ಬೆಂಗಳೂರು: ‘ಸರ್ಕಾರ ಕೆಡವಲು ಕಾಂಗ್ರೆಸ್ ಶಾಸಕರಾದ ಚನ್ನಮ್ಮನ ಕಿತ್ತೂರಿನ ಬಾಬಾಸಾಹೇಬ ಪಾಟೀಲ ಮತ್ತು ಚಿಕ್ಕಮಗಳೂರಿನ ಎಚ್.ಡಿ. ತಮ್ಮಯ್ಯ ಅವರಿಗೆ ಬಿಜೆಪಿಯಿಂದ ₹ 100 ಕೋಟಿ ಆಫರ್ ನೀಡಿರುವ ಎಲ್ಲ ದಾಖಲೆಗಳು ಇವೆ’ ಎಂದು ಮಂಡ್ಯ ಶಾಸಕ ಪಿ. ರವಿಕುಮಾರ್ ಗಣಿಗ ಅವರ ಹೇಳಿಕೆ, ರಾಜ್ಯದಲ್ಲಿ ‘ಆಪರೇಷನ್ ಕಮಲ’ದ ಸದ್ದನ್ನು ಮತ್ತಷ್ಟು ಜೋರಾಗಿಸಿದೆ.
ರವಿಕುಮಾರ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ ನಾಯಕರು, ಕಾಂಗ್ರೆಸ್‌ನವರು ತಮ್ಮ ಹುಳುಕು ಮುಚ್ಚಿಕೊಳ್ಳಲು ಮಾಡುತ್ತಿರುವ ಷಡ್ಯಂತ್ರ ಇದು. ದಾಖಲೆ ಇದ್ದರೆ ಬಿಡುಗಡೆ ಮಾಡಲಿ’ ಎಂದು ಸವಾಲು ಹಾಕಿದ್ದಾರೆ.
ತಮ್ಮ ಪಕ್ಷದ ಶಾಸಕನ ಮಾತಿಗೆ ಪ್ರತಿಕ್ರಿಯಿಸಿರುವ ತಮ್ಮಯ್ಯ, ‘ನನ್ನನ್ನು ಯಾರೂ ಸಂಪರ್ಕಿಸಿಲ್ಲ’ ಎಂದಿದ್ದರೆ, ಬಾಬಾಸಾಹೇಬ ಪಾಟೀಲ, ‘ಸಂಪರ್ಕಿಸಿದ್ದು ನಿಜ. ಆದರೆ, ದುಡ್ಡಿನ ಆಮಿಷ ಒಡ್ಡಿಲ್ಲ’ ಎಂದು ಹೇಳಿದ್ದಾರೆ.
‘ಬಿಜೆಪಿಯವರು ಕಾಂಗ್ರೆಸ್ ಶಾಸಕರ ಖರೀದಿಗೆ ಯತ್ನಿಸುತ್ತಿದ್ದು, ತಲಾ ಒಬ್ಬರಿಗೆ ₹ 50 ಕೋಟಿ ಆಫರ್ ಮಾಡಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಆರೋಪಿಸಿದ್ದರು. ಮುಖ್ಯಮಂತ್ರಿ ಮಾತಿಗೆ ಪೂರಕವಾಗಿ ಶನಿವಾರ ಮಾತನಾಡಿದ್ದ ರವಿಕುಮಾರ್, ‘ಕಾಂಗ್ರೆಸ್ ಶಾಸಕರ ಖರೀದಿಗೆ ₹ 50 ಕೋಟಿ ಅಲ್ಲ, ₹ 100 ಕೋಟಿ ಆಫರ್ ಕೊಡಲಾಗಿದೆ. ನಮ್ಮ ಶಾಸಕರ ಭೇಟಿಗೆ ಸಂಬಂಧಿಸಿದ ಆಡಿಯೊ, ವಿಡಿಯೊ ದಾಖಲೆ ಇದೆ. ಸಮಯ ನೋಡಿ ಬಿಡುಗಡೆ ಮಾಡುತ್ತೇವೆ’ ಎಂದಿದ್ದರು. ಅದೇ ವಿಚಾರವನ್ನು ಸೋಮವಾರ ಪುನರುಚ್ಚರಿಸುವ ಜೊತೆ ಇಬ್ಬರು ಶಾಸಕರ ಹೆಸರನ್ನೂ ಹೇಳಿದ್ದಾರೆ.
ಮಂಡ್ಯ: ‘ಕಾಂಗ್ರೆಸ್ ಸರ್ಕಾರ ಕೆಡವಲು ಬಿಜೆಪಿಯಿಂದ ₹50 ಅಲ್ಲ ₹100 ಕೋಟಿ ಆಫರ್ ಬಂದಿದೆ. ಬಿಜೆಪಿ– ಜೆಡಿಎಸ್‌ನವರು ಕಾಂಗ್ರೆಸ್ ಸರ್ಕಾರ ಬೀಳಿಸುವ ತವಕದಲ್ಲಿದ್ದಾರೆ. ‘ಆಪರೇಷನ್ ಕಮಲ’ಕ್ಕೆ ಸಂಬಂಧಿಸಿದ ಎಲ್ಲ ಸಾಕ್ಷ್ಯಗಳನ್ನು ಶೀಘ್ರದಲ್ಲಿ ಬಿಡುಗಡೆ ಮಾಡುತ್ತೇನೆ’ ಎಂದು ರವಿಕುಮಾರ್ ಹೇಳಿದರು. ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು ‘ನಮ್ಮ ಪಕ್ಷದ 50 ಕಾಂಗ್ರೆಸ್ ಶಾಸಕರಿಗೆ ಹಣದ ಆಮಿಷ ಒಡ್ಡಲಾಗಿದೆ. ₹ 50 ಕೋಟಿಗೆ ಬಗ್ಗಿಲ್ಲವೆಂದು ತಲಾ ₹100 ಕೋಟಿ ಆಫರ್ ನೀಡಿದ್ದಾರೆ. ಬಾಬಾಸಾಹೇಬ ಪಾಟೀಲ ಮತ್ತು ತಮ್ಮಯ್ಯ ಅವರನ್ನು ಏಕೆ ಸಂಪರ್ಕಿಸಿದ್ದರು? ಯಾವ್ಯಾವ ಹೋಟೆಲ್ ವಿಮಾನ ನಿಲ್ದಾಣ ಅತಿಥಿಗೃಹದಲ್ಲಿ ಸಂಪರ್ಕಿಸಿದ್ದಾರೆ ಎಂಬ ಮಾಹಿತಿಯಿದೆ. ಈ ಬಗ್ಗೆ ಆಡಿಯೊ ವಿಡಿಯೊ ಸಿ.ಡಿ ಪೆನ್‌ಡ್ರೈವ್ ಅಷ್ಟೇ ಅಲ್ಲ ಐ ಕ್ಲೌಡ್ ಕೂಡ ಇದೆ’ ಎಂದರು.
ಚಿಕ್ಕಮಗಳೂರು: ‘ಬಿಜೆಪಿಯಿಂದ ಯಾರೂ ನನ್ನನ್ನು ಸಂಪರ್ಕ ಮಾಡಿಲ್ಲ ನನಗೆ ಯಾರೂ ಹಣದ ಆಮಿಷ ಒಡ್ಡಿಲ್ಲ’ ಎಂದು ಕಾಂಗ್ರೆಸ್ ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು. ‘ನಾನು ನಿಷ್ಠಾವಂತ ಕಾಂಗ್ರೆಸ್ ಶಾಸಕ. ರವಿಕುಮಾರ್ ಏನು ಮಾತನಾಡಿದ್ದಾರೆ ನನ್ನ ಹೆಸರು ಏಕೆ ಬಂತು ಗೊತ್ತಿಲ್ಲ. ಅವರನ್ನೇ ಕೇಳಬೇಕು. ಈ ಹಿಂದೆ 18 ವರ್ಷ ಬಿಜೆಪಿಯಲ್ಲಿ ಇದ್ದೆ. ಬಿಜೆಪಿಯವರು ಸಿಕ್ಕಿದಾಗ ಆತ್ಮೀಯವಾಗಿ ಮಾತನಾಡುತ್ತಾರೆ. ಬಿಜೆಪಿ ಸೇರುವಂತೆ ಯಾರೂ ಪ್ರಸ್ತಾಪ ಮಾಡಿಲ್ಲ’ ಎಂದರು.
ಚನ್ನಮ್ಮನ ಕಿತ್ತೂರು (ಬೆಳಗಾವಿ ಜಿಲ್ಲೆ): ‘ಬಿಜೆಪಿಯ ಹಿರಿಯ ನಾಯಕರು ಬಹಳ ದಿನಗಳ ಹಿಂದೆ ಆಪರೇಷನ್ ಕಮಲಕ್ಕಾಗಿ ನನ್ನನ್ನು ಸಂಪರ್ಕಿಸಿದ್ದರು. ನಾನು ಮಾರಾಟಕ್ಕಿಲ್ಲ’ ಎಂದು ಕಾಂಗ್ರೆಸ್‌ನ ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು. ‘ಕಾಂಗ್ರೆಸ್ ಪಕ್ಷಕ್ಕೆ ನನ್ನ ನಿಷ್ಠೆ. ಬೇರೆ ಪಕ್ಷಕ್ಕೆ ಹೋಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಬಿಜೆಪಿ ನಾಯಕರು ಸಂಪರ್ಕಿಸಿದ್ದ ವಿಷಯವನ್ನು ಪಕ್ಷದ ಗಮನಕ್ಕೂ ತಂದಿದ್ದೇನೆ’ ಎಂದರು. ‘ಕಾಂಗ್ರೆಸ್ ಸರ್ಕಾರ ನನ್ನ ಕ್ಷೇತ್ರಕ್ಕೆ ಅನುದಾನ ನೀಡಿದೆ. ಎಲ್ಲ ರೀತಿಯ ಸಹಕಾರವನ್ನು ಪಕ್ಷದ ನಾಯಕರು ನೀಡುತ್ತಿದ್ದಾರೆ. ಕಾಂಗ್ರೆಸ್ ತೊರೆಯುವ ವಿಚಾರವೇ ಬರುವುದಿಲ್ಲ’ ಎಂದರು.
’ ಹುಬ್ಬಳ್ಳಿ: ‘ಕಾಂಗ್ರೆಸ್ ಶಾಸಕರಿಗೆ ₹50 ಕೋಟಿ ₹100 ಕೋಟಿ ₹500 ಕೋಟಿ ಆಫರ್ ಎಂದೆಲ್ಲ ಯಾರು ಮಾತನಾಡಿದ್ದಾರೋ ಅಂತಹವರ ವಿರುದ್ಧ ಭಾರತ ಸರ್ಕಾರ ಕ್ರಮ ಕೈಗೊಳ್ಳಲಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು ‘₹100 ಕೋಟಿ ಆಫರ್ ಕೊಟ್ಟಿದ್ದಾರೆ ಎಂದು ಬಾಯಿ ಮಾತಿನಲ್ಲಿ ಹೇಳಬೇಡಿ. ಬಿಜೆಪಿಯ ಯಾವ ನಾಯಕರು ಆಫರ್ ಕೊಟ್ಟಿದ್ದಾರೆ ಎನ್ನುವುದಕ್ಕೆ ಮೊದಲು ದಾಖಲೆ ನೀಡಿ ನೋಡೋಣ’ ಎಂದು ಸವಾಲು ಹಾಕಿದರು.
‘ಆಫರ್ ಬಗ್ಗೆ ದಾಖಲೆ ಇದ್ದರೆ ಬಿಡುಗಡೆ ಮಾಡಲು ನಿಮ್ಮನ್ನು ಯಾರೂ ತಡೆದಿಲ್ಲ. ಶಾಸಕ ರವಿ ಗಣಿಗ ಅವತ್ತಿನಿಂದ ಹೇಳುತ್ತಿದ್ದಾರೆ ಆದರೆ ಇನ್ನೂ ಏಕೆ ದಾಖಲೆ ಬಿಡುಗಡೆ ಮಾಡುತ್ತಿಲ್ಲ’ ಎಂದು ಪ್ರಶ್ನಿಸಿದರು.
‘ಸಿದ್ದರಾಮಯ್ಯ ಅವರಿಗೆ ಜೆಡಿಎಸ್ ಜತೆ ಸರ್ಕಾರ ರಚನೆ ಇಷ್ಟವಿರಲಿಲ್ಲ. ಹಿಂದೆ ಬಿಜೆಪಿ ಸರ್ಕಾರ ರಚಿಸುವಾಗ ಇದೇ ಸಿದ್ದರಾಮಯ್ಯ ತಮ್ಮ ಆಪ್ತ ಕಾಂಗ್ರೆಸ್ ಶಾಸಕರನ್ನು ಬಿಜೆಪಿಗೆ ಕಳಿಸಿದ್ದರು’ ಎಂದು ಆರೋಪಿಸಿದರು. ‘ಕಳೆದ ಬಾರಿ ಆಪರೇಷನ್ ಕಮಲ ನಡೆಸಲು ರಾಜ್ಯದಲ್ಲಿ ಅತಂತ್ರ ಸ್ಥಿತಿಯತ್ತು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಜನ ಕಾಂಗ್ರೆಸ್‌ಗೆ ಬಹುಮತದ ಅಧಿಕಾರ ಕೊಟ್ಟಿದ್ದಾರೆ. ಐದು ವರ್ಷ ವಿರೋಧ ಪಕ್ಷ ಸ್ಥಾನದಲ್ಲಿ ಇರಲು ಬಿಜೆಪಿ ಸ್ಪಷ್ಟ ನಿಲುವು ತಾಳಿದೆ. ವಿಪಕ್ಷದಲ್ಲಿದ್ದು ಜನಪರವಾಗಿ ರಚನಾತ್ಮಕ ಕಾರ್ಯ ಕೈಗೊಳ್ಳುವಂತೆ ನಮ್ಮ ಹೈಕಮಾಂಡ್ ಸಹ ರಾಜ್ಯ ನಾಯಕರಿಗೆ ನಿರ್ದೇಶನ ನೀಡಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.