ADVERTISEMENT

ಕಾರ್ಖಾನೆ: ಕೆಲಸದ ಅವಧಿ ಹೆಚ್ಚಳಕ್ಕೆ ಸ್ವಪಕ್ಷೀಯರಿಂದಲೇ ವಿರೋಧ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2023, 22:15 IST
Last Updated 24 ಫೆಬ್ರುವರಿ 2023, 22:15 IST
   

ಬೆಂಗಳೂರು: ಕಾರ್ಖಾನೆಗಳಲ್ಲಿ ಕೆಲಸದ ಅವಧಿಯನ್ನು 12 ಗಂಟೆಗಳಿಗೆ ಹೆಚ್ಚಿಸಿರುವ, ಮಹಿಳೆಯರಿಗೆ ರಾತ್ರಿಪಾಳಿ ಕೆಲಸಕ್ಕೆ ಅನುವು ಮಾಡಿಕೊಟ್ಟಿರುವ ‘ಕಾರ್ಖಾನೆಗಳ (ಕರ್ನಾಟಕ ತಿದ್ದುಪಡಿ) ಮಸೂದೆ–2023’ಗೆ ಆಡಳಿತ ಪಕ್ಷದ ಆಯನೂರು ಮಂಜುನಾಥ್‌, ತೇಜಸ್ವಿನಿ ಗೌಡ ವಿರೋಧ ವ್ಯಕ್ತಪಡಿಸಿದರು.

ವಿಧಾನಸಭೆಯಲ್ಲಿ ಅಂಗೀಕಾರ ಗೊಂಡ ಮಸೂದೆಯನ್ನು ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಶುಕ್ರವಾರ ವಿಧಾನ ಪರಿಷತ್‌
ನಲ್ಲಿ ಮಂಡಿಸಿದ ನಂತರ ನಡೆದ ಚರ್ಚೆಯಲ್ಲಿ ಮಾತನಾಡಿದ ಆಯನೂರು, ಬಡವರನ್ನು ಶೋಷಿಸುವ, ಮಾನವೀಯತೆಗೆ ವಿರುದ್ಧವಾದ ಮಸೂದೆಯ ಅಂಗೀ ಕಾರಕ್ಕೆ ಅವಸರ ಬೇಡ, ಸಾಕಷ್ಟು ಚರ್ಚಿಸಿದ ನಂತರ ಕೆಲ ಬದಲಾವಣೆಗಳನ್ನು ಮಾಡಬಹುದು ಎಂದು ಸಲಹೆ
ನೀಡಿದರು.

ಉದ್ಯಮಿಗಳಿಗೆ, ಐಟಿ,ಬಿಟಿ ಕಂಪನಿ ಗಳಿಗೆ ಅನುಕೂಲ ಮಾಡಿಕೊಡಲು ಮಸೂದೆ ಮಂಡಿಸಲಾಗಿದೆ. ಒಬ್ಬ ಕಾರ್ಮಿಕ ನಿರಂತರವಾಗಿ 12 ಗಂಟೆ ಕೆಲಸ ಮಾಡಿದರೆ ಕೌಶಲ ಅಭಿವೃದ್ಧಿಯಾಗುತ್ತದೆಯೇ? ಅಸಂಘಟಿತ ವಲಯದ 1.30 ಕೋಟಿ ಸೇರಿ ರಾಜ್ಯದಲ್ಲಿ ಸುಮಾರು 2 ಕೋಟಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಅವರ ಬೆವರಿಗೆ ಗೌವರ ನೀಡಬೇಕು ಎಂದರು.

ADVERTISEMENT

ಬಿಜೆಪಿಯ ತೇಜಸ್ವಿನಿ ಗೌಡ, ‘ದುಡಿಯುವ ಮಹಿಳೆಯರ ಸುರಕ್ಷತೆಗೆ ಈ ಕಾಯ್ದೆ ಒತ್ತು ನೀಡಿಲ್ಲ. ಕುಟುಂಬ, ಕೆಲಸದ ಮಧ್ಯೆ ಮಹಿಳೆ ತನ್ನ ಮಕ್ಕಳನ್ನು ಸೇರುವುದು, ಆರೋಗ್ಯ ಕಾಪಾಡಿಕೊಳ್ಳುವುದು ಸವಾಲಿನ ಕೆಲಸ. ರಾತ್ರಿಪಾಳಿ ಕೆಲಸ ಅಂತಹ ಅವಕಾಶಗಳಿಂದ ಮಹಿಳೆಯನ್ನು ವಂಚಿತಗೊಳಿಸಬಹುದು’ ಎಂದು ಬೇಸರ ವ್ಯಕ್ತಪಡಿಸಿದರು.

ಮಸೂದೆ ವಿರೋಧಿಸಿ ಆಯನೂರು ಮಂಜುನಾಥ್‌ ಹಾಗೂ ಕಾಂಗ್ರೆಸ್, ಜೆಡಿಎಸ್‌ ಸದಸ್ಯರ ಸಭಾತ್ಯಾಗ ಮಾಡಿದರು. ಬಳಿಕ ಮಸೂದೆಗೆ ಅಂಗೀಕಾರ ನೀಡಲಾಯಿತು.

ಐದು ಮಸೂದೆಗಳಿಗೆ ಒಪ್ಪಿಗೆ

ಕರ್ನಾಟಕ ಧನ ವಿನಿಯೋಗ ಮಸೂದೆ–2023 ಸೇರಿ ಐದು ಮಸೂದೆಗಳಿಗೆ ವಿಧಾನ ಪರಿಷತ್‌ ಶುಕ್ರವಾರ ಒಪ್ಪಿಗೆ ನೀಡಿತು.

ಕರ್ನಾಟಕ ಧನವಿನಿಯೋಗ ಮಸೂದೆ, ಧನವಿನಿಯೋಗ ಲೇಖಾನುದಾನ ಮಸೂದೆ, ಕರ್ನಾಟಕ ವೃತ್ತಿಗಳ ಕಸುಬುಗಳ, ಆಜೀವಿಕೆಗಳ ಮತ್ತು ಉದ್ಯೋಗಗಳ ಮೇಲಣ ತೆರಿಗೆ (ತಿದ್ದುಪಡಿ), ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ತಿದ್ದುಪಡಿ) ಮಸೂದೆ, ಕಾರ್ಖಾನೆಗಳ ಮಸೂದೆಯನ್ನು ಅಂಗೀಕರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.