ಬೆಂಗಳೂರು: ‘ನೀವು ಕರ್ನಾಟಕದವರಾ? ಯಾವಾಗ್ಲೂ ಆಪರೇಷನ್ನೇ ಅಲ್ವಾ? ಅಲ್ಲಿನ ಮಾಧ್ಯಮಗಳಲ್ಲಿ ಬೇರೆ ಏನಾದ್ರೂ ಬರುತ್ತಾ...?’
– ಮಾಧ್ಯಮಕಾರ್ಯಾಗಾರದಲ್ಲಿ ಪಾಲ್ಗೊಳ್ಳಲು ಈಚೆಗೆ ದೆಹಲಿಗೆ ಹೋಗಿದ್ದ ಕರ್ನಾಟಕದ ಪತ್ರಕರ್ತರು ಎದುರಿಸಿದ ಪ್ರಶ್ನೆ ಇದು. ಎದುರಿಗಿದ್ದ ಆಂಧ್ರ, ಒಡಿಶಾ, ಪಶ್ಚಿಮ ಬಂಗಾಳ ರಾಜ್ಯಗಳಿಂದ ಬಂದಿದ್ದ ಪತ್ರಕರ್ತರಿಗೆ ಇಂಥದ್ದೇ ಮರುಪ್ರಶ್ನೆ ಎಸೆದು, ನಕ್ಕು, ವಾತಾವರಣ ಹಗುರಗೊಳಿಸಿ ಸುಮ್ಮನಾದರೂ ಇಂಥ ಪ್ರಶ್ನೆಗಳು ಅವರ ಮನಸ್ಸಿಗೆ ನಾಟಿದ್ದು ಸುಳ್ಳಲ್ಲ.
‘ಕರ್ನಾಟಕ ಅಂದರೆ ಇಷ್ಟು ದಿನ ಇಲ್ಲಿನಸುವ್ಯವಸ್ಥಿತ ಸಾರಿಗೆ ವ್ಯವಸ್ಥೆ, ಮಾಹಿತಿ ತಂತ್ರಜ್ಞಾನ, ನೀರಾವರಿ, ಯಕ್ಷಗಾನ, ಬಸವಣ್ಣ, ಜ್ಞಾನಪೀಠ ಪುರಸ್ಕೃತ ಸಾಹಿತಿಗಳು... ಹೀಗೆ ಪ್ರಶ್ನೆಗಳೂ ನಿರೀಕ್ಷಿತ ಎನಿಸುವಂತಿರುತ್ತಿದ್ದವು. ಆ ಪ್ರಶ್ನೆಗೆ ಉತ್ತರಿಸುವಾಗಲೂ ಕನ್ನಡಿಗರಿಗೆ ಹೆಮ್ಮೆ ಎನಿಸುತ್ತಿತ್ತು. ಅದರೆ ಈಗ ಅಂಥ ಪರಿಸ್ಥಿತಿ ಇಲ್ಲ’ ಎನ್ನುವುದು ಹಲವರ ವಿಷಾದ.
‘ಎಲ್ಲಿಗೆ ಬಂತು ನಿಮ್ಮಕರ್–ನಾಟಕ?ಯಡ್–ಯೂರಪ್ಪ, ಸಿದ್–ರಾಮಯ್ಯ ಏನು ಮಾಡ್ತಿದ್ದಾರೆ’ ಎನ್ನುವ ವ್ಯಂಗ್ಯದ ಪ್ರಶ್ನೆಗಳನ್ನು ಅನಿವಾಸಿ ಕನ್ನಡಿಗರು ಕೇಳಿಕೇಳಿ ಬೇಸತ್ತು ಹೋಗಿದ್ದಾರೆ.ರಾಜಕಾರಣಿಗಳ ರೆಸಾರ್ಟ್ ರಾಜಕಾರಣದಿಂದ ಪ್ರವಾಸಿತಾಣಗಳ ಬೀಡು ಎಂದು ಗುರುತಿಸುತ್ತಿದ್ದ ಕರ್ನಾಟಕವನ್ನು, ಈಗ ‘ಆಪರೇಷನ್ ರಾಜಕಾರಣ’ದ ಕೇಂದ್ರವೆಂದು ಕರೆಯಲಾಗುತ್ತಿದೆ.
2018ರಲ್ಲಿ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 105 ಸ್ಥಾನಗಳನ್ನು ಗೆದ್ದು, ಸರ್ಕಾರ ರಚಿಸುವ ಕನವರಿಕೆ ಮಾಡುತ್ತಿರುವಾಗಲೇ, 78 ಸ್ಥಾನಗಳನ್ನು ಪಡೆದಿದ್ದ ಕಾಂಗ್ರೆಸ್, 37 ಸ್ಥಾನ ಗೆದ್ದಿದ್ದ ಜೆಡಿಎಸ್ ಮತ್ತು ಬಿಎಸ್‌ಪಿ, ಕೆಪಿಜೆಪಿಯ ಶಾಸಕರನ್ನು ಸೇರಿಸಿಕೊಂಡು ಮೈತ್ರಿ ಸರ್ಕಾರವನ್ನು ರಚಿಸಿತು.ಮೇ 23ರಂದು ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಎಚ್.ಡಿ. ಕುಮಾರಸ್ವಾಮಿ ಪ್ರಮಾಣವಚನ ಸ್ವೀಕರಿಸಿದರು.
ಬಿಜೆಪಿ ಅಧಿಕಾರಕ್ಕಾಗಿ ಹವಣಿಸುತ್ತಲೇ ಇತ್ತು. ರಚನೆಗೊಂಡ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಸಾಕಷ್ಟು ಕಾರ್ಯತಂತ್ರ ರೂಪಿಸಿತು.ಗುಟ್ಟಾಗಿ ನಡೆದಕುದುರೆ ವ್ಯಾಪಾರದ ಆಡಿಯೊ ಟೇಪ್‌ಗಳುಬಹಿರಂಗವಾಗಿ ರಾಜ್ಯದ ಮಾನ ಹರಾಜಾಯಿತು. ಹೀಗಿದ್ದರೂ ಆ ವ್ಯಾಪಾರ ಮಾತ್ರ ನಿಂತಿಲ್ಲ.
ಸರ್ಕಾರ ರಚನೆಯಾಗಿ ಕೆಲವೇ ತಿಂಗಳಲ್ಲಿಯೇ ಶಾಸಕರ ಬಂಡಾಯ ಶುರುವಾಯಿತು. ತಕ್ಕಡಿಗೆ ಹಾಕಿದ ಕಪ್ಪೆಯಂತೆ ಆಡುತ್ತಿದ್ದ ಮೈತ್ರಿ ಸರ್ಕಾರದ ಶಾಸಕರನ್ನು ನಿಭಾಯಿಸುವುದಲ್ಲಿಯೇ ಮುಳುಗಿದ ಸರ್ಕಾರದ ಚುಕ್ಕಾಣಿ ಹಿಡಿದ ನಾಯಕರಿಗೆ ಆಡಳಿತದ ಕಡೆಗೆ ಗಮನ ಕೊಡಲು ಅದೆಷ್ಟು ಕಾಲಾವಕಾಶ ಸಿಕ್ಕಿತೋ?
₹40 ಕೋಟಿ ಆಮಿಷ ಒಡ್ಡಿದ್ದ ಯಡಿಯೂರಪ್ಪ
‘ನಿಮ್ಮ ತಂದೆ ಬಿಜೆಪಿಗೆ ಬೆಂಬಲಿಸಿದರೆ ಮುಂದಿನ ಚುನಾವಣೆಗೆ ಅಗತ್ಯವಿರುವ ಎಲ್ಲ ಖರ್ಚು ನಾವು ನೋಡಿಕೊಳ್ಳುತ್ತೇವೆ. ಈಗಲೇ ಮುಂಬೈಗೆ ತೆರಳಿ ಅಲ್ಲಿ ಹಣಕಾಸಿನ ವ್ಯವಹಾರವನ್ನು ಪಕ್ಕಾ ಮಾಡಿಕೊಳ್ಳಬಹುದು. ₹40 ಕೋಟಿ ಸಿದ್ಧವಿದೆ‘ ಎಂದುಶರಣಗೌಡ ಪಾಟೀಲ್ ಅವರಿಗೆ ಯಡಿಯೂರಪ್ಪ ಮಾಡಿದ್ದ ಫೋನ್ ಕರೆಯ ಆಡಿಯೊ ‘ಆಪರೇಷನ್’ ಕಮಲ ನಡೆಯುತ್ತಿರುವುದಕ್ಕೆ ಸಾಕ್ಷಿಯಾಗಿತ್ತು. ಇದಕ್ಕೆ ಪ್ರತಿಯಾಗಿ ನಾವೂ ಆಪರೇಷನ್ ಮಾಡುತ್ತೇವೆ ಎಂದು ಜೆಡಿಎಸ್–ಕಾಂಗ್ರೆಸ್‌ನ ಹಿರಿಯ ಮುಖಂಡರು ಬಹಿರಂಗವಾಗಿ ಹೇಳಿಕೆಯನ್ನೇ ಕೊಟ್ಟಿದ್ದಾರೆ. ಒಳಗೊಳಗೆ ಅದಕ್ಕೆ ಕಾರ್ಯತಂತ್ರ ನಡೆದೇ ನಡೆದಿರುತ್ತದೆ.
ಈ ಹಿಂದೆ ರಾಜಕಾರಣ ಎಂದರೆ ಜನಸೇವೆ ಎನ್ನುವ ಭಾವನೆ ಬರುತ್ತಿತ್ತು. ಆದರೆ, ಈಗ ರಾಜಕೀಯ ಎನ್ನುವುದು ಹಣ ಮಾಡುವ ಉದ್ಯಮವಾಗಿದೆ. ಮತ ಮಾರಾಟದ ವಸ್ತುವಾಗಿ ದಶಕಗಳೇ ಕಳೆದಿವೆ. ಅಭ್ಯರ್ಥಿಯ ಗೆಲುವಿಗೆ ದಕ್ಷತೆ, ಅನುಭವ, ಹೋರಾಟದ ಮನೋಭಾವ, ಸಾಮಾಜಿಕ ಕಳಕಳಿಗಳು ಮಾನದಂಡವಾಗುವ ಬದಲು, ಜಾತಿ ಬೆಂಬಲ ಮತ್ತು ದುಡ್ಡುಪ್ರಾಮುಖ್ಯತೆ ಪಡೆದಿದೆ.ಹಣ ಹೂಡಿ ಹಣ ವಸೂಲಿ ಮಾಡಲೆಂದೇ ಚುನಾವಣೆಗೆ ನಿಲ್ಲುತ್ತಿರುವ ಶಾಸಕರು, ಅದಕ್ಕಾಗಿ ಏನೂ ಬೇಕಾದರೂ ಮಾಡುತ್ತಾವೆ ಎನ್ನುವುದನ್ನು ರಾಜೀನಾಮೆ ಬೃಹನ್ನಾಟಕದ ಮೂಲಕ ನಿರೂಪಿಸುತ್ತಿದ್ದಾರೆ.
ಸಚಿವ ಸ್ಥಾನಕ್ಕೆ, ನಿಗಮ ಮಂಡಳಿ ಸ್ಥಾನಕ್ಕೆ ಹಣದ ಹೊಳೆಯನ್ನೇ ಹರಿಸಿ ಪೈಪೋಟಿಗೆ ನಿಲ್ಲುತ್ತಾರೆ. ಅದು ದೊರೆಯದಿದ್ದರೆ ರಾಜೀನಾಮೆ ಎನ್ನುವ ಬ್ಲಾಕ್‌ಮೇಲ್ ತಂತ್ರವನ್ನು ಬಳಸಿ ಅದನ್ನು ಪಡೆದುಕೊಳ್ಳಲೂ ಹಿಂಜರಿಯುವುದಿಲ್ಲ. ‘ನೀವು ನನಗೆ ಸಚಿವ ಸ್ಥಾನ ಕೊಡುವುದಿಲ್ಲವೊ, ಸರಿ ಹಾಗಾದರೆ ನಾನು ಬೇರೆ ಪಕ್ಷಕ್ಕೆ ಹೋಗುತ್ತೇನೆ’ ಎನ್ನುವ ದಾಳವೂ ಅವರ ಬಳಿ ಇದೆ.
ವರ್ಷದಿಂದ ನಡೆಯುತ್ತಿರುವ ಈ ರಾಜೀನಾಮೆಯನಾಟಕಕ್ಕೆಪರದೆ ಎಳೆವ ಹಂತಕ್ಕೆ ಬಂದಿದೆ ಎನ್ನುವ ವಾತಾವರಣ ರಾಜ್ಯದಲ್ಲಿ ಮೂಡಿದೆ.ಎರಡು ದಿನಗಳಿಂದ ದೇಶದ ಎಲ್ಲಾ ಪತ್ರಿಕೆಗಳಲ್ಲಿ ರಾಜ್ಯ ರಾಜಕಾರಣವೇಪ್ರಮುಖ ಸುದ್ದಿಯಾಗುತ್ತಿದೆ. ಕರ್ನಾಟಕದ ರೆಸಾರ್ಟ್‌ಗಳಿಗೆ ಹೋಗುತ್ತಿದ್ದ ರಾಜಕಾರಣಿಗಳು ಈಗ ಮುಂಬೈ, ದೆಹಲಿಯಲ್ಲಿನ ಐಶಾರಾಮಿ ರೆಸಾರ್ಟ್‌ಗಳಲ್ಲಿ ವಾಸ್ತವ್ಯ ಹೂಡುತ್ತಿದ್ದಾರೆ.
ರಾಷ್ಟ್ರೀಯ ಸುದ್ದಿ ಮಾಧ್ಯಮಗಳಲ್ಲಿ ಕರ್ನಾಟಕ ರಾಜ್ಯವನ್ನು ‘ಕರ್–ನಾಟಕ’ ಎಂದೇ ಇಲ್ಲಿನ ರಾಜಕೀಯ ದುರಂತವನ್ನು ಪನ್ ಮಾಡಲು ಬಳಸುವುದರಿಂದ ರಾಜ್ಯದ ಜನರಿಗೆ ಮುಜುಗರ ಉಂಟಾಗುತ್ತಿದೆ. ಇದರಿಂದ ದೇಶದ ಬೇರೆ ಬೇರೆ ಭಾಗಗಳಲ್ಲಿ ಕರ್ನಾಟಕದವರು ಎಂದಾಕ್ಷಣ ಇಲ್ಲಿನ ಊಟ, ಪ್ರೇಕ್ಷಣಿಯ ಸ್ಥಳ, ಆತಿಥ್ಯದ ಬಗ್ಗೆ ಕೇಳುತ್ತಿದ್ದವರು ಈಗ ರೆಸಾರ್ಟ್ ರಾಜಕಾರಣದ ಬಗ್ಗೆಯೇ ವಿಚಾರಿಸುತ್ತಾರೆ.ಇಷ್ಟರ ಮಟ್ಟಿಗೆ ರಾಜ್ಯದ ಮಾನ ಹರಾಜು ಹಾಕುವುದರಲ್ಲಿ ನಮ್ಮ ಶಾಸಕರು ಯಶಸ್ವಿಯಾಗಿದ್ದಾರೆ.
ನಮ್ಮನಾಳುವ ದಣಿಗಳು ಇನ್ನಾದರೂ ರಾಜ್ಯದ ಮಾನ ಹರಾಜಾಗುತ್ತಿರುವ ಬಗ್ಗೆ ಆಲೋಚಿಸಿಯಾರೆ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.