ADVERTISEMENT

ಸಿದ್ದರಾಮಯ್ಯ ಸರ್ಕಾರದಲ್ಲಿ 'ಎಣ್ಣೆ' ಅಂಗಡಿ ನೋಡಿದರೂ ಕಿಕ್: ಅಶೋಕ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 29 ಜೂನ್ 2024, 12:17 IST
Last Updated 29 ಜೂನ್ 2024, 12:17 IST
   

ಚಿಕ್ಕಬಳ್ಳಾಪುರ: ನೂತನ ಸಂಸದ ಡಾ.ಕೆ.ಸುಧಾಕರ್‌ಗೆ ನಗರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಶನಿವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಎರಡೂ ಪಕ್ಷಗಳ ರಾಜ್ಯ ನಾಯಕರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. 

ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಮಾತನಾಡಿ, ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ತೈಲ ಬೆಲೆಯನ್ನು ಲೀಟರ್‌ಗೆ ₹1 ಹೆಚ್ಚಿಸಿದೆವು. ಆಗ ಬೈಕ್‌ಗಳನ್ನು ಹೆಣ ಹೊತ್ತಂತೆ ಹೊತ್ತು ಪ್ರತಿಭಟಿಸಿದರು. ನಾನು ಮುಖ್ಯಮಂತ್ರಿಯಾದರೆ ತೈಲ ದರ ಹೆಚ್ಚಿಸುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು. ಈಗ ಕಾಂಗ್ರೆಸ್ ಸರ್ಕಾರ ₹3 ಹೆಚ್ಚಳ ಮಾಡಿದೆ. ಸಿದ್ದರಾಮಯ್ಯ ಅವರಿಗೆ ಎರಡು ನಾಲಿಗೆ ಎಂದು ಟೀಕಿಸಿದರು. 

ಎಲ್ಲದಕ್ಕೂ ಕೇಂದ್ರ ಸರ್ಕಾರವನ್ನು ದೂಷಿಸುವರು. ಕೇಂದ್ರ ಸರ್ಕಾರವೇನು ಇವರ ಅತ್ತೆ ಮನೆಯೇ?  9 ತಿಂಗಳಿನಿಂದ ರೈತರಿಗೆ ಹಾಲಿನ ಪ್ರೋತ್ಸಾಹ ಧನ ನೀಡಿಲ್ಲ. ಹಾಲಿನ ದರ, ತೈಲ ಬೆಲೆ ಹೆಚ್ಚಿಸಿದ್ದಾರೆ. 50 ಎಂಎಲ್ ಹೆಚ್ಚು ಹಾಲು ನೀಡಿ ಎಂದು ಯಾರಾದರೂ ಸಿದ್ದರಾಮಯ್ಯ ಅವರಿಗೆ ಅರ್ಜಿ ನೀಡಿದ್ದರಾ ಎಂದು ಪ್ರಶ್ನಿಸಿದರು.

ADVERTISEMENT

ಸಾಮಾನ್ಯ ಜನರು, ಬಡವರು, ಕೂಲಿ ಕಾರ್ಮಿಕರು ದುಡಿಮೆ ಮಾಡಿ ನಿತ್ಯ 180 ಎಂಎಲ್ ಮದ್ಯ (ಒಂದು ಕ್ವಾಟರ್) ಮದ್ಯ ಸೇವಿಸುತ್ತಿದ್ದರು. ಎಣ್ಣೆ (ಮದ್ಯ) ಹೊಡೆದು ಕಿಕ್ ಪಡೆಯುತ್ತಿದ್ದರು. ಆದರೆ ಸಿದ್ದರಾಮಯ್ಯ ಸರ್ಕಾರ ಮತ್ತೆ ಮದ್ಯದ ಬೆಲೆ ಹೆಚ್ಚಳ ಮಾಡಲು ಮುಂದಾಗಿದೆ. ಈಗ ಎಣ್ಣೆ ಅಂಗಡಿಗಳನ್ನು ನೋಡಿದರೆಯೇ ಕಿಕ್ ಹೊಡೆದಂತೆ ಆಗುತ್ತದೆ ಎಂದು ವ್ಯಂಗ್ಯವಾಡಿದರು.

ಒಂದು ಕ್ವಾಟರ್ ಎಣ್ಣೆ (ಮದ್ಯ) ಬೆಲೆಯು ₹80 ಹೆಚ್ಚಿದೆ. ನಿತ್ಯ ಒಂದು ಕ್ವಾಟರ್ ಕುಡಿದರೂ ತಿಂಗಳಿಗೆ ₹2,400 ಹೆಚ್ಚಳವಾಯಿತು. ಗಂಡಮ ತಲೆ ಹೊಡೆದು ಹೆಂಡತಿಗೆ ಕೊಡುತ್ತಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.