ADVERTISEMENT

ಕೃಷಿ ಕಾರ್ಮಿಕರ ಗುಳೆ | ಕಾಂಗ್ರೆಸ್‌ ಸರ್ಕಾರದ ಆರನೇ ಗ್ಯಾರಂಟಿ: ಆರ್‌. ಅಶೋಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಮಾರ್ಚ್ 2024, 12:30 IST
Last Updated 4 ಮಾರ್ಚ್ 2024, 12:30 IST
ಆರ್‌. ಅಶೋಕ
ಆರ್‌. ಅಶೋಕ    

ಬೆಂಗಳೂರು: ಕಾಂಗ್ರೆಸ್‌ ಗ್ಯಾರಂಟಿಗಳ ವಿರುದ್ಧ ವಾಗ್ದಾಳಿ ನಡೆಸಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ, ಕೃಷಿ ಕಾರ್ಮಿಕರು ಗುಳೆ ಹೊರಟಿರುವುದು ಕಾಂಗ್ರೆಸ್‌ನ ಆರನೇ ಗ್ಯಾರಂಟಿಯಾಗಿದೆ ಎಂದು ಟೀಕಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಅವರು, ತಮ್ಮ ಸರ್ಕಾರದ ಗ್ಯಾರಂಟಿಗಳಿಂದ ಬಡವರ ಬದುಕು ಹಸನಾಗಿದೆ, ಬಡತನ ನಿರ್ಮೂಲನೆ ಆಗಿದೆ ಎಂದು ಸಿಎಂ ಸಿದ್ದರಾಮಯ್ಯ ಬೊಗಳೆ ಬಿಡುತ್ತಾರೆ. ನಿಜವಾಗಿಯೂ ಗ್ಯಾರಂಟಿಗಳಿಂದ ಬಡವರ ಕಷ್ಟ ಪರಿಹಾರ ಆಗಿದ್ದಿದ್ದರೆ, ಇವತ್ತು ಹೊಟ್ಟೆಪಾಡಿಗಾಗಿ ಗ್ರಾಮ ಗ್ರಾಮಗಳೇ ಗುಳೆ ಹೋಗುವ ಪರಿಸ್ಥಿತಿ ಯಾಕೆ ಬರುತ್ತಿತ್ತು ಎಂದು ಪ್ರಶ್ನಿಸಿದ್ದಾರೆ.

ಗ್ಯಾರಂಟಿಗಳು ನಿಮ್ಮ ಪಕ್ಷವನ್ನು (ಕಾಂಗ್ರೆಸ್‌) ಚುನಾವಣೆಯಲ್ಲಿ ಗೆಲ್ಲಿಸಿತೇ ಹೊರತು, ಜನರ ಬದುಕನ್ನು ಖಂಡಿತ ಗೆಲ್ಲಿಸಲಿಲ್ಲ. ಜನರ ಬದುಕನ್ನು ಗೆಲ್ಲಿಸಲು ಬೇಕಿರುವುದು ದೂರದೃಷ್ಟಿಯುಳ್ಳ, ಶಾಶ್ವತವಾದ ಅಭಿವೃದ್ಧಿ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಗುಣಮಟ್ಟದ ಶಿಕ್ಷಣ, ಆರೋಗ್ಯ, ಮೂಲಸೌಕರ್ಯ, ಕೈಗಾರಿಕೆಗಳ ಸ್ಥಾಪನೆ, ಯುವಕರಿಗೆ ಉದ್ಯೋಗ ಸೃಷ್ಠಿ, ಮಹಿಳೆಯರ ಸಬಲೀಕರಣ ಇವುಗಳು ಬಡವರ ಬದುಕನ್ನು ನಿಜವಾಗಿಯೂ ಗೆಲ್ಲಿಸಬಲ್ಲ ಗ್ಯಾರಂಟಿಗಳಾಗಿವೆ. ಈಗಲಾದರೂ ಗ್ಯಾರಂಟಿಗಳ ಗುಂಗಿನಿಂದ ಸ್ವಲ್ಪ ಹೊರಬಂದು ರಾಜ್ಯದ ಅಭಿವೃದ್ಧಿ ಕಡೆ ಗಮನ ಹರಿಸಿ. ಕರ್ನಾಟಕದ ಜನರಿಗೆ ಅಭಿವೃದ್ಧಿಯ ಗ್ಯಾರಂಟಿ ಕೊಡಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.