ಶಿರಸಿ: ಶಿವಮೊಗ್ಗ ಜಿಲ್ಲೆಯ ಶರಾವತಿ ಅಭಯಾರಣ್ಯಕ್ಕೆ ಕೆನರಾ ವೃತ್ತ ವ್ಯಾಪ್ತಿಯ ಅಘನಾಶಿನಿ ಸಂರಕ್ಷಿತ ಪ್ರದೇಶವನ್ನು ಸೇರ್ಪಡೆಗೊಳಿಸಲು ರಾಜ್ಯ ವನ್ಯಜೀವಿ ಮಂಡಳಿ ಸಿದ್ಧತೆ ನಡೆಸಿದೆ ಎಂಬ ಸಂಗತಿಯನ್ನು ಬಹಿರಂಗಗೊಳಿಸಿರುವ ವೃಕ್ಷಲಕ್ಷ ಆಂದೋಲನ ಸಂಘಟನೆಯು, ಈ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ.
ರಾಜ್ಯದಲ್ಲಿ ಚುನಾವಣೆಯ ಕಾವು ಜೋರಾಗಿರುವ ಸಂದರ್ಭದಲ್ಲಿ ನಾಲ್ಕು ತಿಂಗಳುಗಳ ಹಿಂದೆ ಸಭೆ ಸೇರಿದ್ದ ಅರಣ್ಯ ಇಲಾಖೆ ವನ್ಯಜೀವಿ ವಿಭಾಗವು, ಉತ್ತರ ಕನ್ನಡ ಜಿಲ್ಲೆಯ ಅರಣ್ಯವನ್ನು ಶಿವಮೊಗ್ಗ ಅರಣ್ಯ ಇಲಾಖೆಗೆ ಸೇರ್ಪಡೆಗೊಳಿಸುವ ಸಂಬಂಧ ಪ್ರಸ್ತಾವ ಸಿದ್ಧಪಡಿಸಿದೆ. ಕಳೆದ ಜನವರಿ 9ರಂದು ಮುಖ್ಯಮಂತ್ರಿ, ರಾಜ್ಯ ವನ್ಯಜೀವಿ ಮಂಡಳಿ ಅಧ್ಯಕ್ಷ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶರಾವತಿ ಅಭಯಾರಣ್ಯಕ್ಕೆ ಕೆನರಾ ವೃತ್ತದ ಅಘನಾಶಿನಿ ಕಣಿವೆಯ 30ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶ ಸೇರ್ಪಡೆ ಮಾಡುವ ಈ ಪ್ರಸ್ತಾವಕ್ಕೆ ಅನುಮೋದನೆ ಪಡೆಯಲಾಗಿದೆ. ನಂತರದ ಎಲ್ಲ ತಾಂತ್ರಿಕ ಕ್ರಮಗಳನ್ನು ನಿರ್ವಹಿಸಿರುವ ಅಧಿಕಾರಿಗಳು, ಅಧಿಕೃತ ಸರ್ಕಾರಿ ಆದೇಶ ಹೊರಡಿಸಲು ಸಿದ್ಧರಾಗಿದ್ದಾರೆ ಎಂದು ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಅಶೀಸರ ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
2012ರಲ್ಲಿ ಪಶ್ಚಿಮಘಟ್ಟ ಕಾರ್ಯಪಡೆಯ ಶಿಫಾರಸ್ಸಿನಂತೆ ಅಘನಾಶಿನಿ ಪ್ರದೇಶವನ್ನು ‘ಸಿಂಗಳೀಕ ಸಂರಕ್ಷಿತ ಪ್ರದೇಶ’ ಎಂದು ವನ್ಯಜೀವಿ ಕಾಯ್ದೆ ಅಡಿಯಲ್ಲಿ ಘೋಷಿಸಲಾಗಿತ್ತು. ಆಗ ಸ್ಥಳೀಯರ ಅವಹಾಲು ಸ್ವೀಕರಿಸಿದ ನಂತರವೇ ಈ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ, ಈಗ ಸ್ಥಳೀಯರು, ಜನಪ್ರತಿನಿಧಿಗಳು, ಪರಿಸರ, ವನ್ಯಜೀವಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸದೇ ಏಕಪಕ್ಷೀಯ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ ಎಂದು ಅವರು ಆಕ್ಷೇಪಿಸಿದ್ದಾರೆ.
ಅಘನಾಶಿನಿ ಕಣಿವೆಯಲ್ಲಿ ನೂರಾರು ಹಳ್ಳಿಗಳಿವೆ. ಸಂರಕ್ಷಿತ ಪ್ರದೇಶವು ಕತ್ತಲೆಕಾನು, ಸಿಂಗಳೀಕ ಪ್ರದೇಶ, ಉಂಚಳ್ಳಿ ಜಲಪಾತ, ಬೆಣ್ಣೆ ಹೊಳೆ, ರಾಂಪತ್ರೆ ಜಡ್ಡಿ ಮೊದಲಾದ ಸಸ್ಯ ವೈವಿಧ್ಯ ಹೊಂದಿದೆ. ಜನರ ಸಹಭಾಗಿತ್ವದಲ್ಲಿ ಅಘನಾಶಿನಿ ಸಂರಕ್ಷಿತ ಪ್ರದೇಶದ ನಿರ್ವಹಣೆ ಉತ್ತಮವಾಗಿದೆ. ಈಗ ಏಕಾಏಕಿ ಶರಾವತಿ ಅಭಯಾರಣ್ಯಕ್ಕೆ ಅಘನಾಶಿನಿ ಕಣಿವೆಯನ್ನು ಸೇರ್ಪಡೆ ಮಾಡುವ ಕ್ರಮ ಸಾಧುವಲ್ಲ. ಆಡಳಿತಾತ್ಮಕ ಮತ್ತು ಭೌಗೋಳಿಕವಾಗಿ ಉತ್ತರ ಕನ್ನಡ ಮತ್ತು ಶಿವಮೊಗ್ಗ ಸಾಕಷ್ಟು ಭಿನ್ನತೆ ಹೊಂದಿವೆ. ಶಿವಮೊಗ್ಗದಲ್ಲಿರುವ ವನ್ಯಜೀವಿ ವಿಭಾಗದ ಕಚೇರಿಯು ಸಂಪರ್ಕಕ್ಕೆ ದೂರವಾಗುತ್ತದೆ. ಹೀಗಾಗಿ, ಶರಾವತಿ ಅಭಯಾರಣ್ಯಕ್ಕೆ ಅಘನಾಶಿನಿ ಕಣಿವೆ ಅರಣ್ಯವನ್ನು ಸೇರ್ಪಡೆ ಮಾಡಬಾರದು. ಈ ಕಣೆವೆಯನ್ನು ಅಘನಾಶಿನಿ ಸಿಂಗಳೀಕ ಸಂರಕ್ಷಿತ ಪ್ರದೇಶ ಎಂಬುದಾಗೇ ಮುಂದುವರಿಸಬೇಕು ಎಂದು ಪರಿಸರ ವಿಜ್ಞಾನಿಗಳಾದ ಡಾ. ಟಿ.ವಿ.ರಾಮಚಂದ್ರ, ಡಾ.ಕೇಶವ ಕೊರ್ಸೆ ಒತ್ತಾಯಿಸಿದ್ದಾರೆ.
ವನ್ಯಜೀವಿ ತಜ್ಞ ಬಾಲಚಂದ್ರ ಸಾಯಿಮನೆ ಅವರು ರಾಜ್ಯ ವನ್ಯಜೀವಿ ವಾರ್ಡನ್ ಅವರಿಗೆ ಪತ್ರ ಬರೆದು ಗಮನ ಸೆಳೆದಿದ್ದಾರೆ. ಸರ್ಕಾರದ ನಿರ್ಧಾರವನ್ನು ವಿರೋಧಿಸಿ, ಪರಿಸರ, ವನ್ಯಜೀವಿ ಕಾರ್ಯಕರ್ತರು ಜೂನ್ 11ರಂದು ಕೆನರಾ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಮನವಿ ಸಲ್ಲಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.