‌ ಮೂಲಗಳು ಹೇಳಿವೆ.

ADVERTISEMENT

ಕಳೆದ 15 ದಿನಗಳಿಂದ ರಾಜ್ಯದಲ್ಲಿ ನಡೆದಿದ್ದ ರಾಜಕೀಯ ಬೆಳವಣಿಗೆಗಳು ಬಿಜೆಪಿಗೆ ಪೂರಕವಾಗಿಯೇ ಇದ್ದವು. ಆದರೆ, ಆಡಿಯೊ ಬಹಿರಂಗ ಆಗುತ್ತಿದ್ದಂತೆಯೇ ಪಕ್ಷದ ‌ಮುಖಂಡರ ಲೆಕ್ಕಾಚಾರಗಳೆಲ್ಲ ತಲೆಕೆಳಗಾಗಿವೆ. ಈ ನಕಾರಾತ್ಮಕ ಬೆಳವಣಿಗೆಯು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದಂತೆಯೇ ವರಿಷ್ಠರು ಕೆಂಡಾಮಂಡಲ ಆಗಿದ್ದಾರೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

‘ಘಟಿಸಬಾರದ್ದು ಘಟಿಸಿದೆ. ಪಕ್ಷವನ್ನೂ, ಪಕ್ಷದ ತತ್ವ– ಸಿದ್ಧಾಂತವನ್ನೂ ಪ್ರಶ್ನಿಸುವಂತಹ ಬೆಳವಣಿಗೆಗಳು ವರಿಷ್ಠರ ಕಣ್ಣುಗಳನ್ನು ಸಹಜವಾಗಿಯೇ ಕೆಂಪಗಾಗಿಸಿವೆ. ತೆರೆಮರೆಯ ಕಾರ್ಯವು ಬಹಿರಂಗಗೊಂಡಿದ್ದೇ ಇದಕ್ಕೆ ಕಾರಣ’ ಎಂದು ಪಕ್ಷದ ಪ್ರಮುಖ ಮುಖಂಡರೊಬ್ಬರು ‘ಪ್ರಜಾವಾಣಿ’ ಎದುರು ನಗುತ್ತಲೇ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.