ADVERTISEMENT

ಆಪರೇಷನ್‌ ಕಮಲ ಆಡಿಯೊ ಪ್ರಕರಣ: ಬಿಎಸ್‌ವೈ ವಿರುದ್ಧದ ತನಿಖೆಗೆ ಕೋರ್ಟ್‌ ಅಸ್ತು

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2021, 16:37 IST
Last Updated 31 ಮಾರ್ಚ್ 2021, 16:37 IST
ಬಿ.ಎಸ್.ಯಡಿಯೂರಪ್ಪ
ಬಿ.ಎಸ್.ಯಡಿಯೂರಪ್ಪ    

ಬೆಂಗಳೂರು: ಗುರುಮಠಕಲ್‌ ಕ್ಷೇತ್ರದ ಜೆಡಿಎಸ್‌ ಶಾಸಕ ನಾಗನಗೌಡ ಕಂದಕೂರ ಅವರನ್ನು ಬಿಜೆಪಿಗೆ ಸೆಳೆಯಲು 2019ರಲ್ಲಿ ₹ 10 ಕೋಟಿ ಲಂಚದ ಆಮಿಷ ಒಡ್ಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ದೇವದುರ್ಗ ಪೊಲೀಸ್‌ ಠಾಣೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮತ್ತು ಇತರರ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆಗೆ ಇದ್ದ ತಡೆಯಾಜ್ಞೆಯನ್ನು ಹೈಕೋರ್ಟ್‌ ಬುಧವಾರ ತೆರವುಗೊಳಿಸಿದೆ.

ಇದರಿಂದಾಗಿ ಈ ಪ್ರಕರಣದ ತನಿಖೆಗೆ ಮತ್ತೆ ಅವಕಾಶ ದೊರಕಿದಂತಾಗಿದೆ.

‘2019ರ ಫೆಬ್ರುವರಿ 7ರ ಮಧ್ಯರಾತ್ರಿ ತನ್ನನ್ನು ದೇವದುರ್ಗ ಪ್ರವಾಸಿ ಮಂದಿರಕ್ಕೆ ಕರೆಸಿಕೊಂಡ ಯಡಿಯೂರಪ್ಪ ಅವರು, ತಂದೆಯಿಂದ ರಾಜೀನಾಮೆ ಕೊಡಿಸಿ ಮುಂಬೈಗೆ ಕಳುಹಿಸುವಂತೆ ಒತ್ತಡ ಹೇರಿದ್ದರು. ಇದಕ್ಕಾಗಿ ₹ 10 ಕೋಟಿ ನೀಡುವ ಆಮಿಷ ಒಡ್ಡಿದ್ದರು. ಮುಂದಿನ ಚುನಾವಣೆಯಲ್ಲಿ ನನ್ನನ್ನು ಗುರುಮಠಕಲ್‌ ಕ್ಷೇತ್ರದಲ್ಲಿ ಕಣಕ್ಕಿಳಿಸಿ ಗೆಲ್ಲಿಸುವ ಮತ್ತು ಸಚಿವ ಸ್ಥಾನ ನೀಡುವುದಾಗಿಯೂ ಹೇಳಿದ್ದರು’ ಎಂದು ನಾಗನಗೌಡ ಅವರ ಮಗ ಶರಣಗೌಡ ದೇವದುರ್ಗ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ADVERTISEMENT

ದೇವದುರ್ಗ ಪ್ರವಾಸಿ ಮಂದಿರದಲ್ಲಿ ನಡೆದಿತ್ತು ಎನ್ನಲಾದ ಮಾತುಕತೆಯ ರೆಕಾರ್ಡಿಂಗ್‌ ಅನ್ನೂ ಶರಣಗೌಡ ಪೊಲೀಸರಿಗೆ ನೀಡಿದ್ದರು. ಯಡಿಯೂರಪ್ಪ, ಶಾಸಕರಾದ ಶಿವನಗೌಡ ನಾಯಕ್‌, ಜೆ. ಪ್ರೀತಂ ಗೌಡ ಮತ್ತು ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಬಳಿಕ ಅವರ ರಾಜಕೀಯ ಸಲಹೆಗಾರರಾಗಿದ್ದ ಪತ್ರಕರ್ತ ಎಂ.ಬಿ. ಮರಂಕಲ್‌ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದರು.

ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಪಡೆದಿದ್ದ ಯಡಿಯೂರಪ್ಪ ಮತ್ತು ಇತರ ಆರೋಪಿಗಳು, ಎಫ್‌ಐಆರ್‌ ರದ್ದು ಮಾಡುವಂತೆ ಕೋರಿ ಹೈಕೋರ್ಟ್‌ನ ಕಲಬುರ್ಗಿ ಪೀಠದಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದರು. 2019ರ ಫೆಬ್ರುವರಿಯಲ್ಲೇ ರಿಟ್‌ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ, ತನಿಖೆಗೆ ತಡೆ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.